ದ.ಕ.ಜಿಲ್ಲೆ: ವಿವಿಧ ಯೋಜನೆಯಡಿ 1.77 ಲಕ್ಷ ಫಲಾನುಭವಿಗಳಿಗೆ ಪಿಂಚಣಿ
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಸರಕಾರದ ವಿವಿಧ ಪಿಂಚಣಿ ಯೋಜನೆಗಳ ಮೂಲಕ ಪ್ರತೀ ತಿಂಗಳು 1,77,026 ಫಲಾನುಭವಿಗಳು ಹಣಕಾಸು ನೆರವು ಪಡೆದಿದ್ದಾರೆ. ಸಾಮಾಜಿಕ ಭದ್ರತಾ ಯೋಜನೆಗಳು ಎಂದು ಕರೆಯಲ್ಪಡುವ ಈ ಪಿಂಚಣಿ ಯೋಜನೆಗಳ ಮೂಲಕ ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣಕಾಸು ನೆರವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
*ವೃದ್ದಾಪ್ಯ ವೇತನ: ಬಿಪಿಎಲ್ ಕುಟುಂಬಕ್ಕೆ ಸೇರಿದ 60ರಿಂದ 64 ವರ್ಷ ಪ್ರಾಯದೊಳಗಿನ ಮಹಿಳೆ ಅಥವಾ ಪುರುಷರು 600 ರೂ. ಹಾಗೂ 65 ವರ್ಷ ಮೇಲ್ಪಟ್ಟವರಿಗೆ 1,200 ರೂ. ಮಾಸಿಕ ಪಿಂಚಣಿ ಪಡೆಯಲಿದ್ದಾರೆ. ದ.ಕ.ಜಿಲ್ಲೆಯಲ್ಲಿ 37,231 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
*ವಿಧವಾ ವೇತನ: ಪತಿ ಮರಣ ಹೊಂದಿದ 18ರಿಂದ 64 ವರ್ಷದಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಪತಿಯ ಮರಣ ಪ್ರಮಾಣ ಪತ್ರ ಹಾಗೂ ದಾಖಲೆಗಳ ಆಧಾರದ ಮೇಲೆ ಮಾಸಿಕ 800 ರೂ. ದೊರೆಯಲಿದ್ದು, ಜಿಲ್ಲೆಯಲ್ಲಿ 49,062 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
*ಅಂಗವಿಕಲ ವೇತನ: ವಿಕಲಚೇತನರನ್ನು ಸಮಾಜದ ಮುಖ್ಯವಾಹಿನಿಗೆ ಮತ್ತವರಿಗೆ ಆರ್ಥಿಕ ಭದ್ರತೆಗೆ ತರಲು ಈ ಮಾಶಾಸನ ಯೋಜನೆ ಜಾರಿಗೆ ತರಲಾಗಿದೆ. ಅಂಗವೈಕಲತೆಯೊಂದಿಗೆ ಹುಟ್ಟಿದ ಮಗು ಮತ್ತು ಅಪಘಾತದಿಂದ ಅಂಗವಿಕಲತೆ ಉಳ್ಳ ವಾರ್ಷಿಕ ಆದಾಯ ಮಿತಿ 32 ಸಾವಿರ ರೂ. ಒಳಗಡೆ ಇರುವವರಿಗೆ, ಮಂದದೃಷ್ಟಿ, ಕುಷ್ಟರೋಗ, ಶ್ರವಣದೋಷ, ಚಲನವಲನ ಅಂಗವಿಕಲತೆ, ಬುದ್ಧಿಮಾಂದ್ಯತೆ, ಮಾನಸಿಕ ಅಸ್ವಸ್ಥತೆ ಉಳ್ಳವರಿಗೆ ಈ ವೇತನ ದೊರಕಲಿದೆ. ಶೇ.40ರಷ್ಟು ವಿಕಲಚೇತನ ಇರುವವರಿಗೆ 800 ರೂ. ಹಾಗೂ ಶೇ.75ಕ್ಕಿಂತ ಮೇಲ್ಪಟ್ಟು ಅಪಘಾತದಿಂದ ಅಂಗವಿಕಲತೆ ಉಳ್ಳವರಿಗೆ 1,400 ರೂ. ಪಿಂಚಣಿ ಮತ್ತು ಮನೋವೈಕಲ್ಯತೆ ಉಳ್ಳವರಿಗೆ 2,000 ರೂ. ಮಾಸಿಕ ಪಿಂಚಣಿ ದೊರೆಯಲಿದೆ. ಜಿಲ್ಲೆಯಲ್ಲಿ 17,751 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
*ಸಂಧ್ಯಾ ಸುರಕ್ಷಾ ವೇತನ: 65 ವರ್ಷ ಪ್ರಾಯ ಮೇಲ್ಪಟ್ಟ ಹಿರಿಯ ವಯಸ್ಸಿನವರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು 1,200 ರೂ. ಪಿಂಚಣಿ ದೊರೆಯಲಿದೆ. ಜಿಲ್ಲೆಯಲ್ಲಿ 62,907 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
*ಮನಸ್ವಿನಿ ವೇತನ: ಅವಿವಾಹಿತೆ ಹಾಗೂ ವಿಚ್ಛೇದಿತೆಯರಿಗೆ ಆರ್ಥಿಕ ಭದ್ರತೆಗೆ ಸಹಾಯ ಮಾಡುವ ಉದ್ದೇಶದಿಂದ ಬಡತನ ರೇಖೆಗಿಂತ ಕೆಳಗಿರುವ 40ರಿಂದ 59 ವರ್ಷ ಪ್ರಾಯದೊಳಗಿನ ಮಹಿಳೆಗೆ ಮಾಸಿಕ 800 ರೂ.ದೊರೆಯಲಿದೆ. ಜಿಲ್ಲೆಯಲ್ಲಿ 6,228 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
