×
Ad

ದ.ಕ. ಹಾಲು ಒಕ್ಕೂಟದಿಂದ 12.79 ಕೋಟಿ ರೂ. ಲಾಭ ದಾಖಲೆ; ಪ್ರತಿನಿತ್ಯ ಹಾಲಿನ ಸಂಗ್ರಹದಲ್ಲೂ ಏರಿಕೆ

Update: 2025-09-15 18:11 IST

ಮಂಗಳೂರು, ಸೆ. 15: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಗೊಳಪಟ್ಟ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 2024-25ನೇ ಸಾಲಿನಲ್ಲಿ ರೂ.1174.00 ಕೋಟಿಗಳಷ್ಟು ರೂ. ವ್ಯವಹಾರ ಮಾಡಿದ್ದು, ರೂ.12.79 ಕೋಟಿ ನಿವ್ವಳ ಲಾಭ ದಾಖಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರ ರವಿರಾಜ್ ಹೆಗ್ಡೆ ಹೇಳಿದರು.

ಒಕ್ಕೂಟದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 751 ಹಾಲು ಸಂಘಗಳು 3.97 ಲಕ್ಷ ಲೀಟರ್ ಹಾಲು ಶೇಖರಣೆ ಮಾಡುತ್ತಿದೆ. ಹಾಲಿನ ಶೇಖರಣೆ 2024-25 ನೇ ಸಾಲಿನಲ್ಲಿ ದಿನಕ್ಕೆ 3.42 ಲಕ್ಷ ಲೀಟರ್ ಸಂಗ್ರಹಣೆಯಾಗಿದ್ದು ಪ್ರಸ್ತುತ ಸಾಲಿನಲ್ಲಿ ಶೇ.16ರಷ್ಟು ಏರಿಕೆಯಾಗಿದ್ದು, 3.97 ಲಕ್ಷ ಲೀಟರ್‌ನಷ್ಟು ಹಾಲು ಸಂಗ್ರಹಣೆಯಾಗುತ್ತಿದೆ ಎಂದವರು ಹೇಳಿದರು.

ಈರೋಡ್, ಹೊರ ಜಿಲ್ಲೆಗಳಿಂದ ರಾಸು ಖರೀದಿಸಿ ಹೈನುಗಾರರಿಗೆ ನೀಡುವ ಯೋಜನೆ ಹಮ್ಮಿಕೊಂಡಿದೆ. ಈ ರಾಸುಗಳ ಸಾಗಾಣಿಕೆ ಹಾಗೂ ವಿಮಾ ವೆಚ್ಚವನ್ನು ಒಕ್ಕೂಟವೇ ಭರಿಸುತ್ತಿದೆ ಎಂದರು.

ಶಾಸಕ ಅಶೋಕ್ ಕುಮಾರ್ ರೈ ಅವರು ಪುತ್ತೂರಿನಲ್ಲಿ ಒಕ್ಕೂಟಕ್ಕೆ 10.30 ಎಕರೆ ಸರಕಾರಿ ಜಾಗ ಒದಗಿಸಿರುವುದು ನಮ್ಮ ಯೋಜನೆ ವಿಸ್ತರಣೆಗೆ ಅನುಕೂಲವಾಗಿದೆ. ರಾಜ್ಯ ಸರಕಾರದ ಪ್ರೋತ್ಸಾಹಧನ ಜೂನ್‌ವರೆಗೆ ಬಂದಿದ್ದು, ಉಳಿದ ಹಣ ಸಾಮಾನ್ಯವಾಗಿ ಏಕಕಂತಿನಲ್ಲಿ ಬರುತ್ತದೆ. ರೈತ ಕಲ್ಯಾಣ ಟ್ರಸ್ಟ್ 2024-25 ನೇ ಸಾಲಿನಲ್ಲಿ ಒಟ್ಟು ರೂ.2.05 ಕೋಟಿಯಷ್ಟು ಮೊತ್ತವನ್ನು ರೈತರ ಮರಣ, ವೈದ್ಯಕೀಯ ವೆಚ್ಚ, ರಾಸುಗಳ ಮರಣಕ್ಕೆ ಪಾವತಿಸಲಾಗಿದೆ. ರೈತರ ರಾಸುಗಳಿಗೆ ವಿಮಾ ಯೋಜನೆಯಲ್ಲಿ ಒಟ್ಟು 30629 ರಾಸುಗಳಿಗೆ ವಿಮೆಯನ್ನು ಮಾಡಿಸಲಾಗಿದ್ದು, 1177 ಸಂಖ್ಯೆಯಷ್ಟು ಕ್ಲೇಮ್ ನೀಡಲಾಗಿದೆ ಎಂದರು.

