ಮುಸ್ಲಿಂ ಮಹಿಳೆಯರು ಹಲವು ಪ್ರಥಮಗಳನ್ನು ಸ್ಥಾಪಿಸಿದ್ದೇವೆ: ಡಾ. ಶರೀಫಾ ಕೆ.
ಅನುಪಮ ಬೆಳ್ಳಿ ಹಬ್ಬ ಸಂಭ್ರಮ; ವಿಶೇಷ ಸಂಚಿಕೆ ಬಿಡುಗಡೆ
ಮಂಗಳೂರು, ಜ.15: ಮುಸ್ಲಿಂ ಮಹಿಳೆಯರು ಹಲವಾರು ಸಾಧನೆಗಳ ಜತೆಗೆ ಕನ್ನಡ ಸಾಹಿತ್ಯವನ್ನು ಒಳಗೊಂಡಂತೆ ಹಲವು ಪ್ರಥಮಗಳನ್ನು ಸ್ಥಾಪಿಸಿದ್ದೇವೆ ಎಂದು ಖ್ಯಾತ ಸಾಹಿತಿ ಡಾ. ಶರೀಫಾ ಕೆ. ಅಭಿಪ್ರಾಯಪಟ್ಟರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಗುರುವಾರ ಅನುಪಮ ಮಹಿಳಾ ಮಾಸಿಕದ ಬೆಳ್ಳಿ ಹಬ್ಬ ಸಂಭ್ರಮ ಹಾಗೂ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದ ಮುಸ್ಲಿಂ ಮಹಿಳೆಯರು, ಕೆಲ ವರ್ಷಗಳ ಹಿಂದೆ ನಡೆದ ಎನ್‌ಆರ್‌ಸಿ–ಸಿಎಎ ಹೋರಾಟದಲ್ಲಿಯೂ ತಮ್ಮ ಮಹತ್ವವನ್ನು ಪ್ರದರ್ಶಿಸಿದ್ದರು. ಆದರೂ ಪತ್ರಿಕೆಯನ್ನು ನಡೆಸುವುದು ಸುಲಭದ ಕೆಲಸವಲ್ಲ. ನಮ್ಮ ಕಣ್ಣೆದುರೇ ಅದೆಷ್ಟೋ ಪತ್ರಿಕೆಗಳು ನೆಲಕಚ್ಚಿರುವುದನ್ನು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರಿಗೆ ಮನೆಯಿಂದ ಹೊರಬರಲು ಅವಕಾಶಗಳೇ ಕಡಿಮೆಯಿದ್ದ ಕಾಲಘಟ್ಟದಲ್ಲಿ, ಹಿಜಾಬ್ ಧರಿಸಿದ ಮಹಿಳೆಯ ನೇತೃತ್ವದಲ್ಲಿ ಅನೇಕ ಎಡರು–ತೊಡರುಗಳ ನಡುವೆ ಅನುಪಮ ಮಾಸಿಕ 25 ವರ್ಷಗಳನ್ನು ಪೂರೈಸಿರುವುದು ನಿಜಕ್ಕೂ ಪ್ರಶಂಸನಾರ್ಹ. ಪತ್ರಿಕೆಯು ನೈತಿಕತೆಯನ್ನು ಅನುಸರಿಸಿಕೊಂಡು ಅಕ್ಷರ ಬಳಕೆಯ ಗೌರವವನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ಅವರು ಬಣ್ಣಿಸಿದರು.
ಪತ್ರಕರ್ತೆ ಗೌರಿ ಹಾಗೂ ಬಿಲ್ಕೀಸ್ ಬಾನು ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯನ್ನು ಉಲ್ಲೇಖಿಸಿದ ಡಾ. ಶರೀಫಾ, “ನಮ್ಮ ಹೋರಾಟಗಳು ಏಕೆ ಹೀಗಾಗುತ್ತಿವೆ?” ಎಂದು ಯೋಚಿಸಿದಾಗ ಆತಂಕವಾಗುತ್ತದೆ ಎಂದರು. ಕರಾವಳಿಯಲ್ಲಿ ಹಿಜಾಬ್ ಪ್ರಕರಣದಿಂದಾಗಿ ಹಲವು ಮಹಿಳೆಯರ ಶಿಕ್ಷಣಕ್ಕೆ ಹಿನ್ನಡೆ ಉಂಟಾಗಿದೆ. ಕೋಮು ದ್ವೇಷದ ಭಾಷಣ ಮಾಡಬಾರದು ಎಂಬ ಉದ್ದೇಶದಿಂದ ಮಸೂದೆ ತರಲು ಮುಂದಾದರೆ ಅದನ್ನು ವಿರೋಧಿಸುವ ಕೋಮುವಾದಿಗಳ ಕಾಲದಲ್ಲಿ ನಾವು ಬದುಕುತ್ತಿದ್ದೇವೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ನಗರ ಪೊಲೀಸ್ ಎಸಿಪಿ ನಜ್ಮಾ ಫಾರೂಕಿ ಮಾತನಾಡಿ, ಅನುಪಮ ಕೇವಲ ಪತ್ರಿಕೆಯಲ್ಲ; ಅದು ಮಹಿಳೆಯರ ಧ್ವನಿ, ಶಕ್ತಿ ಮತ್ತು ಸೃಜನಶೀಲತೆಯನ್ನು ತೋರಿಸುವ ವೇದಿಕೆ ಎಂದು ಹೇಳಿದರು.
ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದ್ದು, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವಾರು ಪತ್ರಿಕೆಗಳು ಹುಟ್ಟಿ ಅಳಿದು ಹೋಗಿರುವ ಸಂದರ್ಭದಲ್ಲಿ, 25 ವರ್ಷಗಳಿಂದ ಸರಳ ಹಾಗೂ ಸ್ಪಷ್ಟ ಧ್ವನಿಯಲ್ಲಿ ಮಹಿಳೆಯರ ಬದುಕಿನ ಬಗ್ಗೆ ಮಾತನಾಡುತ್ತಿರುವ ಅನುಪಮದ ಸಾಧನೆ ಶ್ಲಾಘನೀಯ. ಅದರ ಕೀರ್ತಿ ಇನ್ನಷ್ಟು ಉತ್ತುಂಗಕ್ಕೆ ಏರಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಾಜಿ ಶಾಸಕಿ ಹಾಗೂ ಕರಾವಳಿ ಲೇಖಕಿಯರ–ವಾಚಕಿಯರ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಬೆಥನಿ ಸೇಂಟ್ ತೆರೆಸಾ ಕಾಲೇಜಿನ ಪ್ರಾಂಶುಪಾಲರಾದ ಭ. ಲೂರ್ಡ್ಸ್, ಆಪ್ತ ಸಮಾಲೋಚಕಿ ಹಾಗೂ ತರಬೇತುದಾರರಾದ ಡಾ. ರುಕ್ಸಾನ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಕೆ.ಎ. ರೋಹಿಣಿ, ಸಮಾಜ ಸೇವಕಿ ಹರಿಣಿ ಕೆ., ಹಿರಿ ಓದುಗರಾದ ಆಯಿಶಾ ಇ. ಶಾಫಿ ಅವರನ್ನು ಸನ್ಮಾನಿಸಲಾಯಿತು.
ಅನುಪಮ ಮಾಸಿಕದ ಪ್ರಧಾನ ಸಂಪಾದಕಿ ಶಹನಾಝ್ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಸಂಪಾದಕಿ ಸಬೀಹಾ ಫಾತಿಮಾ ಸ್ವಾಗತಿಸಿದರು. ಸಮೀನಾ ಉಪ್ಪಿನಂಗಡಿ ವಂದಿಸಿದರು. ಅಸ್ಮತ್ ವಗ್ಗ ಹಾಗೂ ಲುಬ್ನಾ ಝಕಿಯ್ಯ ಕಾರ್ಯಕ್ರಮ ನಿರೂಪಿಸಿದರು.
“ನಮ್ಮಲ್ಲಿ ಹೆಣ್ಣು ಮತ್ತು ಗಂಡು ಎಂಬ ಎರಡು ಜಾತಿಗಳು ಮಾತ್ರ ಇವೆ. ಸೂರ್ಯನ ಬೆಳಕು, ಗಾಳಿ, ನೀರು ಯಾವುದೇ ಬೇಧಭಾವವಿಲ್ಲದೆ ಎಲ್ಲರಿಗೂ ಸಮಾನವಾಗಿ ಲಭಿಸುವಾಗ, ಮಾನವರ ನಡುವೆ ಬೇಧಭಾವ ಸರಿಯಲ್ಲ. ಮಹಿಳೆಯರಲ್ಲಿ ಅಪಾರ ಶಕ್ತಿ ಅಡಗಿದೆ. ಮಂಗಳೂರಿನವಳಾಗಿದ್ದರೂ ಮುಂಬೈಯಲ್ಲಿ 45 ವರ್ಷಗಳ ಕಾಲ ಕಳೆದಿರುವುದರಿಂದ ಇಲ್ಲಿನ ಕೆಲವು ಸಂಗತಿಗಳ ಬಗ್ಗೆ ನನಗೆ ಸಂಪೂರ್ಣ ಅರಿವಿಲ್ಲ. ಆದರೆ 25 ವರ್ಷಗಳ ಕಾಲ ಮಹಿಳೆಯೊಬ್ಬರು ಮಂಗಳೂರಿನಲ್ಲಿ ಅನುಪಮ ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ ಎನ್ನುವುದೇ ನನಗೆ ನಿಜಕ್ಕೂ ಅಚ್ಚರಿ ಮತ್ತು ಸಂತೋಷವನ್ನು ತಂದಿದೆ” ಎಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ನ್ಯಾಯವಾದಿ ಹಾಗೂ ಎನ್‌ಐಎ ಮಾಜಿ ವಿಶೇಷ ಸರಕಾರಿ ಅಭಿಯೋಜಕಿ ರೋಹಿಣಿ ಸಾಲ್ಯಾನ್ ಹೇಳಿದರು.