×
Ad

ಮಂಗಳೂರು ಮಹಾನಗರ ಪಾಲಿಕೆ: 180.70 ಕೋಟಿ ರೂ.ಗಳ ಮಿಗತೆ ಬಜೆಟ್

Update: 2025-02-25 22:40 IST

ಮಂಗಳೂರು: ಮಂಗಳೂರು ಮಗಾನಗರ ಪಾಲಿಕೆಯಲ್ಲಿ ಮುಂದಿನ 2025-26ನೇ ಸಾಲಿನಲ್ಲಿ 741.25 ಕೋಟಿ ರೂ. ಆದಾಯ ಹಾಗೂ 886.33 ಕೋಟಿ ರೂ. ವೆಚ್ಚ ಹಾಗೂ 180.70 ಕೋಟಿ ರೂ.ಗಳ ಉಳಿಕೆ ನಿರೀಕ್ಷಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣದಲ್ಲಿ ಮೇಯರ್ ಮನೋಜ್ ಕುಮಾರ್‌ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವಿಶೇಷ ಸಭೆಯಲ್ಲಿ ತೆರಿಗೆ ನಿರ್ಧರಣೆ ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಕದ್ರಿ ಮನೋಹರ ಶೆಟ್ಟಿ ಬಜೆಟ್ ಮಂಡಿಸಿದರು.

ಈ ಸಾಲಿನಲ್ಲಿ ನೀರಿನ ತೆರಿಗೆಯಿಂದ 5,500 ಲಕ್ಷ ರೂ., ಆಸ್ತಿ ತೆರಿಗೆ 9,591.45 ಲಕ್ಷ ರೂ., ಉದ್ದಿಮೆ ಪರವಾನಿಗೆ 460.43 ಲಕ್ಷ ರೂ., ಎಸ್ ಡಬ್ಲ್ಯೂಎಂ ಕರ 2,500 ಲಕ್ಷ ರೂ., ರಸ್ತೆ ಕಡಿತ ಮತ್ತು ಪುನರ್ ನಿರ್ಮಾಣ ಶುಲ್ಕ 875 ಲಕ್ಷ ರೂ., ಒಳಚರಂಡಿ ಶುಲ್ಕ 440 ಲಕ್ಷ ರೂ., ಮಾರುಕಟ್ಟೆ, ಸ್ಟಾಲ್ ಹಾಗೂ ಇತರ ಬಾಡಿಗೆ 539 ಲಕ್ಷ ರೂ., ಖಾತಾ ವರ್ಗಾವಣೆ ಶುಲ್ಕ 402 ಲಕ್ಷ ರೂ., ಕಟ್ಟಡ ಪರವಾನಿಗೆ ಮತ್ತು ಪ್ರೀಮಿಯಂ ಎಫ್‌ಎಆರ್ 2,481.85 ಲಕ್ಷ ರೂ., ಅಧಿಭಾರ ಶುಲ್ಕ 1,007 ಲಕ್ಷ ರೂ. ಹಾಗೂ ಜಾಹೀರಾತು ತೆರಿಗೆ 370 ಲಕ್ಷ ರೂ. ಮೊತ್ತ ಸಂಗ್ರಹ ನಿರೀಕ್ಷಿಸಲಾಗಿದೆ. ವಿವಿಧ ಲೆಕ್ಕ ಶೀರ್ಷಿಕೆಗಳಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಒಟ್ಟು 26,454.53 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದೆ.

