ಹಜ್ ಯಾತ್ರೆ: ಮೂಲ ಪಾಸ್‌ಪೋರ್ಟ್ ಸಲ್ಲಿಕೆಗೆ ಫೆ.18 ಕೊನೆಯ ದಿನ
ಮಂಗಳೂರು, ಫೆ.2: ಹಜ್ ಕಮಿಟಿ ಆಫ್ ಇಂಡಿಯಾ ಮೂಲಕ 2025ರಲ್ಲಿ ಪವಿತ್ರ ಹಜ್ ಯಾತ್ರೆಗೆ ಆಯ್ಕೆಯಾಗಿರುವ ಎಲ್ಲ ಯಾತ್ರಿಕರು ಇಂಟರ್‌ನ್ಯಾಶನಲ್ ಇಂಡಿಯನ್ ಮೆಶಿನ್ ರೀಡೆಬಲ್ ಆಗಿರುವ ತಮ್ಮ ಪಾಸ್‌ಪೋರ್ಟ್‌ನ ಮೂಲಪ್ರತಿಯನ್ನು ಆಯಾ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಹಜ್ ಸಮಿತಿಗಳಿಗೆ ಸಲ್ಲಿಸಲು ಫೆ.18 ಕೊನೆಯ ದಿನವಾಗಿದೆ.
ವೀಸಾ ಪ್ರಕ್ರಿಯೆಯಲ್ಲಿ ವಿಳಂಬವನ್ನು ತಪ್ಪಿಸಲು ಯಾತ್ರಿಕರು ತಮ್ಮ ಪಾಸ್‌ಪೋರ್ಟ್‌ಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಬೇಕಾಗಿದೆ. ಕವರ್ ಅಡಿಯಲ್ಲಿ ನೋಂದಾಯಿಸಲ್ಪಟ್ಟವರು ಗೊಂದಲವನ್ನು ತಡೆಗಟ್ಟುವ ಉದ್ದೇಶಕ್ಕಾಗಿ ತಮ್ಮ ಪಾಸ್‌ಪೋರ್ಟ್‌ಗಳನ್ನು ಒಟ್ಟಿಗೆ ಸಲ್ಲಿಸಬೇಕಾಗಿದೆ. ಪಾಸ್‌ಪೋರ್ಟ್ ಸಲ್ಲಿಕೆಗೆ ಮೊದಲು ಯಾತ್ರಿಕರು ತಮ್ಮ ಪಾಸ್‌ಪೋರ್ಟ್ ಮಾನ್ಯವಾಗಿರುವುದು ಮತ್ತು ಉತ್ತಮ ಸ್ಥಿತಿಯಲ್ಲಿರುವುದನ್ನು ದೃಢಪಡಿಸಿಕೊಳ್ಳಬೇಕು. ಪಾಸ್‌ಪೋರ್ಟ್ ಕನಿಷ್ಠ ಎರಡು ಸತತ ಖಾಲಿ ಪುಟಗಳನ್ನು ಹೊಂದಿರಬೇಕು. ಪಾಸ್‌ಪೋರ್ಟ್ ಹಾನಿಗೊಂಡಿರುವುದು ಅಥವಾ ಖಾಲಿ ಪುಟಗಳ ಇಲ್ಲದಿದ್ದರೆ ಅವರು ತಮ್ಮ ರಾಜ್ಯದ ಹಜ್ ಸಮಿತಿಯ ಗಮನಕ್ಕೆ ತಂದು, ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್‌ನ ಪ್ರತಿಯೊಂದಿಗೆ ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾಗಿದೆ. ಹೀಗೆ ಪಡೆದ ಹೊಸ ಪಾಸ್‌ಪೋರ್ಟ್‌ನ್ನು ಫೆಬ್ರವರಿ 18ರೊಳಗೆ ಸಲ್ಲಿಸುವಂತೆ ಹಜ್ ಕಮಿಟಿ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಝೀಮ್ ಅಹ್ಮದ್ ಎ. ಹೊರಡಿಸಿದ ಸುತ್ತೋಲೆ ತಿಳಿಸಿದೆ.
ಹಜ್ ಯಾತ್ರಿಕರಿಂದ ಪಾಸ್‌ಪೋರ್ಟ್‌ನ್ನು ಪಡೆಯುವಾಗ ಪಾಸ್‌ಪೋರ್ಟ್ ಸರಿಯಾಗಿರುವುದನ್ನು ರಾಜ್ಯ ಹಜ್ ಕಮಿಟಿ ದೃಢಪಡಿಸಬೇಕಾಗಿದೆ. ಒಂದು ವೇಳೆ ಪಾಸ್‌ಪೋರ್ಟ್ ಆ ರೀತಿ ಇಲ್ಲದಿದ್ದರೆ ರಾಜ್ಯ ಹಜ್ ಸಮಿತಿಯು ತಕ್ಷಣವೇ ಪಾಸ್‌ಪೋರ್ಟ್ ಸಂಬಂಧಪಟ್ಟವರಿಗೆ ವಾಪಸ್ ನೀಡಿ 15 ದಿನಗಳಲ್ಲಿ ಹೊಸ ಪಾಸ್‌ಪೋರ್ಟ್‌ನ್ನು ಸಲ್ಲಿಸಲು ಸೂಚಿಸು ವಂತೆ ರಾಜ್ಯ ಹಜ್ ಸಮಿತಿಗಳಿಗೆ ಹಜ್ ಕಮಿಟಿ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೊರಡಿಸಿದ ಸುತ್ತೋಲೆ ತಿಳಿಸಿದೆ.