ಪ್ರವಾದಿ ಸಂದೇಶಗಳು ನಮಗೆಲ್ಲಾ ಮಾದರಿ: ಪಂಜಿಗುಡ್ಡೆ ಈಶ್ವರ ಭಟ್
ಅರಿಯಿರಿ ಮನುಕುಲದ ಪ್ರವಾದಿಯನ್ನು 'ಸೀರತ್ ಅಭಿಯಾನ-2025'
ಪುತ್ತೂರು: ನೆರೆ ಮನೆಯವರು ಹಸಿದಿರುವಾಗಿ ತಾನು ಊಟ ಮಾಡುವವ ನಮ್ಮವನಲ್ಲ ಎಂದಿರುವ, ಹೆಣ್ಣು ಮಕ್ಕಳಿಗೆ ಮೌಲ್ಯಯುತ ಸ್ಥಾನಮಾನವನ್ನು ಒದಗಿಸಿರುವ ಪ್ರವಾದಿ ಸಂದೇಶವು ನಮಗೆಲ್ಲಾ ಮಾದರಿಯಾಗಿದೆ. ಪ್ರತಿಯೊಂದು ದರ್ಮವನ್ನು ಗೌರವಿಸುವ ಮನೋಭಾವ ನಮ್ಮದಾಗಬೇಕು ಎಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.
ಅವರು ಯುನಿವೆಫ್ ಕರ್ನಾಟಕ ಯುನಿವರ್ಸಲ್ ವೆಲ್‌ಫೇರ್ ಫೋರಂ ಚತಿಯಿಂದ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಅಪರಾಹ್ನ ನಡೆದ ಅರಿಯಿರಿ ಮನುಕುಲದ ಪ್ರವಾದಿಯನ್ನು `ಸೀರತ್ ಅಭಿಯಾನ-2025' ದಲ್ಲಿ `ಶೋಷಿತ ಸಮಾಜ ಹಾಗೂ ಮಾನವ ಘನತೆ ಮತ್ತು ಪ್ರವಾದಿ ಮುಹಮ್ಮದ್'' ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಯಾವುದೇ ಧರ್ಮಗಳು ಕೆಟ್ಟದ್ದಲ್ಲ. ಆದರೆ ಪ್ರತಿಯೊಂದು ಧರ್ಮದಲ್ಲೂ ಕೆಟ್ಟವರಿದ್ದಾರೆ. ರಾಜಕೀಯ ಕಾರಣಗಳಿಗಾಗಿ ಧರ್ಮಗಳ ನಡುವೆ ಜಗಳ ಹಚ್ಚುತ್ತಾರೆ. ಅಂತಹ ಅಪಪ್ರಚಾರಗಳೀಗೆ ಬೆಲೆ ನೀಡಬಾರದು ಧರ್ಮದ ಅರಿವು ಪ್ರತಿಯೊಬ್ಬರಲ್ಲೂ ಮೂಡಿದಾಗ ಸೌಹಾರ್ಧಯುತ ಸಮಾಜ ನಿರ್ಮಾಣ ಸಾಧ್ಯವಿದೆ. ಈ ನಿಟ್ಟಿನಲ್ಲಿ ಯುನಿವೆಫ್‌ನ ಈ ಅಭಿಯಾನವು ಮಾದರಿಯಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಜಾತಿ ಧರ್ಮಗಳಿರಲಿಲ್ಲ. ನಾವೆಲ್ಲರೂ ಭಾರತೀಯರು ಎಂಬ ಭಾವನೆಯಿತ್ತು. ಮುಂದೆಯೂ ನಾವೆಲ್ಲರೂ ಭಾರತೀಯರಾಗಿ ತ್ರಿವರ್ಣ ಧ್ವಜದ ಅಡಿಯಲ್ಲಿ ಒಂದಾಗೋಣ ಎಂದರು.