ಒಕ್ಕೂಟದಿಂದ ಐಸ್‌ಕ್ರೀಂ ಘಟಕ ರಚಿಸುವ ನಿಟ್ಟಿನಲ್ಲಿ ಯೋಜನರೆ ರೂಪಿಸಲಾಗುತ್ತಿದೆ. 2024-25 ನೇ ಸಾಲಿನಲ್ಲಿ ಹಸಿರು ಹುಲ್ಲ್ಲು ಅಭಿವದ್ಧಿ, ಹುಲ್ಲು ಕತ್ತರಿಸುವ ಯಂತ್ರ ಖರೀದಿ ಸೇರಿದಂತೆ ನಾನಾ ಯೊಜನೆಗಳಿಗೆ ರೂ.2.60 ಕೋಟಿಗಳನ್ನು ಅನುದಾನದ ರೂಪದಲ್ಲಿ ನೀಡಲಾಗಿದೆ ಎಂದವರು ಹೇಳಿದರು.

ಒಕ್ಕೂಟದ ಮಾಜಿ ಅಧ್ಯಕ್ಷ, ನಿರ್ದೇಶಕರಾದ ಸುಚರಿತ ಶೆಟ್ಟಿ ಅವರು ಮಾತನಾಡಿ, ಎ.1ರಿಂದ ಶೇ.3.5ಫ್ಯಾಟ್ ಮತ್ತು ಶೇ 8.5ಎಸ್.ಎನ್.ಎಫ್.ಗೆ ಒಕ್ಕೂಟದಿಂದ ಸಂಘಗಳಿಗೆ 40.30 ರೂ. ಹಾಗೂ ಸಂಘಗಳಿಂದ ಉತ್ಪಾದಕ ರಿಗೆ 39 ರೂ. ನೀಡಲಾಗುತ್ತಿದೆ. ಪ್ರಸ್ತುತ ಒಕ್ಕೂಟದಲ್ಲಿ ಶೇ.4.4 ಫ್ಯಾಟ್ ಮತ್ತು ಶೇ.8.5 ಎಸ್.ಎನ್.ಎಫ್. ನ ಹಾಲು ರೈತರಿಂದ ಖರೀದಿಯಾಗುತ್ತಿದ್ದು, ಇದಕ್ಕೆ ಒಕ್ಕೂಟವು ಸಂಘಗಳಿಗೆ 42.06 ರೂ. ಹಾಗೂ ಉತ್ಪಾದಕರಿಗೆ 40.76 ರೂ. ಗಳನ್ನು ಪಾವತಿಸುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಎಂಎಫ್ ನಿರ್ದೇಶಕರಾದ ಬೆಳಪು ದೇವಿಪ್ರಸಾದ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷರಾದ ಉದಯ ಕೋಟ್ಯಾನ್, ನಿದೇಶಕರಾದ ಎಸ್.ಬಿ. ಜಯರಾಮ ರೈ, ಕೆ. ಶಿವಮೂರ್ತಿ, ಎಚ್. ಪ್ರಭಾಕರ್, ಕೆ. ಚಂದ್ರಶೇಖರ ರಾವ್, ಮಮತಾ ಆರ್. ಶೆಟ್ಟಿ, ನಂದರಾಮ್ ರೈಘಿ, ಸುಧಾಕರ ರೈ, ಒಕ್ಕೂಟದ ವ್ಯವಸ್ಥಾಪಕರಾದ ರವಿರಾಜ್ ಉಡುಪ, ಮಧುಸೂದನ್ ಕಾಮತ್ ಉಪಸ್ಥಿತರಿದ್ದರು.

ಉತ್ಕ್ರಷ್ಟ ದಾನಿ ಹಸುವಿನಿಂದ ಸಂಗ್ರಹಿಸಿದ ಅಂಡಾಣು ಮತ್ತು ಉತ್ಕ್ರಷ್ಟ ತಳಿಯ ಲಿಂಗ ವರ್ಗೀಕೃತ ವೀರ್ಯಾಣು ಗಳನ್ನು ಪ್ರಯೋಗ ಶಾಲೆಯಲ್ಲಿ ಫಲೀಕರಿಸಿ, ಭ್ರೂಣಗಳನ್ನು ಸದಸ್ಯ ರೈತರ ಆಯ್ದ ರಾಸುಗಳಿಗೆ ವರ್ಗಾಯಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಮೈಸೂರು, ಕೋಲಾರ, ಬೆಂಗಳೂರಿನಲ್ಲಿ ಈ ಕಾರ್ಯ ನಡೆಯುತ್ತಿದ್ದು, ದ.ಕ. ಜಿಲ್ಲಾ ಸಹಕಾರಿ ಒಕ್ಕೂಟದಿಂದ 40 ಹಸುಗಳಿಗೆ ಈ ಭ್ರೂಣ ವರ್ಗಾವಣೆ ಕಾರ್ಯ ಸೆ.10ರಿಂದ ಆರಂಭಗೊಂಡಿದೆ. ಇದಕ್ಕೆ 21ಸಾವಿರ ರೂ. ವೆಚ್ಚವಾಗುತ್ತಿದ್ದು, ಹೈನುಗಾರರಿಂದ ಕೇವಲ ಒಂದು ಸಾವಿರ ರೂ. ಪಡೆದುಕೊಳ್ಳಲಾ ಗುತ್ತದೆ ಎಂದು ರವಿರಾಜ್ ಹೆಗ್ಡೆಯವರು ವಿವರ ನೀಡಿದರು.






 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News