×
Ad

ಬೆಳಪು ಗ್ರಾಪಂನಲ್ಲಿ 2000 ಸಸಿ ವಿತರಣೆ ಕಾರ್ಯಕ್ರಮ

Update: 2025-07-06 18:03 IST

ಪಡುಬಿದ್ರಿ: ಮನುಷ್ಯನ ಸ್ವಾರ್ಥಕ್ಕಾಗಿ ಅಭಿವೃದ್ಧಿಯ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪರಿಸರವನ್ನು ನಾಶ ಮಾಡುವುದು ಸರಿಯಲ್ಲ. ಇದರಿಂದ ಇನ್ನಷ್ಟು ಗಂಭೀರ ಪರಿಣಾಮ ಎದುರಿಸಬೇಕಾದೀತು. ಈ ನಿಟ್ಟಿನಲ್ಲಿ ಪರಿಸರ ಹಸಿರನ್ನಾಗಿಸಲು ಗ್ರಾಮಕ್ಕೊಂದು ಅರಣ್ಯ ಬೆಳೆಸಿ ಉಳಿಸಬೇಕು ಎಂದು ಮೂಡಬಿದ್ರಿ ಅರಣ್ಯಾಧಿಕಾರಿ ಪಿ. ಶ್ರೀಧರ್ ಕರೆ ನೀಡಿದರು.

ಬೆಳಪು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಬೆಳಪು ಗ್ರಾಮ ಪಂಚಾಯತ್ ಹಾಗೂ ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ಇವರ ಸಹಯೋಗದೊಂದಿಗೆ 16ನೇ ವರ್ಷದ ಸಸಿ ವಿತರಣಾ ಕಾರ್ಯಕ್ರಮ ಹಾಗೂ ಸಾವಯವ ಕೃಷಿಕರಿಗೆ ಮತ್ತು ಸೈನಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮ ಸುತ್ತ ಶೇ.22ರಷ್ಟು ಪರಿಸರ ಮಾತ್ರ ಇಂದು ಕಾಣಬಹುದು. ಮನುಷ್ಯ ಸಸಿಯಾಗಿ ಬದುಕಬೇಕಿದೆ. ಅರಣ್ಯ ರಕ್ಷಣೆ ಅರಣ್ಯ ಇಲಾಖೆಯವರ ಕೆಲಸ ಮಾತ್ರವಲ್ಲದೆ ಪ್ರತಿ ನಾಗರಿಕರ ಜವಾಬ್ದಾರಿ ಎಂದರು.

ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ರೋಗಕ್ಕೂ ಮದ್ದು ಪರಿಸರ. ಪರಿಸರಕ್ಕೆ ಸಮಸ್ಯೆ ತಂದೊಡ್ಡಿದ ನಾವು ಇಂದು ಸಮಸ್ಯೆ ಪರಿಹಾರಕ್ಕಾಗಿ ಪರಿಸರಕ್ಕೆ ಮಹತ್ವ ನೀಡಬೇಕಾಗಿದೆ. ಒಂದು ಲಕ್ಷ ಗಿಡ ನೆಡುವ ಸಂಕಲ್ಪ ಮಾಡಲಾಗಿದೆ ಎಂದರು.

ಸನ್ಮಾನ, ಸಸಿ ವಿತರಣೆ: ಈ ಸಂದರ್ಭದಲ್ಲಿ ಮಾಜಿ ಯೋಧರಾದ ಗೋಪಾಲ ಪೂಜಾರಿ, ಅನಂತರಾಮ ಭಟ್ ಹಾಗೂ ಗ್ರಾಮದ ಹಿರಿಯ ಸಾವಯವ ಕೃಷಿಕರಾದ ಜಗನ್ನಾಥ ಪೂಜಾರಿ, ಗಣೇಶ್ ಶೆಟ್ಟಿ ಬೆಳಪು, ಪರಿಸರ ಪ್ರೇಮಿ ಮೇಬೈಲು ಸದಾಶಿವ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆಗಳಿಗೆ ಒಟ್ಟು ಎರಡು ಸಾವಿರ ಸಸಿಗಳನ್ನು ವಿತರಿಸಲಾಯಿತು.

ಕಾಪು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ, ಕಾಪು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಹೆಜಮಾಡಿ, ಕಾಪು ರೋಟರಿ ಅಧ್ಯಕ್ಷ ಬಾಲಕೃಷ್ಣ ಆಚಾರ್ಯ, ಬೆಳಪು ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಶಹನವಾಜ್, ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ಅರಣ್ಯಾಧಿಕಾರಿ ಮಲ್ಲಿಕಾರ್ಜುನ, ಬೆಳಪು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶೋಭಾ ಭಟ್, ಸದಸ್ಯರಾದ ಶರತ್ ಕುಮಾರ್, ಸುಲೇಮಾನ್, ಸೌಮ್ಯ ಸುರೇಂದ್ರ, ನಸೀಮಾ ಬಾನು, ರೂಪಾ ಆಚಾರ್ಯ ಉಪಸ್ಥಿತರಿದ್ದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News