ಸುಧಾನ ಚರ್ಚ್ನ ಧರ್ಮಗುರು ರೆ. ವಿಜಯ ಹಾರ್ವಿನ್ ಮಾತನಾಡಿ ಇಂತಹ ವಿಚಾಗೋಷ್ಠಿಗಳು ಇಂದಿನ ಅಗತ್ಯತೆ ಮತ್ತು ಅನಿವಾರ್ಯವಾಗಿದೆ. ಇಸ್ಲಾಂ ಧರ್ಮವು ಶಾಂತಿ ಮತ್ತು ಸಹಬಾಳ್ವೆಯ ಸಂಕೇತವಾಗಿದ್ದು, ಪರಸ್ಪರ ನೀಡುತ್ತಿ ರುವ ಸಲಾಂನಲ್ಲಿ ಶಾಂತಿ, ಸಹಬಾಳ್ವೆಯ ಚಿಂತನೆ ಗೋಚರಿಸುತ್ತಿದೆ. ಶಾಂತಿಯನ್ನು ಬೆಳೆಸುವ ಅದರಲ್ಲಿಯೇ ಜೀವಿಸುವ ಧರ್ಮವಾದ ಇಸ್ಲಾಂ ಬಗ್ಗೆ ಇರುವ ತಪ್ಪು ಕಲ್ಪನೆಗಳು ದೂರವಾಗಬೇಕಾಗಿದೆ. ಇದಕ್ಕಾಗಿ ಪರಸ್ಪರ ಅರಿವು ಮೂಡಿಸುವುದು ಅಗತ್ಯವಾಗಿದೆ. ಝಕಾತ್ ಎಂಬ ದಾನದ ಪರಿಕಲ್ಪನೆಯಲ್ಲಿ ಇಸ್ಲಾಂ ಧರ್ಮದಲ್ಲಿ ನೀಡಲಾ ಗುತ್ತಿರುವ ದಾನವು ಮಾನವೀಯ ಮೌಲ್ಯ, ಕರುಣೆ ಮತ್ತು ಪ್ರೀತಿಯ ಭಾಗವವಾಗಿದೆ. ಅರಿಯಿರಿ ಮನುಕುಲದ ಪ್ರವಾದಿಯನ್ನು ಎನ್ನುವ ಚಳವಳಿಯು ಸಹಬಾಳ್ವೆಗೆ ಪೂರಕವಾಗಿದ್ದು ಎಲ್ಲರೂ ಒಟ್ಟಾಗಿ ಜೀವಿಸೋಣ ಎಂದರು.
ಅಧ್ಯಕ್ಷತೆ ವಹಿಸಿದ್ದ ಯುನಿವೆಫ್ ಕರ್ನಾಟಕದ ಅಧ್ಯಕ್ಷ ರಫೀಉದ್ಧೀನ್ ಕುದ್ರೋಳಿ ಅವರು ಮಾತನಾಡಿ ಇದೊಂದು ಅಭಿಯಾನ ಎನ್ನವುದಕ್ಕೆ ಬದಲಾಗಿ ವಿವಿಧ ಧರ್ಮೀಯರನ್ನು ಸೇರಿಸಿಕೊಂಡು ಪರಸ್ಪರ ಅರಿಯುವ, ತಿಳಿಯುವ ಮತ್ತು ಪರಿಚಯಿಸುವ ಕಾರ್ಯಕ್ರಮವಾಗಿದೆ. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗುತ್ತಿದೆ. ಯುನಿವೆಫ್ ಮೂಲಕ ಕಳೆದ 2 ದಶಕಗಳಿಂದ ಅರಿಯಿರಿ ಮನುಕುಲದ ಪ್ರವಾದಿಯನ್ನು ಎಂಬ ಘೋಷ ವಾಕ್ಯದ ಮೂಲಕ ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಹಿಷ್ಙುತೆಯನ್ನು ತರಲು ನಿರಂತರ ಶ್ರಮ ನಡೆಸಲಾ ಗುತ್ತಿದೆ. ಶೋಷಿತ ಸಮಾಜ, ಮಾನವ ಘನತೆ ಹಾಗೂ ಪ್ರವಾದಿ ಸಂದೇಶ ಈ ಬಾರಿಯ ವಿಷಯವಾಗಿದ್ದು, ಶೋಷಣೆಯಿಲ್ಲದ ಸಮಾಜದಲ್ಲಿ ಮಾನವ ಘನತೆಯಿಂದ ಬದುಕುತ್ತಾನೆ. ಸಂವಿದಾನ ನಮಗೆ ಈ ಹಕ್ಕು ನೀಡಿದೆ. ಇಲ್ಲಿ ಎಲ್ಲಾ ಧರ್ಮಿಯರೂ ಬದುಕುತ್ತಿದ್ದಾರೆ. ಈ ದೇಶದಲ್ಲಿರುವ ಮುಸಲ್ಮಾನರು ಈ ದೇಶದ ಮೂಲನಿವಾಸಿಗಳಾ ಗಿದ್ದು ಎಲ್ಲರಿಗೂ ಶೋಷಣೆ ರಹಿತ ಬದುಕು ಸಿಗುವಂತಾಗಬೇಕು. ಇದಕ್ಕೆ ತೊಡಕಾಗುತ್ತಿರುವ ಸುಳ್ಳಿನ ಗೋಡೆ ಗಳನ್ನು ಉರುಳಿಸುವ ಕೆಲಸವಾಗಬೇಕು ಎಂದರು.
ಅಭಿಯಾನದ ಸಂಚಾಲಕ ಖಾಲಿದ್ ಯುಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಭಿಯಾನದ ಸಹ ಸಂಚಾಲಕ ಆಶಿಫ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು.