ಹಕ್ಕೊತ್ತಾಯ ಮಂಡಿಸಲು ಡಿ.24ರಂದು ಮಂಗಳೂರಿನಲ್ಲಿ ರಾಜ್ಯ ಆದಿ ದ್ರಾವಿಡ ಸಮಾವೇಶ
ಮಂಗಳೂರು, ಡಿ.21: ತುಳು ಭಾಷಿಕ ಆದಿ ದ್ರಾವಿಡ ಸಮುದಾಯದ ವಿವಿಧ ಬೇಡಿಕೆಗಳ ಬಗ್ಗೆ ಸರಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲು ಡಿ.24ರಂದು ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ರಾಜ್ಯ ಆದಿ ದ್ರಾವಿಡ ಸಮಾವೇಶ ಆಯೋಜಿಸಲಾಗಿದೆ.
ಬೆಳಗ್ಗೆ 10ಕ್ಕೆ ಮೆರವಣಿಗೆಯಲ್ಲಿ ಆಗಮಿಸುವ ಸಮಾಜದ ಜನರು ಹಾಗೂ ಮುಖಂಡರು ಪುರಭವನದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. 11ಕ್ಕೆ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಕಾರ್ಯಕ್ರಮ ಸಂಯೋಜಕ ಗಣೇಶ್ ಪ್ರಸಾದ್ ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತುಳು ಭಾಷಿಕ ಆದಿದ್ರಾವಿಡ ಸಮುದಾಯವು ಆದಿದ್ರಾವಿಡ, ಆದಿ ಕರ್ನಾಟಕ, ಹೊಲೆಯ, ಪಾಲೆ, ಕರಾದಿ, ಕಲ್ಲಾದಿ, ಹಸಲರು ಮುಂತಾದ ಹಲವು ಜಾತಿ ಹೆಸರಿನಲ್ಲಿ ಹಂಚಿ ಹೋಗಿವೆ. ಸತ್ಯಸಾರಮಾಣಿ ಕುಲದೈವ ಎಂದು ಆರಾಧಿಸುವವರನ್ನು ಆದಿದ್ರಾವಿಡರೆಂದು ಪರಿಗಣಿಸಿ, ನಮ್ಮ ಜಾತಿಗೆ ಆದಿದ್ರಾವಿಡ (ಸತ್ಯಸಾರಮಾನಿ) ಎಂಬ ಜಾತಿ ಪ್ರಮಾಣ ಪತ್ರ ನೀಡಲು ಸರಕಾರ ಮಟ್ಟದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ನಮ್ಮ ಸಮುದಾಯಕ್ಕೆ ವಸತಿ, ಉದ್ಯೋಗ, ಸಾಮಾಜಿಕ, ಶೈಕ್ಷಣಿಕ ಮತ್ತು ಜನಪದೀಯ ಬೆಳವಣಿಗೆಗಾಗಿ 200 ಕೋಟಿ ರೂ. ವಿಶೇಷ ಅಭಿವೃದ್ಧಿ ಪ್ಯಾಕೇಜ್ ಘೋಷಿಸಬೇಕು ಎಂದು ಸರಕಾರದ ಮುಂದೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಅವರು ಹೇಳಿದರು.
ಆದಿದ್ರಾವಿಡ ಸಮುದಾಯದ ಅರ್ಹ ಫಲಾನುಭವಿಗಳಿಗೆ ಡಿ.ಸಿ. ಮನ್ನಾ ಯೋಜನೆ, ಬಗರ್ ಹುಕುಂ ಹಾಗೂ ಅಂಬೇಡ್ಕರ್ ಆವಾಸ್ ಯೋಜನೆಗಳ ಅಡಿಯಲ್ಲಿ ವಸತಿ ಮತ್ತು ಕೃಷಿ ಯೋಗ್ಯ ಭೂಮಿಗಳನ್ನು ಹಂಚಿಕೆ ಮಾಡಬೇಕು. ಸರಕಾರದ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಆದಾಯದ ಮಿತಿಯನ್ನು 5 ಲಕ್ಷ ರೂ.ವಿಗೆ ಏರಿಸುವಂತೆ ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಾನಂದ ಬಲ್ಲಾಳ್ ಬಾಗ್, ಪ್ರಧಾನ ಕಾರ್ಯದರ್ಶಿ ರಮೇಶ್ ಉಳ್ಳಾಲ್, ಸಂಘಟನಾ ಸಂಚಾಲಕ ಪ್ರೇಮನಾಥ್ ಪಿ.ಬಿ. ಬಲ್ಲಾಳ್ ಬಾಗ್, ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆರ್ಬಿಗುಡ್ಡೆ, ಉಪಾಧ್ಯಕ್ಷ ಸುನೀಲ್ ಕುಮಾರ್ ಬಲ್ಲಾಳ್ ಬಾಗ್, ಮಂಗಳೂರು ತಾಲೂಕು ಅಧ್ಯಕ್ಷ ಸುನೀಲ್ ಕುಮಾರ್ ಕಂಕನಾಡಿ ಉಪಸ್ಥಿತರಿದ್ದರು.