ಕರ್ನಾಟಕದ 120 ಮಂದಿ ವಿದ್ಯಾರ್ಥಿಗಳು ತವರಿಗೆ ವಾಪಸಾಗಲು ಎನ್‌ಆರ್‌ಐ ಸಮಿತಿಯಿಂದ ಪ್ರಯತ್ನ
PC: PTI
ಮಂಗಳೂರು, ಜೂ.18: ಇರಾನ್ ಹಾಗೂ ಇಸ್ರೇಲ್ ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಅನಿವಾಸಿ ಭಾರತೀಯರ ಮಾಹಿತಿಯನ್ನು ಕೂಡ ಕಲೆ ಹಾಕುತ್ತಿದ್ದು ಅವರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿ ಸುವ ಹಾಗೂ ವಾಪಸ್ ಕರೆತರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಎರಡೂ ದೇಶಗಳ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಭಾರತೀಯ ರಾಯಭಾರ ಕಚೇರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಕರ್ನಾಟಕದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯು ಆ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಆತಂಕವನ್ನು ಉಂಟು ಮಾಡಿದೆ.
ಲಭ್ಯವಿರುವ ಮಾಹಿತಿ ಪ್ರಕಾರ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಪೈಕಿ ಬೆಂಗಳೂರು ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕು ಆಲಿಪುರ ಗ್ರಾಮದ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಇತರರು ಇರಾನ್ ದೇಶದ ರಾಜಧಾನಿಯಾದ ತೆಹರಾನ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ, ಧಾರ್ಮಿಕ ಅಧ್ಯಯನ, ಉದ್ಯೋಗ ಹಾಗೂ ಪ್ರವಾಸಕ್ಕಾಗಿ ತೆರಳಿ ದ್ದಾರೆ. ಅಲ್ಲಿ ಸಿಲುಕಿಕೊಂಡಿರುವ ಭಾರತದ ಪೋಷಕರು ಕೂಡ ಆತಂಕಗೊಂಡಿದ್ದು ತಮ್ಮ ಕಚೇರಿಗೆ ದೂರವಾಣಿ ಮೂಲಕ ಮಕ್ಕಳ ಹಾಗೂ ಸಂಬಂಧಿಕರ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡುತ್ತಿ ದ್ದಾರೆ. ಈಗಾಗಲೇ 120 ಮಂದಿ ವಿದ್ಯಾರ್ಥಿಗಳು ತಮ್ಮನ್ನು ಸಂಪರ್ಕಿಸಿ ತವರಿಗೆ ವಾಪಸಾಗಲು ನೆರವಾಗುವಂತೆ ಮನವಿ ಮಾಡಿದ್ದಾರೆ ಎಂದು ಆರತಿ ಕೃಷ್ಣ ಮಾಹಿತಿ ನೀಡಿದ್ದಾರೆ.
ವಿದೇಶಾಂಗ ವ್ಯವಹಾರ ಸಚಿವಾಲಯವು ಇರಾನ್‌ನಲ್ಲಿ ನೆಲೆಸಿರುವ ಭಾರತೀಯರಿಗೆ ಸಂಬಂಧಿಸಿದ ಮಾಹಿತಿಯನ್ನು ಎಲ್ಲಾ ಮೂಲಗಳಿಂದ ಸಂಗ್ರಹಿಸುತ್ತಿದ್ದು, ಪ್ರಸ್ತುತ 5,000ಕ್ಕೂ ಹೆಚ್ಚು ಅನಿವಾಸಿ ಭಾರತೀಯರನ್ನು ಸಮೀಪದಲ್ಲಿರುವ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಯುದ್ಧ ಪರಿಸ್ಥಿತಿಯು ಇನ್ನೂ ಹೆಚ್ಚು ತೀವ್ರಗೊಂಡಲ್ಲಿ, ಇವರನ್ನು ಸಮೀಪದ ರಾಷ್ಟ್ರಗಳ ಗಡಿ ಮೂಲಕ ಸ್ಥಳಾಂತರಿಸಿ ಆಯಾ ದೇಶಗಳಿಂದ ಭಾರತಕ್ಕೆ ವಾಪಸ್ ಕರೆ ತರುವ ಯೋಜನೆಯನ್ನು ಜಾರಿಗೊಳಿಸಲಿದೆ.
ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸಮಿತಿಯು ಇರಾನ್ ಹಾಗೂ ಇಸ್ರೇಲ್ ನಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಅನಿವಾಸಿ ಭಾರತೀಯರನ್ನು ಸುರಕ್ಷಿತವಾಗಿರಿಸಲು ಹಾಗೂ ವಾಪಸ್ ಕರೆತರುವ ಬಗ್ಗೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ಸಂಬಂಧಪಟ್ಟ ದೇಶಗಳ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲಾ ರೀತಿಯ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಶ್ರಮಿಸುತ್ತಿದೆ ಎಂದು ಆರತಿ ಕೃಷ್ಣ ಮಾಹಿತಿ ನೀಡಿದ್ದಾರೆ.