ಇದಲ್ಲದೆ ಎಸ್ಸಿ ಎಸ್ಟಿ ಪಂಗಡಕ್ಕೆ ಅಪಘಾತ ವಿಮೆಯಾಗಿ 1 ಕೋಟಿ ರೂ., ಜನರ ಆರೋಗ್ಯ ರಕ್ಷಣೆಗೆ 44 ಲಕ್ಷ ರೂ., ಪ್ರತಿ ವಾರ್ಡಿಗೆ 3 ಸಿಸಿ ಟಿವಿ ಅಳವಡಿಸಲು 90 ಲಕ್ಷ ರೂ., ಸ್ವಚ್ಛತೆಯ ಕಡೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ವಹಿಸಲು 20 ಲಕ್ಷ ರೂ., ಬೀದಿ ನಾಯಿಗಳ ನಿಯಂತ್ರಣಕ್ಕೆ 56 ಲಕ್ಷ ರೂ., ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ಸೋಲಾರ್ ಪ್ಯಾನರ್ ಬೋರ್ಡ್ ಅಳವಡಿಕೆಗೆ 10 ಕೋಟಿ ರೂ., ಸರಕಾರಿ ಶಾಲೆ -ನಮ್ಮ ಹೊಣೆಯಡಿ ದುರಸ್ತಿಗೆ 35 ಲಕ್ಷ ರೂ., ಬ್ರಹ್ಮಶ್ರೀ ನಾರಾಯಣಗುರು ಮತ್ತು ಭಗವಾನ್ ಶ್ರೀನಿತ್ಯಾನಂದ ಸ್ವಾಮಿಗಳ ಜಯಂತಿ ಆಚರಣೆಗೆ 20 ಲಕ್ಷ ರೂ., ವೀರ ಯೋಧರ ಕಲ್ಯಾಣ ನಮ್ಮ ಕರ್ತವ್ಯ ನಮ್ಮ ಯೋದ ಕಾರ್ಯಕ್ರಮದಡಿ ವೀರ ಯೋಧರ ಕುಟುಂಬಕ್ಕೆ ನೆರವಾಗಲು 10 ಲಕ್ಷ ರೂ., ತುಳು ಭಾಷೆ ಅಭಿವೃದ್ಧಿ ಬಲೆ ತುಳುಒರಿಪಾಲೆಗಾಗಿ 10 ಲಕ್ಷ ರೂ ., ಜನಸಾಮಾನ್ಯರಿಂದ ವಿಜ್ಞಾನ-ವಿಜ್ಞಾನಿ, ಸುಜ್ಞಾನಿ ಯೋಜನೆಯಡಿ 5 ಲಕ್ಷ ರು., ನಗರ ಹಸುರೀಕರಣಕ್ಕೆ 45 ಲಕ್ಷ ರೂ., ಕಂಬಳ ಉತ್ತೇಜನಕ್ಕೆ 6 ಲಕ್ಷ ರೂ., ಯಕ್ಷಗಾನಕ್ಕೆ 10 ಲಕ್ಷ ರೂ., ಕಲಾ ಕ್ಷೇತ್ರದ ಸಾಧಕರಿಗೆ ಪ್ರೋತ್ಸಾಹಧನವಾಗಿ 10 ಲಕ್ಷ ರೂ., ಸಂಸ್ಕೃತಿ ಮತ್ತು ಕ್ರೀಡೆಗೆ 3 ಲಕ್ಷ ರೂ., ಸ್ವಸ್ಥ ಕುಟೀರ ಯೋಜನೆಯಡಿ ಸಹಾಯಧನ ಮಿತಿಯನ್ನು 50 ಸಾವಿರ ರೂ.ಗೆ ಹೆಚ್ಚಳ, ಪ್ರಾಕೃತಿಕ ವಿಕೋಪ-ಸಂತ್ರಸ್ತರಿಗೆ ಸಹಾಯ ಹಸ್ತದಡಿ 10 ಲಕ್ಷ ರೂ., ಪಾಲಿಕೆಗೆ ಒಂದು ಜೆಸಿಬಿ ಖರೀದಿಗೆ 40 ಲಕ್ಷ ರೂ., ಮೇಯರ್ ಬಂಗ್ಲೋ ಮತ್ತು ರಿಕ್ರಿಯೇಷನ್ ಕ್ಲಬ್‌ಗೆ 5 ಕೋಟಿ ರೂ., ಶಿಶುಪಾಲನಾ ಕೇಂದ್ರ ಅಭಿವೃದ್ಧಿಗೆ 8 ಲಕ್ಷ ರೂ., ಪ್ರದೇಶಾಭಿವೃದ್ಧಿಯಡಿ ಪ್ರತಿ ವಾರ್ಡ್‌ಗೆ 75 ಲಕ್ಷ ರು. ಹಂಚಿಕೆ ಬಗ್ಗೆ ಪ್ರಸ್ತಾಪಿಸಲಾಗಿದೆ.

ಜನಸ್ನೇಹಿ ಆಡಳಿತಕ್ಕೆ ಆದ್ಯತೆ: ಜನಸ್ನೇಹಿ ಆಡಳಿತ ಮತ್ತು ಆರ್ಥಿಕ ಸುಧಾರಣೆಗೆ ಹೆಚ್ಚಿನ ಆದ್ಯತೆ, ಆದಾಯ ಮೂಲ ಗಳನ್ನು ಗುರುತಿಸಿ ರಾಜಸ್ವ ಕ್ರೋಢೀಕರಣಕ್ಕೆ ಒಳಪಡಿಸುವುದು, ಪರಿಸರ ಮತ್ತು ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು, ಪ್ರಗತಿಯಲ್ಲಿರುವ ಕಾಮಗಾರಿಗಳ ಪೂರ್ಣಗೊಳಿಸಲು ಆದ್ಯತೆ ಸ್ವಚ್ಛತೆ ಮತ್ತು ಶುಚಿತ್ವಕ್ಕೆ ಆದ್ಯತೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಗಮನ, ನಾಗರಿಕರ ಅಭಿವೃದ್ಧಿಗೆ ವಿಶೇಷ ಕಲ್ಯಾಣ ಕಾರ್ಯಕ್ರಮಗಳ ದೃಷ್ಟಿಕೋನವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

