ಮಂಗಳೂರು: ಮರಾಠ ಟ್ರೋಫಿ-2024ಕ್ಕೆ ಚಾಲನೆ
ಮಂಗಳೂರು: ಮರಾಠ ಜನಾಂಗವು ಸಮಾಜಕ್ಕೆ ನೀಡಿದ ಕೊಡುಗೆಯು ದೇಶಕ್ಕೆ ಮಾದರಿಯಾಗಿದೆ. ಶಿವಾಜಿ ಮಹಾರಾಜರ ಆದರ್ಶ ವ್ಯಕ್ತಿತ್ವವು ಸಂಪೂರ್ಣ ಹಿಂದೂ ಸಮಾಜಕ್ಕೆ ಸಂದುವಂತಹದ್ದಾಗಿದೆ. ಪ್ರತಿ ಕ್ಷೇತ್ರಗಳಲ್ಲೂ ಮರಾಠ ಸಮಾಜ ಆಶಾದಾಯಕವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಮೇಯರ್ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.
ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸದ ಸಲುವಾಗಿ ಬಜಾಲ್ ಜಲ್ಲಿಗುಡ್ಡೆಯ ಅಂಬಾ ಭವಾನಿ ಗೇಮ್ಸ್ ವತಿಯಿಂದ ಶಾಸಕ ಡಿ. ವೇದವ್ಯಾಸ್ ಕಾಮತ್‌ರ ಸಹಕಾರದಲ್ಲಿ ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಮರಾಠ ಟ್ರೋಫಿ-2024ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ಅಂಬಾ ಭವಾನಿ ಭಜನಾ ಮಂದಿರದ ಅಧ್ಯಕ್ಷ ಹರಿಕೇಶವ್ ಜಿ. ಜಾಧವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ನಿವೃತ್ತ ಬ್ಯಾಂಕ್ ಮ್ಯಾನೆಜರ್ ಸುರೇಶ್ ಕೆ. ರಾವ್ ಲಾಡ್, ಆರ್ಯ ಯಾನೆ ಮರಾಠ ಸಮಾಜ ಸಂಘದ ಅಧ್ಯಕ್ಷ ವಾಮನ ಮುಳ್ಳಂಗೋಡು, ಶ್ರೀ ಅಂಬಾ ಭವಾನಿ ಭಜನಾ ಮಂದಿರದ ಉಪಾಧ್ಯಕ್ಷ ಶಿಶುಪಾಲ್ ರಾವ್ ಭೋಂಸ್ಲೆ, ಜೊತೆ ಕೋಶಾಧಿಕಾರಿ ಹರೀಶ್ ಜಾಧವ್, ಧಾರ್ಮಿಕ ಮುಖಂಡರಾದ ನೀಳೋಜಿ ರಾವ್, ಅಂಬಾ ಭವಾನಿ ಗೇಮ್ಸ್ ಟೀಮ್‌ನ ಗೌರವ ಸಲಹೆಗಾರ ಸುಧಾಕರ್ ಪಾಟೀಲ್ ಹಾಗೂ ದೇವಿ ಪ್ರಸಾದ್ ಲಾಡ್ ಉಪಸ್ಥಿತರಿದ್ದರು.
ಗಣೇಶ್ ಪವಾರ್ ಸ್ವಾಗತಿಸಿದರು. ಆರ್. ಜೆ. ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.