×
Ad

ಉಪ್ಪಿನಂಗಡಿ: ನೆಚ್ಚಿನ ಗುರುಗೆ ರಕ್ತದ ಅವಶ್ಯಕತೆಗೆ ತ್ವರಿತ ಸ್ಪಂದನೆ; 24 ಯುನಿಟ್ ರಕ್ತದಾನ

Update: 2024-11-28 22:33 IST

ಉಪ್ಪಿನಂಗಡಿ: ನೆಚ್ಚಿನ ಗುರುವಿನ ಶಸ್ತ್ರ ಚಿಕಿತ್ಸೆಗೆ ಬೇಕಾಗಿದ್ದ 24 ಯುನಿಟ್ ರಕ್ತದ ಅವಶ್ಯಕತೆಯನ್ನು ತಕ್ಷಣದ ಸ್ಪಂದನದಿಂದಾಗಿ ತ್ವರಿತವಾಗಿ ಒದಗಿಸುವ ಮೂಲಕ ಗುರುಗಳ ಮೇಲಿನ ಪ್ರೀತಿಯನ್ನು ಜೀವಂತವಿರಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಶಿಕ್ಷಕರಾಗಿದ್ದ, ಪ್ರಸಕ್ತ ಬೆಳ್ತಂಗಡಿ ತಾಲೂಕಿನ ಪ್ರೌಢ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರೊಬ್ಬರಿಗೆ ಅವರ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಯು ಬುಧವಾರದಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಡೆದಿತ್ತು. ಈ ಸಂದರ್ಭದಲ್ಲಿ 24 ಯುನಿಟ್ ರಕ್ತದ ಅಗತ್ಯತೆಯು ಮೂಡಿದಾಗ , ಕಂಗೆಟ್ಟ ಶಿಕ್ಷಕರ ಕುಟುಂಬಸ್ಥರು ಉಪ್ಪಿನಂಗಡಿಯ ಸಾಮಾಜಿಕ ಕಾರ್ಯಕರ್ತರಲ್ಲಿ ರಕ್ತದ ಹೊಂದಿಕೆಯನ್ನು ಪ್ರಸ್ತಾಪಿಸಿದರು.

ಕೂಡಲೇ ಕಾರ್ಯಪ್ರವೃತ್ತರಾದ ಯು. ಮಹಮ್ಮದ್ ಮುಸ್ತಾಫ , ಅಬೂಬಕ್ಕರ್ ಸಿದ್ದಿಕ್, ಹಾರೂನ್ ರಶೀದ್ ಮೊದಲಾದ ಸಾಮಾಜಿಕ ಕಾಳಜಿಯ ಕಾರ್ಯಕರ್ತರು ಮಂಗಳೂರಿನ ತಮ್ಮ ತಮ್ಮ ಸ್ನೇಹಿತ ಬಳಗವನ್ನು ಸಂಪರ್ಕಿಸಿ ಅಗತ್ಯತೆಯ 24 ಯುನಿಟ್ ರಕ್ತವನ್ನು ಆಸ್ಪತ್ರೆಗೆ ತೆರಳಿ ನೀಡುವ ಮೂಲಕ ತಮ್ಮ ನೆಚ್ಚಿನ ಗುರುಗಳ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಗೊಳಿಸಲು ನೆರವಾದರು.

ನಮ್ಮೂರಲ್ಲಿದ್ದ ಶಿಕ್ಷಕರೊಬ್ಬರು ಮಕ್ಕಳ ಶ್ರೇಯಸ್ಸಿಗಾಗಿ ಶ್ರಮಿಸಿದ ಶ್ರಮವನ್ನು ನೆನಪಿರಿಸಿ ಆ ಶಿಕ್ಷಕರ ಹಿತಕ್ಕಾಗಿ ಕ್ಷಣಾರ್ಧದಲ್ಲಿ ಸಂಘಟಿತ ಪ್ರಯತ್ನದಲ್ಲಿ ನೆರವಾದ ಯುವಕರ ಈ ರಕ್ತದಾನದ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News