ಮಂಗಳೂರು| ಮಕ್ಕಳ ಕಳ್ಳಸಾಗಾಟ ಪ್ರಕರಣ: ಮೂವರು ಆರೋಪಿಗಳಿಗೆ 10 ವರ್ಷ ಕಠಿಣ ಶಿಕ್ಷೆ
ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 12 ವರ್ಷದ ಹಿಂದೆ ನಡೆದಿದ್ದ ಮಕ್ಕಳ ಕಳ್ಳ ಸಾಗಾಟ ಪ್ರಕರಣದ ಮೂವರು ಆರೋಪಿಗಳಾದ ಲೆನೆಟ್ ವೇಗಸ್, ಜೊಸ್ಸಿ ವೇಗಸ್, ಲಸ್ಸಿ ವೇಗಸ್‌ಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯವು ಗುರುವಾರ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಅಲ್ಲದೆ ತಲಾ 5 ಸಾವಿರ ರೂ. ದಂಡ ವಿಧಿಸಿದೆ. ದಂಡ ತೆರಲು ವಿಫಲವಾದಲ್ಲಿ 6 ತಿಂಗಳ ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.
*ಘಟನೆಯ ವಿವರ: 2013ರಲ್ಲಿ ಅಂಗನವಾಡಿ ಕಾರ್ಯಕರ್ತೆ ಫಾತಿಮಾ ಎಂಬವರು ಮನೆ ಮನೆಗೆ ತೆರಳಿ ಮಕ್ಕಳ ಸಮೀಕ್ಷೆ ಮಾಡುವ ವೇಳೆ ಲೆನೆಟ್ ವೇಗಸ್‌ರ ಮನೆಯಲ್ಲಿ ಚೆನ್ನವ್ವ ಎಂಬಾಕೆಯ ಮಗುವನ್ನು ಮಾರಾಟಕ್ಕಿಟ್ಟಿರುವ ಬಗ್ಗೆ ತಿಳಿದುಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪತ್ರಕರ್ತ ನವೀನ್ ಸೂರಿಂಜೆ ನಗರ ಪೊಲೀಸ್ ಕಮಿಷನರ್ ಹಾಗೂ ಚೈಲ್ಡ್‌ಲೈನ್ ಸಂಸ್ಥೆಯ ಗಮನಕ್ಕೆ ತಂದಿದ್ದರು.
ಕಮಿಷನರ್‌ರ ಸಲಹೆಯಂತೆ ಪತ್ರಕರ್ತ ನವೀನ್ ಸೂರಿಂಜೆ, ಸಾಮಾಜಿಕ ಹೋರಾಟಗಾರ್ತಿ ವಿದ್ಯಾ ದಿನಕರ್, ಚೈಲ್ಡ್ ಲೈನ್‌ನ ರೆನ್ನಿ ಡಿಸೋಜ, ಸಾಮಾಜಿಕ ಕಾರ್ಯಕರ್ತೆ ಅಸುಂತ ಡಿಸೋಜ, ಪೊಲೀಸ್ ಕಾನ್‌ಸ್ಟೇಬಲ್ ಇರ್ಫಾನ್, ಅಂಗನವಾಡಿ ಕಾರ್ಯಕರ್ತೆ ಫಾತಿಮಾ ಮತ್ತಿತರರು ಮಗುವನ್ನು ಖರೀದಿಸುವ ನೆಪದಲ್ಲಿ ಕಾರ್ಯಾಚರಣೆ ನಡೆಸಿದರು.
ಹಾಗೇ ಲೆನೆಟ್‌ರಿಂದ ಮಗುವನ್ನು ಪಡೆಯುತ್ತಲೇ ಆಕೆಯನ್ನು ಬಂಧಿಸಲಾಗಿತ್ತು. ಅಲ್ಲದೆ ಆಕೆಗೆ ಸಹಕರಿಸಿದ ಜೊಸ್ಸಿ ವೇಗಸ್, ಲಸ್ಸಿ ವೇಗಸ್‌ರನ್ನೂ ಬಂಧಿಸಿ ಕ್ರಮ ಕೈಗೊಳ್ಳಲಾಗಿತ್ತು. 2013ರಲ್ಲಿ ನಡೆದ ಈ ಪ್ರಕರಣದ ಆರೋಪಿಗಳಿಗೆ ಜೂ.26ರಂದು ಶಿಕ್ಷೆ ವಿಧಿಸಲಾಗಿತ್ತು. ಜು.3ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದೆ.