×
Ad

ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಲು ಎಡಿಸಿ ಕರೆ

Update: 2025-10-31 19:11 IST

ಮಂಗಳೂರು, ಅ.31: ಲಸಿಕಾ ಅಭಿಯಾನದಲ್ಲಿ ಎಲ್ಲಾ ಜಾನುವಾರು ಮಾಲಕರು ತಮ್ಮ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕೆಯನ್ನು ಹಾಕಿಸಿ ದೇಶವನ್ನು ಕಾಲು ಬಾಯಿ ಜ್ವರ ರೋಗದಿಂದ ಮುಕ್ತಗೊಳಿಸಬೇಕು ಎಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ ರಾಜು ಕೆ. ಹೇಳಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ 8ನೇ ಸುತ್ತಿನ ಕಾಲು ಬಾಯಿ ಜ್ವರದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 8ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವು ನ.3ರಿಂದ ಪ್ರಾರಂಭವಾಗಲಿದೆ. ಕಾಲು ಬಾಯಿ ಜ್ವರ ದನ, ಎಮ್ಮೆ, ಹಂದಿ, ಕುರಿ, ಮೇಕೆ ಹಾಗೂ ಕಾಡು ಪ್ರಾಣಿಗಳಾದ ಜಿಂಕೆ, ಕಾಡೆಮ್ಮೆ ಮುಂತಾದ ಪ್ರಾಣಿಗಳಿಗೆ ವೈರಾಣುವಿನಿಂದ ಬರುವ ಸಾಂಕ್ರಾಮಿಕ ಖಾಯಿಲೆಯಾಗಿದೆ. ಅತೀ ಬೇಗನೆ ಒಂದು ರಾಸುವಿನಿಂದ ಇನ್ನೊಂದಕ್ಕೆ ನೇರ ಸಂಪರ್ಕ ಹಾಗೂ ಗಾಳಿಯ ಮೂಲಕ ಹರಡುತ್ತದೆ. ಈ ರೋಗವನ್ನು ನಿಯಂತ್ರಿಸಲು ಲಸಿಕೆ ನೀಡುವುದೊಂದೇ ಪರಿಹಾರವಾಗಿದೆ. ಪ್ರತೀ 6 ತಿಂಗಳಿ ಗೊಮ್ಮೆ ಲಸಿಕೆ ಹಾಕಿಸಿ ತಮ್ಮ ಜಾನುವಾರುಗಳನ್ನು ರೋಗದಿಂದ ರಕ್ಷಿಸಬೇಕು ಎಂದು ರಾಜು ಕೆ. ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ರಾಷ್ಟ್ರೀಯ ಜಾನುವಾರು ನಿಯಂತ್ರಣ ಕಾರ್ಯಕ್ರಮದಡಿ 7 ಸುತ್ತಿನಲ್ಲಿ ಲಸಿಕೆ ಹಾಕಲಾಗಿದ್ದು, ಯಾವುದೇ ರೋಗದ ಲಕ್ಷಣಗಳಯ ಕಂಡು ಬಂದಿಲ್ಲ. ಇಲಾಖೆಯ ಅಧಿಕಾರಿ, ಸಿಬ್ಬಂದಿ, ಹಾಲು ಉತ್ಪಾದಕರ ಸಂಘದ ಕೃತಕ ಗರ್ಭಧಾರಣಾ ಕಾರ್ಯಕರ್ತರು ಹಾಗೂ ತರಬೇತಿ ಹೊಂದಿರುವ ಪಶು ಸಖಿಯರ ಮುಖಾಂತರ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆಗೆ ಅಗತ್ಯವಿರುವ ಲಸಿಕೆ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ದಾಸ್ತಾನಿನಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಅರುಣ್ ಕುಮಾರ್ ಶೆಟ್ಟಿ ತಿಳಿಸಿದರು.

ಅಭಿಯಾನದ ಬಗ್ಗೆ ಪ್ರಚಾರ ಸಾಮಾಗ್ರಿಗಳನ್ನು ಅಪರ ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕಚೇರಿಯ ತಾಂತ್ರಿಕ ಸಹಾಯಕ ನಿರ್ದೇಶಕ ಡಾ.ವಸಂತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News