*ಮೈತ್ರಿ ವೇತನ: 25ರಿಂದ 64 ವರ್ಷ ಪ್ರಾಯದೊಳಗಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಮಾಸಿಕ ಪಿಂಚಣಿ 800 ರೂ. ದೊರಕಲಿದೆ. ಇದರ ಪ್ರಯೋಜನ ಪಡೆಯಲು ಅರ್ಜಿದಾರರು ಸಮುದಾಯ ಆಧಾರಿತ ಸಂಸ್ಥೆಗಳಾದ ಸಂಗಮ ಮತ್ತು ಕೆಎಸ್‌ಎಂಎಫ್ ಸಂಸ್ಥೆಗಳು ನೋಂದಾಯಿತ ಸದಸ್ಯತ್ವವನ್ನು ಅಫಿಡವಿತ್ ಮೂಲಕ ಪ್ರಮಾಣಿಕರಿಸಿರಬೇಕು. ಜಿಲ್ಲೆಯಲ್ಲಿ 10 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
*ಎಂಡೋಸಲ್ಫಾನ್ ವೇತನ: ಎಂಡೋಸಲ್ಫಾನ್ ಕೀಟನಾಶಕ ಸಿಂಪಡಣೆಯಿಂದ ಅಂಗವಿಕಲತೆ ಪ್ರಮಾಣ ಶೇ.25ರಿಂದ 59ರ ಪ್ರಾಯದವರೆಗೆ ಹೊಂದಿದ್ದ ಸಂತ್ರಸ್ತರಿಗೆ ಮಾಸಿಕ 2,000 ರೂ.ಮತ್ತು ಶೇ.60ಕ್ಕಿಂತ ಮೇಲ್ಪಟ್ಟ ಅಂಗವಿಕಲತೆಗೆ 4,000 ರೂ.ಪಿಂಚಣಿ ದೊರಕುತ್ತಿದೆ. ಜಿಲ್ಲೆಯಲ್ಲಿ 3,808 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
*ಮೃತ ರೈತರ ಪತ್ನಿಗೆ ವಿಧವಾ ವೇತನ: ಬೆಳೆಹಾನಿ, ಸಾಲಬಾಧೆ, ಬೆಲೆಕುಸಿತ ಇತ್ಯಾದಿ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡ ರೈತರು ಪತ್ನಿಗೆ ಮಾಸಿಕ 2000 ರೂ. ಪಿಂಚಣಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 28 ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
*ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರಿಗೆ ಮಾಸಾಶನ: ಆ್ಯಸಿಡ್ ದಾಳಿಗೆ ಒಳಗಾಗಿರುವ ಮಹಿಳೆಯರಿಗೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ಸುರಕ್ಷಾ ಯೋಜನೆಯಡಿ ಆರ್ಥಿಕ ಭದ್ರತೆ ಒದಗಿಸಲು ಮಾಸಿಕ 10,000 ರೂ. ಮೊತ್ತ ಮಾಸಾಶನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಬ್ಬರು ಫಲಾನುಭವಿ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಎಲ್ಲಾ ಪಿಂಚಣಿ ಯೋಜನೆಗಳ ಮೊತ್ತವು ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗೆ ಪಿಂಚಣಿ ಜಮೆಯಾಗುತ್ತದೆ. ಪಿಂಚಣಿ ದೊರಕಲು ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಕಡ್ಡಾಯವಾಗಿದೆ. ಜಿಲ್ಲೆಯಲ್ಲಿ 2023ರ ಜೂನ್ 1ರವರೆಗೆ 18,577 ಮಂದಿ ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗದಿರುವುದು, ಬ್ಯಾಂಕ್‌ಗೆ ಕೆವೈಸಿ ನೀಡದಿರುವುದು ಮತ್ತಿತರ ಸಮಸ್ಯೆಗಳಿಂದಾಗಿ ಪಿಂಚಣಿ ಜಮೆಯಾಗಲು ತೊಂದರೆ ಆಗುತ್ತಿತ್ತು.
ಕಂದಾಯ ಇಲಾಖೆಯು ಈ ಸಮಸ್ಯೆಯನ್ನು ಅಭಿಯಾನದ ಮೂಲಕ ಸರಿಪಡಿಸುತ್ತಿದೆ. ಈ ನಿಟ್ಟಿನಲ್ಲಿ ಆಯಾ ಗ್ರಾಮಕರಣಿಕರು ಫಲಾನುಭವಿಗಳ ಮನೆಗೆ ತೆರಳಿ ಅವರ ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಜೋಡಿಸಲು ಮತ್ತು ಕೆವೈಸಿ ಅಪ್‌ಡೇಟ್ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಫಲಾನುಭವಿಗಳಿಗೆ ಸಕಾಲದಲ್ಲಿ ಪಿಂಚಣಿ ದೊರಕಲಿದ್ದು, ಪ್ರಸ್ತುತ 1,534 ಮಂದಿ ಆಧಾರ್ ಜೋಡಣೆ ಬಾಕಿ ಇದೆ. ಶೀಘ್ರದಲ್ಲಿ ಇದು ಶೂನ್ಯಕ್ಕೆ ಬರಲಿದೆ ಎಂದು ದ.ಕ. ಜಿಲ್ಲಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.