ಸುರತ್ಕಲ್: ಅಥರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಬಾಲಕ ಮೃತ್ಯು ಪ್ರಕರಣಕ್ಕೆ 3 ತಿಂಗಳು
(ಮೊಯ್ದಿನ್ ಫರ್ಹಾನ್ - ಆಸ್ಪತ್ರೆಯ ಎದುರು ಪ್ರತಿಭಟನೆ) ಫೈಲ್ ಫೋಟೊ
ಸುರತ್ಕಲ್: ಕಾಲಿಗೆ ಆಗಿದ್ದ ಸಣ್ಣ ಗಾಯದ ಚಿಕಿತ್ಸೆಗೆಂದು ಸುರತ್ಕಲ್ ಅಥರ್ವ ಆರ್ಥೋ ಕೇರ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಕುಳಾಯಿ ನಿವಾಸಿ ಮೊಯ್ದಿನ್ ಫರ್ಹಾನ್ ಮೃತಪಟ್ಟು ಮೂರು ತಿಂಗಳು ಸಂದರೂ ನಮಗೆ ನ್ಯಾಯ ನಿರಾಕರಿಸಲಾಗುತ್ತಿದೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.
ನ.22ರಂದು ಕಾಲಿನ ಪಾದಕ್ಕೆ ಆಗಿದ್ದ ಸಣ್ಣ ಗಾಯಕ್ಕೆ ಚಿಕಿತ್ಸೆಗೆಂದು ತೆರಳಿದ್ದ ಫರ್ಹಾನ್ ಗೆ ಶಸ್ತ್ರ ಚಿಕಿತ್ಸೆ ಮಾಡಲೆಂದು ಅನಸ್ತೇಶಿಯಾ ನೀಡಿದ್ದು, ಮತ್ತು ಬರುವ ಔಷಧಿ ಅಳತೆ ಮೀರಿ ಬಾಲಕನಿಗೆ ನೀಡಿದ್ದ ಪರಿಣಾಮ ಬಾಲಕ ಮೃತಪಟ್ಟಿರುವು ದಾಗಿ ಕುಟುಂಬಸ್ಥರು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮತ್ತು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಲಾಗಿತ್ತು. ಅದರಂತೆ ಉಸ್ತುವಾರಿ ಸಚಿವರು ಕಾಲಮಿತಿಯೊಳಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ದ.ಕ. ಜಿಲ್ಲಾ ಆರೋಗ್ಯಾಧಿಕಾರಿಯ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು.
ಮರಣೋತ್ತರ ಪರೀಕ್ಷೆಯ ವರದಿಯನ್ನು ಮೈಸೂರಿನ ಫಾರೆನ್ಸಿಕ್ ಲ್ಯಾಬ್ ಗೆ ಕಳುಹಿಸಲಾಗಿದೆ. ಅಲ್ಲಿಂದ ಅಂತಿಮ ವರದಿ ಬಂದಿಲ್ಲ. ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಾರದೆ ಸಮಿತಿಯಿಂದ ಅಂತಿಮ ವರದಿ ನೀಡಲು ಬರುವುದಿಲ್ಲ ಎಂದು ವಿಚರಣಾ ತಂಡದ ನೇತೃತ್ವ ವಹಿಸಿದ್ದ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ತಿಮ್ಮಯ್ಯ ಹೇಳುತ್ತಾ ನ್ಯಾಯ ಕೇಳಲು ಹೋಗುತ್ತಿದ್ದ ಫರ್ಹಾನ್ ಕುಟುಂಬವನ್ನು ಸಮಜಾಯಿಷಿ ನೀಡಿ ಕಳುಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಬಲ್ಲ ಮೂಲಗಳ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿ ಮೈಸೂರಿನ ಫಾರೆನ್ಸಿಕ್ ಲ್ಯಾಬ್ ನಿಂದ ವಿಚಾರಣಾ ತಂಡದ ಕೈ ಸೇರಿ ತಿಂಗಳಾಗಿದ್ದು, ಇನ್ನೂ ಅಂತಿಮ ವರದಿ ನೀಡಲು ಆರೋಗ್ಯಾಧಿಕಾರಿ ಮೀನ ಮೇಷ ಎಣಿಸುತ್ತಿದ್ದಾರೆ ಎಂದು ಫರ್ಹಾನ್ ಕುಟುಂಬ ಆರೋಪಿಸಿದೆ.
"ಮೂರು ತಿಂಗಳಾದರೂ ಇನ್ನೂ ನನ್ನ ಮೊಮ್ಮಗನ ಸಾವಿಗೆ ನ್ಯಾಯ ಸಿಕ್ಕಿಲ್ಲ. ನಮಗೆ ನ್ಯಾಯ ನಿರಾಕರಿಸುವ ಹುನ್ನಾರದ ಭಾಗವಾಗಿಯೇ ಅಂತಿಮ ವರದಿ ನೀಡಲು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದು ಅನಿಸುತ್ತಿದೆ. ರಾಜ್ಯ ಸರಕಾರದ ಮೇಲೆ ಭರವಸೆ ಇಟ್ಟುಕೊಂಡಿದ್ದೇವೆ. ತಡವಾದರೂ ನ್ಯಾಯ ಸಿಗುವ ಭರವಸೆ ಇದೆ".
- ಹಸನಬ್ಬ, ಮೃತ ಫರ್ಹಾನ್ ಅಜ್ಜ
"ಫರ್ಹಾನ್ ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ವರದಿ ತಯಾರಾಗಿದ್ದು, ವಿಚಾರಣಾ ತಂಡದಲ್ಲಿದ್ದ 8 ಮಂದಿ ತಜ್ಞ ವೈದ್ಯರ ಸಹಿಗಾಗಿ ಕಳುಹಿಸಲಾಗಿದೆ. ಮುಂದಿನ ಸೋಮವಾರ ಅಥವಾ ಮಂಗಳವಾರದಂದು ಸಂಬಂಧ ಪಟ್ಟ ಎಲ್ಲರಿಗೂ ಹಸ್ತಾಂತರಿಸಲಾಗುವುದು".
- ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