×
Ad

ಉಳ್ಳಾಲ: ಮೇ 16ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ

Update: 2025-05-09 20:21 IST

ಮಂಗಳೂರು: ಉಳ್ಳಾಲ ತಾಲೂಕಿನ ಹಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಮೇ 16 ರಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಸ್ಪೀಕರ್ ಯು.ಟಿ ಖಾದರ್ ತಿಳಿಸಿದರು.

ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಈ ಸಂಬಂಧ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತೆ ಸಭೆ ನಡೆಸಿ ಮಾತನಾಡಿದರು. ಉಳ್ಳಾಲ ತಾಲೂಕಿನಲ್ಲಿ ಹಲವು ಮಹತ್ವದ ಜನಪಯೋಗಿ ಅಭಿವೃದ್ಧಿ ಯೋಜನೆಗಳು ಜಾರಿಯಾಗಿದೆ.

ಹರೇಕಳ ನೇತ್ರಾವತಿ ಸೇತುವೆ, ನದಿ ತೀರ ಸಮಾನಾಂತರ ರಸ್ತೆ, ಕೋಟೆಪುರ - ಬೋಳಾರ ಸೇತುವೆ, ಸಜಿಪ- ತುಂಬೆ ಸೇತುವೆ ಯೋಜನೆಗಳಿಗೆ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ.

ಉಳ್ಳಾಲ ತಾಲೂಕು ಅಗ್ನಿಶಾಮಕ ನಿಲ್ದಾಣ, ಆರ್‌ಟಿಒ ಟ್ರ್ಯಾಕ್ ಉದ್ಘಾಟನೆ, ಉಳ್ಳಾಲ ಮೀನುಗಾರಿಕೆ ಜೆಟ್ಟಿ, ಉಳ್ಳಾಲ ನಗರ ಸಭೆ ವ್ಯಾಪ್ತಿಯಲ್ಲಿ ವಿದ್ಯುತ್ ಭೂಗತ ಕೇಬಲ್ ಅಳವಡಿಕೆ ಮತ್ತಿತರ ಕಾಮಗಾರಿ ಗಳಿಗೆ ಚಾಲನೆ ದೊರಕಲಿದೆ.

ಅದೇ ರೀತಿ ಅಬ್ಬಕ್ಕ ಭವನ ಶಂಕುಸ್ಥಾಪನೆ ಹಾಗೂ ಬ್ಯಾರಿ ಭವನ ಶಂಕು ಸ್ಥಾಪನೆ ನೆರವೇರಲಿದೆ. ಮಂಜನಾಡಿ ಬೋಳಿಯಾರ್, ಫರಂಗಿಪೇಟೆಯಲ್ಲಿ ಮೌಲಾನ ಆಜಾದ್ ಮಾದರಿ ಶಾಲೆಗಳ ನೂತನ ಕಟ್ಟಡ ಉದ್ಘಾಟನೆ ನಡೆಯಲಿದೆ.

ಕೃಷಿ ಇಲಾಖೆಯ ರಸಗೊಬ್ಬರ ಪ್ರಯೋಗಾಲಯ ಕಟ್ಟಡವು ಉದ್ಘಾಟನೆಗೊಳ್ಳಲಿದೆ ಎಂದು ಅವರು ತಿಳಿಸಿದರು.

ಎಲ್ಲಾ ಅಭಿವೃದ್ಧಿ ಕಾಮಗಾರಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಒಂದೇ ಕಡೆ ನೆರವೇರ ಲಿದ್ದು ಮೇ 16 ರಂದು ಸಂಜೆ ಕಲ್ಲಾಪು ಯುನಿಟಿ ಹಾಲ್ ಮೈದಾನದಲ್ಲಿ ಕಾರ್ಯಕ್ರಮ ನೆರವೇರಲಿದೆ. ಮುಖ್ಯಮಂತ್ರಿಗಳು ಹಾಗೂ ಹಿರಿಯ ಸಚಿವರು ಭಾಗವಹಿಸಲಿದ್ದಾರೆ ಎಂದು ಸ್ಪೀಕರ್ ತಿಳಿಸಿದರು.

ಈ ಕಾರ್ಯಕ್ರಮದ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಭಾಗವಹಿಸುವ ಸಾರ್ವಜನಿಕರಿಗೆ ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಿ ಕೊಡಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ, ಮುಲ್ಲೈ ಮುಹಿಲನ್ ಎಂ. ಪಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ. ಆನಂದ್.ಕೆ, ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News