*ಸ್ಮಾರ್ಟ್ ಸಿಟಿ ಬಾಕಿ ಅನುದಾನ: ಸ್ಮಾರ್ಟ್ ಸಿಟಿ ಯೋಜನೆಯಡಿ 930 ಕೋಟಿ ರೂ.ಗಳಲ್ಲಿ ಒಟ್ಟು 57 ಕಾಮಗಾರಿ ಮತ್ತು 4 ಪಿಪಿಪಿ ಯೋಜನೆ ಅನುಮೋದಿಸಲಾಗಿದೆ. ಇದರಲ್ಲಿ 39 ಯೋಜನೆ ಪೂರ್ಣಗೊಂಡಿದೆ. 8 ಕಾಮಗಾರಿ ಪ್ರಗತಿಯಲ್ಲಿದೆ. 10 ಯೋಜನೆಗಳಿಗೆ ಇಲಾಖೆ ಅನುದಾನ ಬಿಡುಗಡೆಗೊಳಿಸಿದೆ. ಈವರೆಗೆ 916 ಕೋಟಿ ರೂ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಒದಗಿಸಲಾಗಿದೆ. ಉಳಿದ 73.50 ಕೋಟಿ ರು.ಗೆ ಅನುಮೋದನೆ ಸಿಕ್ಕಿದ್ದು, ಸ್ಮಾರ್ಟ್ ಸಿಟಿ ಕಂಪೆನಿಗೆ ಪಾವತಿಯಾಗಲಿದೆ ಎಂದು ಪ್ರಸ್ತಾಪಿಸಲಾಗಿದೆ.

ಆಡಳಿತ ಸುಧಾರಣಾ ಕ್ರಮ:ಪಾಲಿಕೆಯ ಕಾಯಂ ನೌಕರರಿಗೆ ಜೆಪ್ಪುವಿನಲ್ಲಿ ನೂತನ ವಸತಿ ನಿರ್ಮಿಸಲಾಗಿದ್ದು, ಸಿಬ್ಬಂದಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುವುದು. ಜಿ4 ಕೆಟಗರಿಗೆ ಮಂಜೂರಾತಿ ಸಿಕ್ಕಿದ್ದು, ಈ ಸಾಲಿನಲ್ಲಿ ಕಾರ್ಯಗತ ಗೊಳ್ಳಲಿದೆ. ಕಳೆದ ಸಾಲಿನಲ್ಲಿ ಸಿಬ್ಬಂದಿ ಆರೋಗ್ಯ ಸಿರಿ ಯೋಜನೆಯ ಸಿಬ್ಬಂದಿ ಕುಟುಂಬ ಮಿತ್ರ ಯೋಜನೆಯನ್ನು ಈ ಸಾಲಿನಲ್ಲೂ ವಿಸ್ತರಿಸಲಾಗಿದೆ. ಪಾಲಿಕೆ ವ್ಯಾಪ್ತಿಯ ಕೇಂದ್ರ ಹಾಗೂ ರಾಜ್ಯ ಸರಕಾರಿ ಕಟ್ಟಡಗಳ ಮೇಲಿನ ಸೇವಾ ಶುಲ್ಕ ಹಾಗೂ ಆಸ್ತಿ ತೆರಿಗೆ ವಿನಾಯ್ತಿ ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ಸೇವಾ ಶುಲ್ಕ ಸಂಗ್ರಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ವಿಭಾಗ ಮುಖ್ಯಸ್ಥರ ಮೇಲುಸ್ತುವಾರಿಯಲ್ಲಿ ಕಂದಾಯ ಜಾಗೃತದಳ ಸ್ಥಾಪಿಸಿ ಪಾಲಿಕೆಯ ಸಂಪನ್ಮೂಲ ಸೋರಿಕೆ ಪ್ರಕರಣಗಳನ್ನು ಪತ್ತೆಹಚ್ಚುವ ಮೂಲಕ ತೆರಿಗೆ ಮತ್ತು ತೆರಿಗೇತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.

ಆಸ್ತಿ ತೆರಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಳವಡಿಸಲು ತಂಡ ರಚಿಸಿ ಮನೆ ಮನೆಗೆ ಭೇಟಿ ನೀಡಿ ಸರ್ವೆ ನಡೆಸಲು ಉದ್ದೇಶಿಸಲಾಗಿದೆ. ಆಯ್ದ ರಸ್ತೆ ಜಂಕ್ಷನ್‌ಗಳಲ್ಲಿ ಪಿಂಕ್ ಮಾದರಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಉದ್ದೇಶಿಸ ಲಾಗಿದೆ. ಉಪ ಮೇಯರ್ ಭಾನುಮತಿ, ಆಯುಕ್ತ ರವಿಚಂದ್ರ ನಾಯಕ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News