×
Ad

ಕರ್ನಾಟಕ| 3 ವರ್ಷದಲ್ಲಿ ಗರ್ಭಿಣಿಯಾದ ಸುಮಾರು 49 ಸಾವಿರಷ್ಟು ಅಪ್ರಾಪ್ತೆಯರು: ನಾಗಣ್ಣ ಗೌಡ

Update: 2024-01-16 19:54 IST

ಮಂಗಳೂರು: ಕಳೆದ ಮೂರು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 49 ಸಾವಿರದಷ್ಟು ಅಪ್ರಾಪ್ತ ಯುವತಿಯರು ಗರ್ಭಿಣಿಯರಾಗಿರುವ ವಿಚಾರ ಬೆಳಕಿಗೆ ಬಂದಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ನಾಗಣ್ಣ ಗೌಡ ತಿಳಿಸಿದ್ದಾರೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಅಪ್ರಾಪ್ತ ಯುವತಿಯರು ಗರ್ಭಿಣಿಯರಾಗಿರುವ ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳು ಕಲ್ಯಾಣ ಕರ್ನಾಟಕ, ಮಂಡ್ಯ ಜಿಲ್ಲೆಗಳಲ್ಲಿ ನಡೆದಿರುವುದು ವರದಿಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ವರದಿ ನೀಡಿದ್ದು, ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯರ ನೇತೃತ್ವದ ತಂಡ ರಾಜ್ಯದ 31 ಜಿಲ್ಲೆಗಳಿಗೂ ತೆರಳಿ ಈ ಬಗ್ಗೆ ಮಾಹಿತಿ ಯನ್ನು ಕಲೆ ಹಾಕುತ್ತಿದೆ ಜನವರಿ ಅಂತ್ಯದೊಳಗೆ ಅಂತಿಮ ವರದಿ ಆಯೋಗಕ್ಕೆ ಸಲ್ಲಿಕೆಯಾಗಲಿದೆ ಎಂದು ವಿವರಿಸಿದರು.

ಆರೋಗ್ಯ ಇಲಾಖೆ ನೀಡಿದ ವರದಿಯಲ್ಲಿ ಅಪ್ರಾಪ್ತೆಯರು ಗರ್ಭಿಣಿಯಾಗಿರುವುದು, ಮಾದಕ ದ್ರವ್ಯ ವ್ಯಸನಿಯಾಗಿರುವುದು ಕಂಡುಬಂದಿವೆ. ಮೊಬೈಲ್ ಫೋನ್ ಮೂಲಕ ಸ್ನೇಹದಿಂದಾಗಿ ಯುವತಿಯರು ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಿರುವುದು ಕಂಡು ಬಂದಿದೆ.

ಮಕ್ಕಳ ಜೀವ ಹಾಗೂ ಜೀವನ ಬಹುಮುಖ್ಯ. ಇವರ ಜತೆ ಯಾರಿಗೂ ಚೆಲ್ಲಾಟವಾಡಲು ಆಯೋಗ ಅವಕಾಶ ನೀಡುವು ದಿಲ್ಲ. ಎಸ್‌ಎಸ್‌ಎಲ್ಸಿ, ಪದವಿ ಪೂರ್ವ ಕಾಲೇಜು ಮಕ್ಕಳಿಗೆ ಪೋಕ್ಸೋ, ಡ್ರಗ್ಸ್ ಇತ್ಯಾದಿ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚಿಸಲಾಗಿದೆ. ಅದಕ್ಕಾಗಿಯೇ ಸುಮಾರು 21 ವಿವಿಧ ಇಲಾಖೆಗಳನ್ನು ಆಯೋಗದ ವ್ಯಾಪ್ತಿಗೆ ಒಳಗೊಳ್ಳುವಂತೆ ಮಾಡಲಾಗಿದೆ. ಮಕ್ಕಳ ರಕ್ಷಣೆಗೆ ಎಲ್ಲರೂ ಜವಾಬ್ದಾರಿ ಹೊಂದಿರುತ್ತಾರೆ ಎಂದರು.

240 ಮಕ್ಕಳು ಆತ್ಮಹತ್ಯೆ : ರಾಜ್ಯದಲ್ಲಿ 240 ಮಕ್ಕಳು ವಿವಿಧ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 18 ವರ್ಷ ದೊಳಗಿನ ಮಕ್ಕಳು ಶೈಕ್ಷಣಿಕ ವಾತಾವರಣದಲ್ಲೇ ಇರುವಂತೆ ನೋಡಿಕೊಳ್ಳಬೇಕು ಶಾಲಾ ಕಾಲೇಜುಗಳಲ್ಲಿ ಮಕ್ಕಳ ಸುರಕ್ಷತೆ ಕಡ್ಡಾಯ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ನಾಗಣ್ಣ ಗೌಡ ಹೇಳಿದರು.

ಕರ್ನಾಟಕ ರಾಜ್ಯ ಸರಕಾರ 2016ರಲ್ಲಿ ಜಾರಿಗೆ ತಂದಿರುವ ಮಕ್ಕಳ ಹಕ್ಕುಗಳ ಕಾಯ್ದೆ ಪ್ರಕಾರ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಮಾದಕ ವಸ್ತು, ದೌರ್ಜನ್ಯಗಳಿಂದ ಮಕ್ಕಳು ದೂರ ಇರುವಂತೆ ನೋಡಿಕೊಳ್ಳಬೇಕು. ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ 18 ವರ್ಷದ ವರೆಗೆ ಮಕ್ಕಳು ಶಿಕ್ಷಣ ವಾತಾವರಣದಲ್ಲಿ ಇರಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧವೇ ಕ್ರಮ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಇದೆ ಎಂದರು.

ಕಾನೂನು ಕ್ರಮ ಅನಿವಾರ್ಯ: ಗರ್ಭಿಣಿಯಾದ ಬಾಲಕಿಯರು ಮಗುವನ್ನು ಪಡೆದರೂ ಕಾನೂನು ಪ್ರಕಾರ 18 ವರ್ಷ ತುಂಬದಿದ್ದರೆ ಅಪರಾಧವಾಗುತ್ತದೆ. ಆಗ ಪೋಕ್ಸೋ ಕಾಯ್ದೆಯನ್ವಯ ಬಾಲಕಿ ಗರ್ಭಧರಿಸಲು ಕಾರಣವಾಗುವ ಆರೋಪಿ ಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಆರೋಪಿಗೆ ಕನಿಷ್ಠ 20 ವರ್ಷ ಜೈಲು ಶಿಕ್ಷಣ ವಿಧಿಸಲಾಗುತ್ತದೆ. ಇದು 18 ವರ್ಷ ತುಂಬಿದ ಬಳಿಕ ಮಗುವಿನ ಪೋಷಣೆಗೆ ಹಾಗೂ ದಾಂಪತ್ಯಬೇರ್ಪಡಲು ಕಾರಣವಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ. ಅಪ್ರಾಪ್ತ ಬಾಲಕಿಯರು ಗರ್ಭಿಣಿಯರಾದ ಪ್ರಕರಣಗಳಲ್ಲಿ ಆಯೋಗ ಕಾನೂನು ಪಾಲನೆ ಜತೆಗೆ ಮಾನವೀಯತೆಯ ಇಕ್ಕಟ್ಟನ್ನು ಎದುರಿಸುವಂತಾಗಿದೆ ಎಂದು ನಾಗಣ್ಣ ಗೌಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News