×
Ad

ಮೇ 16ರಂದು ಕನ್ನಡ ಸಿನೆಮಾ ಲೈಟ್ ಹೌಸ್ ತೆರೆಗೆ

Update: 2025-05-13 19:50 IST

ಮಂಗಳೂರು: ಆಸ್ತ್ರ ಪ್ರೊಡಕ್ಷನ್ಸ್ ಹಾಗೂ ಅಮೈ ಕ್ರಿಯೇಶನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಿರುವ ಲೈಟ್ ಹೌಸ್ ಕನ್ನಡ ಚಲನಚಿತ್ರ ಇದೇ ಮೇ 16 ರಂದು ತೆರೆಗೆ ಬರಲು ಸಜ್ಜಾಗಿದೆ.

ದತ್ತಾತ್ರೆಯ ಪಾಟ್ಕರ್ ಬಂಟಕಲ್ಲು ಇವರ ನಿರ್ಮಾಣದಲ್ಲಿ, ಸಂದೀಪ್ ಕಾಮತ್ ಅಜೆಕಾರು ಇವರ ನಿರ್ದೇಶನದಲ್ಲಿ ಸಿನೆಮಾ ಮೂಡಿಬಂದಿದ್ದು. ಕರಾವಳಿ ಭಾಗದ ಕಲೆ-ಸಂಸ್ಕೃತಿ -ಆಚಾರ-ವಿಚಾರಗಳನ್ನು ಬಹಳ ಸುಂದರವಾಗಿ ಸಿನೆಮಾದಲ್ಲಿ ಚಿತ್ರಿಸಲಾಗಿದೆ. ಚಿತ್ರದ ಬಹುತೇಕ ಎಲ್ಲಾ ಚಿತ್ರೀಕರಣವನ್ನು ಉಡುಪಿ ಯಲ್ಲಿ ನಡೆಸಲಾಗಿದ್ದು, ಕರಾವಳಿಯ ಸೌಂದರ್ಯವನ್ನು ಸಿನೆಮಾದಲ್ಲಿ ಸೆರೆಹಿಡಿಯಲಾಗಿದೆ ಎಂದು ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಲೈಟ್ ಹೌಸ್ ಸಂಪೂರ್ಣ ಸಾಂಸಾರಿಕ ಚಿತ್ರವಾಗಿದ್ದು, ಇಡೀ ಸಂಸಾರ ಮಕ್ಕಳ ಜೊತೆ ಕೂತು ನೋಡುವ ಸಿನೆಮಾ ಇದಾಗಿದ್ದು, ಪ್ರಸ್ತುತ ಕನ್ನಡ ಮಾದ್ಯಮ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳು, ನೇತ್ರದಾನದ ಮಹತ್ವ ಹಾಗೂ ಕರಾವಳಿಯ ಕಲೆ-ಸಂಸ್ಕೃತಿಯನ್ನು ಸಮಾಜಕ್ಕೆ ತೋರಿಸುವ ಕಥೆ ಈ ಚಿತ್ರದಲ್ಲಿದೆ ಎಂದರು.

ಹೆಸರಾಂತ ಕಲಾವಿದರಾದ ಶೋಭರಾಜ್ ಪಾವೂರು, ಮಾನಸಿ ಸುಧೀರ್, ಪ್ರಕಾಶ್ ತೂಮಿನಾಡು, ದೀಪಕ್ ರೈ ಪಾಣಾಜೆ, ಪೃಥ್ವಿ ಅಂಬರ್, ರಾಹುಲ್ ಅಮೀನ್, ಶೈಲಶ್ರೀ ಮುಲ್ಕಿ, ಶೀತಲ್ ನಾಯಕ್, ಅಚಲ್ ಜಿ ಬಂಗೇರ, ಅಪೂರ್ವ ಮಾಳ, ಚಂದ್ರಕಲಾ ರಾವ್, ತಿಮ್ಮಪ್ಪ ಕುಲಾಲ್, ನಮಿತಾ ಕಿರಣ್ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹಾಗೂ ಕ್ಲಿಂಗ್ ಜಾನ್ಸನ್ ಇವರ ಸಾಹಿತ್ಯಕ್ಕೆ ಹೆಸರಾಂತ ಗಾಯಕರಾದ ವಿಜಯ್ ಪ್ರಕಾಶ್, ವಾಸುಕೀ ವೈಭವ್, ಪೃಥ್ವಿ ಭಟ್, ದಿಯಾ ಹೆಗ್ಡೆ ಚಿತ್ರದ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಚಿತ್ರದ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿಯನ್ನು ಪ್ರಜ್ವಲ್ ಸುವರ್ಣ ವಹಿಸಿಕೊಂಡಿದ್ದು, ಚಿತ್ರಕ್ಕೆ ಸಂಗೀತವನ್ನು ಕಾರ್ತಿಕ್ ಮೂಲ್ಕಿ ಮತ್ತು ಉಡುಪಿ ನಮ್ಮ ಊರು ಹಾಡಿಗೆ ಗಿರಿಧರ್ ದಿವಾನ್ ಸಂಗೀತವನ್ನು ನೀಡಿದ್ದಾರೆ

ಮೇ 16 ರಂದು ಲೈಟ್ ಹೌಸ್ ಚಲನಚಿತ್ರ ರಾಜ್ಯದ ಬಹುತೇಕ ಕಡೆಗಳಲ್ಲಿ ತೆರೆಕಾಣಲಿದ್ದು ಚಿತ್ರದಲ್ಲಿ ಸಮಾಜದ ಜನತೆಗೆ ಹಾಗೂ ಮಕ್ಕಳಿಗೆ ಅನೇಕ ಸಂದೇಶಗಳು ಇದರಲ್ಲಿದೆ. ಪ್ರತೀ ಒಬ್ಬ ಪೋಷಕರು ತಮ್ಮ ಮಕ್ಕಳೊಂದಿಗೆ ಕೂತು ಸಿನೆಮಾವನ್ನು ನೋಡಬಹುದಾಗಿದೆ ಎಂದು ಸಂದೀಪ್ ಕಾಮತ್ ಅಜೆಕಾರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಚಿತ್ರ ನಿರ್ಮಾಪಕ ದತ್ತಾತ್ರೆಯ ಪಾಟ್ಕರ್ ಬಂಟಕಲ್ಲು , ನಟಿ ಶೈಲಶ್ರೀ ಮುಲ್ಕಿ, ಚಿತ್ರ ತಂಡದ ಪುಂಡಲೀಕ ಮರಾಠೆ, ಯತೀಶ್ ಪೂಜಾರಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News