×
Ad

ಜೆರಿಯಾಟ್ರಿಕ್ ಮೆಡಿಸಿನ್‌ ವೃದ್ಧರ ಆರೈಕೆಯಲ್ಲಿ ನಿರ್ಣಾಯಕ : ಡಾ.ಹಾರೂನ್ ಎಚ್.

ಆಗ್ರಾದಲ್ಲಿ ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾದ ರಾಷ್ಟ್ರೀಯ ವಾರ್ಷಿಕ ಸಮ್ಮೇಳನ GSICON 2025

Update: 2025-12-16 12:24 IST

ಆಗ್ರಾ: ಭಾರತವು ವೃದ್ಧಾಪ್ಯದ ಸಮಾಜವಾಗಿ ರೂಪುಗೊಳ್ಳುತ್ತಿರುವ ಹಂತದಲ್ಲಿ, ಆರೋಗ್ಯಕರ, ಸ್ವತಂತ್ರ ಹಾಗೂ ಘನತೆಯುತ ವೃದ್ಧಾಪ್ಯವನ್ನು ಖಚಿತಪಡಿಸುವಲ್ಲಿ ಜೆರಿಯಾಟ್ರಿಕ್ ಮೆಡಿಸಿನ್ ಪ್ರಮುಖ ವೈದ್ಯಕೀಯ ವಿಭಾಗವಾಗಿ ಹೊರಹೊಮ್ಮುತ್ತಿದೆ ಎಂದು ವೈದ್ಯ ಹಾಗೂ ವೈದ್ಯಕೀಯ ಶಿಕ್ಷಣ ತಜ್ಞ ಡಾ.ಹಾರೂನ್ ಎಚ್. ಹೇಳಿದ್ದಾರೆ.

ಡಿ.12ರಿಂದ 14ರವರೆಗೆ ಆಗ್ರಾದಲ್ಲಿ ನಡೆದ ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾದ ರಾಷ್ಟ್ರೀಯ ವಾರ್ಷಿಕ ಸಮ್ಮೇಳನ GSICON 2025ರಲ್ಲಿ ವೃತ್ತಿನಿರತ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ವೃದ್ಧಾಪ್ಯ ತಜ್ಞರು, ವೈದ್ಯರು ಮತ್ತು ಸಂಶೋಧಕರು ಭಾಗವಹಿಸಿದ್ದರು.

ಜೆರಿಯಾಟ್ರಿಕ್ ಮೆಡಿಸಿನ್ ರೋಗ ಕೇಂದ್ರಿತ ಚಿಕಿತ್ಸೆಯ ಮಿತಿಯನ್ನು ಮೀರಿ, ವೃದ್ಧರ ಕ್ರಿಯಾತ್ಮಕ ಸ್ವಾತಂತ್ರ್ಯ, ಜೀವನಮಟ್ಟ ಮತ್ತು ಸಮಗ್ರ ಆರೋಗ್ಯ ಆರೈಕೆಗೆ ಒತ್ತು ನೀಡುತ್ತದೆ ಎಂದು ಡಾ.ಹಾರೂನ್ ಎಚ್. ಹೇಳಿದರು. ಪಾಲಿಫಾರ್ಮಸಿ, ನೆನಪಿನ ಶಕ್ತಿ ಕಡಿಮೆಯಾಗುವುದು, ಬೀಳುವುದು, ಪೌಷ್ಟಿಕಾಂಶ ಕೊರತೆ, ದೀರ್ಘಕಾಲದ ಕಾಯಿಲೆಗಳು ಹಾಗೂ ಮಾನಸಿಕ-ಸಾಮಾಜಿಕ ಸಮಸ್ಯೆಗಳಂತಹ ವೃದ್ಧರ ಸಂಕೀರ್ಣ ಅಗತ್ಯಗಳನ್ನು ಈ ವೈದ್ಯಕೀಯ ವಿಭಾಗವು ಸಮರ್ಥವಾಗಿ ನಿರ್ವಹಿಸುತ್ತದೆ ಎಂದರು.

ವೈದ್ಯಕೀಯ ಸೇವೆಯಲ್ಲಿ ಸಂವಹನ ಕೌಶಲ್ಯದ ಮಹತ್ವವನ್ನು ಪ್ರಸ್ತಾಪಿಸಿದ ಅವರು, ವಿಶೇಷವಾಗಿ ವೃದ್ಧ ರೋಗಿಗಳಿಗೆ ಸಂಬಂಧಿಸಿದಂತೆ ಕೆಟ್ಟ ಸುದ್ದಿಯನ್ನು ತಿಳಿಸುವ ಸಂದರ್ಭಗಳಲ್ಲಿ ಸಹಾನುಭೂತಿ ಮತ್ತು ಗೌರವಪೂರ್ಣ ಸಂವಹನ ಅಗತ್ಯವಿದೆ ಎಂದು ಹೇಳಿದರು. ಸ್ಪಷ್ಟ ಹಾಗೂ ಮಾನವೀಯ ಸಂವಹನವು ಚಿಕಿತ್ಸೆಯ ಅನುಸರಣೆ ಮತ್ತು ಆರೋಗ್ಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.

ಭಾರತದಲ್ಲಿ ಜೀವಿತಾವಧಿಯ ಹೆಚ್ಚಳ, ಬದಲಾಗುತ್ತಿರುವ ಕುಟುಂಬ ವ್ಯವಸ್ಥೆಗಳು ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಡಿಮೆನ್ಷಿಯಾ ಮುಂತಾದ ದೀರ್ಘಕಾಲದ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಹೆಚ್ಚುತ್ತಿರುವ ಪ್ರಮಾಣವು ಸಂಘಟಿತ ವೃದ್ಧಾಪ್ಯದ ಆರೈಕೆಯನ್ನು ತುರ್ತು ಅಗತ್ಯವನ್ನಾಗಿ ಮಾಡಿದೆ ಎಂದು ಡಾ.ಹಾರೂನ್ ಎಚ್. ಅಭಿಪ್ರಾಯಪಟ್ಟರು.

ಸಮರ್ಪಕ ಜೆರಿಯಾಟ್ರಿಕ್ ಸೇವೆಗಳು ಅಗತ್ಯವಲ್ಲದ, ಆಸ್ಪತ್ರೆ ದಾಖಲಾತಿಗಳನ್ನು ಕಡಿಮೆ ಮಾಡಬಲ್ಲವು ಹಾಗೂ ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ತಗ್ಗಿಸಬಲ್ಲವು ಎಂದು ಅವರು ಉಲ್ಲೇಖಿಸಿದರು.

ವೃದ್ಧಾಪ್ಯದ ಕ್ಷೇತ್ರದಲ್ಲಿನ ಶೈಕ್ಷಣಿಕ ಮತ್ತು ವೃತ್ತಿಪರ ಕೊಡುಗೆಗಳನ್ನು ಗುರುತಿಸಿ, ಡಾ.ಹರೂನ್ ಎಚ್. ಅವರನ್ನು ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ಉನ್ನತ ಶಿಕ್ಷಣ ಸಚಿವ ಯೋಗೇಂದ್ರ ಉಪಾಧ್ಯಾಯ, ಪದ್ಮಶ್ರೀ ಪ್ರೊ.ಡಾ.ಡಿ.ಕೆ.ಹಝ್ರಾ, ಡಾ.ಪ್ರಶಾಂತ್ ಗುಪ್ತ, ಡಾ.ಒ.ಪಿ.ಶರ್ಮಾ ಸೇರಿದಂತೆ ಜೆರಿಯಾಟ್ರಿಕ್ ಸೊಸೈಟಿ ಆಫ್ ಇಂಡಿಯಾದ ಪ್ಸಘಟನಾ ಸಮಿತಿಯ ಹಿರಿಯ ಸದಸ್ಯರು ಉಪಸ್ಥಿತರಿದ್ದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News