ದ.ಕ.ಜಿಲ್ಲೆ: ನೀಟ್ ಪರೀಕ್ಷೆಗೆ 289 ವಿದ್ಯಾರ್ಥಿಗಳು ಗೈರು
ಮಂಗಳೂರು, ಮೇ 4: ವೈದ್ಯಕೀಯ ಶಿಕ್ಷಣದ ಪ್ರವೇಶಕ್ಕಾಗಿ ಸಾಮಾನ್ಯ ಮತ್ತು ಏಕರೂಪದ ರಾಷ್ಟ್ರೀಯ ಅರ್ಹತಾ-ಪ್ರವೇಶ ಪರೀಕ್ಷೆ ( ನೀಟ್)ಯು ಜಿಲ್ಲೆಯ ಸರಕಾರಿ ಮತ್ತು ಅನುದಾನಿತ ಕಾಲೇಜುಗಳ 21 ಕೇಂದ್ರಗಳಲ್ಲಿ ರವಿವಾರ ನಡೆಯಿತು. ಪರೀಕ್ಷೆಗೆ 9,065 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 8,776 ವಿದ್ಯಾರ್ಥಿಗಳು ಹಾಜರಾಗಿದ್ದರೆ, 289 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ನಗರದ ಕೆನರಾ, ಬೆಸೆಂಟ್‌ನ ಎರಡು ಪರೀಕ್ಷಾ ಕೇಂದ್ರಗಳ ಸಹಿತ ಕೆಲವು ಕಡೆ ಜೈಲಿನ ಜಾಮರ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ಬಯೋಮೆಟ್ರಿಕ್ ವಿಚಾರದಲ್ಲಿ ಸಮಸ್ಯೆ ಸೃಷ್ಟಿಯಾಗಿತ್ತು. ವಿದ್ಯಾರ್ಥಿ ಗಳು ಬಿಸಿಲಿನ ಝಳಕ್ಕೆ ಸರತಿ ಸಾಲಿನಲ್ಲಿ ನಿಂತು ಬಯೋಮೆಟ್ರಿಕ್‌ಗಾಗಿ ಕಾದು ಕೇಂದ್ರದೊಳಗೆ ಪ್ರವೇಶ ಪಡೆಯುವುದು ಅನಿವಾರ್ಯವಾಯಿತು.
ಮಧ್ಯಾಹ್ನದ ಬಳಿಕ ವಿದ್ಯಾರ್ಥಿಗಳಿಗೆ ಪರೀಕ್ಷೆಯಿದ್ದ ಕಾರಣ ವಿದ್ಯಾರ್ಥಿಗಳ ಜತೆಗೆ ಪೋಷಕರಿಗೂ ಸಮಸ್ಯೆ ಯಾಗಿತ್ತು. ನಗರ ಭಾಗದಲ್ಲಿಯೇ ಹೆಚ್ಚಿನ ಕೇಂದ್ರಗಳಿದ್ದರೂ ಕೂಡ ಹೊರಜಿಲ್ಲೆ ಸಹಿತ ಹೊರಭಾಗದಿಂದ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳನ್ನು ಹುಡುಕಾಡುವುದು ಕೂಡ ಸಮಸ್ಯೆಯಾಗಿತ್ತು.
ಕೆಲವೆಡೆ ಪಾರ್ಕಿಂಗ್ ಸಮಸ್ಯೆಯೂ ಎದುರಾಯಿತು. ಪೋಷಕರು ಬಸ್ ನಿಲ್ದಾಣ ಸಹಿತ ಅಂಗಡಿ ಮುಂಗಟ್ಟುಗಳ ಮುಂಭಾಗದಲ್ಲಿ ಕೂತು ಸಮಯ ಕಳೆಯುತ್ತಿರುವ ದೃಶ್ಯಗಳು ಕಂಡು ಬಂತು. ಪರೀಕ್ಷೆಯ ಮೇಲ್ವಿಚಾರಣೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಬಾಹ್ಯ ಏಜೆನ್ಸಿಗಳಿಗೆ ವಹಿಸಿತ್ತು. ಈ ಎಲ್ಲ ಏಜೆನ್ಸಿ ಗಳು ಕೊನೆಯ ಕ್ಷಣದಲ್ಲಿ ತಮ್ಮ ತಯಾರಿಯನ್ನು ಪ್ರಾರಂಭಿಸಿದ್ದರಿಂದ ಕೆಲವೊಂದು ಸಮಸ್ಯೆಗಳು ಎದುರಾಗಿರುವುದಾಗಿ ಪೋಷಕರು ಆರೋಪಿಸಿದ್ದಾರೆ. ಸುಗಮ ಪರೀಕ್ಷೆಗಾಗಿ ಜಿಲ್ಲಾ ಮಟ್ಟದಲ್ಲಿ ಹಲವು ಮುಂಜಾಗ್ರತಾ ಸಭೆಯನ್ನು ನಡೆಸಲಾಗಿದ್ದರೂ ಕೂಡ ಕೆಲವು ಸಮಸ್ಯೆಗಳು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಸವಾಲಾಗಿ ಪರಿಣಮಿಸಿತ್ತು.
ನೀಟ್ ಪರೀಕ್ಷೆ ಆರಂಭಗೊಂಡಂದಿನಿಂದ ಪರೀಕ್ಷೆಯನ್ನು ಅನುದಾನರಹಿತ ಸಂಸ್ಥೆಗಳಲ್ಲಿ ನಡೆಸಲಾಗು ತ್ತಿತ್ತು. ಈ ಬಾರಿ ಖಾಸಗಿಗಿಂತ ಸರಕಾರಿ, ಅನುದಾನಿತ ಕಾಲೇಜುಗಳಲ್ಲಿ ಪ್ರವೇಶ ಪರೀಕ್ಷೆಯನ್ನು ನಡೆಸಲಾಗಿದೆ ಎಂದು ನೀಟ್‌ಗೆ ಸಂಬಂಧಿಸಿದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.