ಬಂಜೆತನಕ್ಕೆ ಶೇ.50ರಷ್ಟು ಪುರುಷರೂ ಕಾರಣ: ಡಾ.ಶರತ್ ರಾವ್
ಮಣಿಪಾಲ, ಫೆ.28: ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ ಪುರುಷರಲ್ಲೂ ಬಂಜೆತನ ಇರುತ್ತದೆ. ಬಂಜೆತನಕ್ಕೆ ಶೇ.50ರಷ್ಟು ಪುರುಷರು ಕೂಡ ಕಾರಣ ರಾಗಿದ್ದಾರೆ. ಒತ್ತಡ, ಹಾರ್ಮೋನ್, ಜನಜೀವನ, ಆಹಾರ ಕ್ರಮಗಳು ಪುರುಷರ ಬಜೆತನಕ್ಕೆ ಕಾರಣಗಳಾಗಿವೆ ಎಂದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರೊ ವೈಸ್ ಚಾನ್ಸಲರ್ ಡಾ.ಶರತ್ ರಾವ್ ಹೇಳಿದ್ದಾರೆ.
ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ(ಕೆಎಂಸಿ) ಕ್ಲಿನಿಕಲ್ ಎಂಬ್ರಿಯಾಲಜಿಯ ಎಕ್ಸೆಲೆನ್ಸ್ ಸೆಂಟರ್ ಜರ್ಮನಿಯ ಮೂನ್‌ಸ್ಟರ್ ವಿಶ್ವವಿದ್ಯಾಲಯದ ಸಂತಾನೋತ್ಪತ್ತಿ ಔಷಧ ಮತ್ತು ಆಂಡ್ರಾಲಜಿ ಸೆಂಟರ್ ಸಹಯೋಗದಲ್ಲಿ ಟ್ರಾನ್ಸ್ಲೇಷನಲ್ ಆಂಡ್ರಾಲಜಿ ಕುರಿತ ಇಂಡೋ-ಜರ್ಮನ್ ಕಾರ್ಯಾಗಾರದ ಕುರಿತು ಮಣಿಪಾಲದ ಕೆಎಂಸಿ ಸಭಾಂಗಣ ದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಇಂದು ಉದ್ಘಾಟನೆಗೊಂಡ ಎರಡು ದಿನಗಳ ಕಾರ್ಯಾಗಾರದಲ್ಲಿ ಜರ್ಮನಿ ಮತ್ತು ಭಾರತದ ತಲಾ 15 ಉನ್ನತ ವಿಜ್ಞಾನಿ ಗಳು, 40 ಮಂದಿ ಸಂಶೋಧಕರು ಪಾಲ್ಗೊಂಡಿದ್ದಾರೆ. ಇಲ್ಲಿ ಬಂಜೆತನ ನಿವಾರಣೆ, ಹೊಸ ವಿಧಾನ, ತಡೆಗಟ್ಟುವ ಕ್ರಮಗಳ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.
ಪುರುಷ ಫಲವತ್ತತೆಯಲ್ಲಿ ಪ್ರಾಯೋಗಿಕ ಸಂಶೋಧನೆ ಮತ್ತು ಕ್ಲಿನಿಕಲ್ ಅಭ್ಯಾಸದ ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟ್ರಾನ್ಸ್ಲೇಷನಲ್ ಆಂಡ್ರಾಲಜಿಯಲ್ಲಿ ಭಾರತ-ಜರ್ಮನಿ ಸಭೆಯು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಅಂತಾರಾಷ್ಟ್ರೀಯ ಸಹಯೋಗ ಮತ್ತು ಉದ್ಯಮದ ಪಾಲುದಾರಿಕೆ ಯನ್ನು ಬೆಳೆಸುವ ಮೂಲಕ, ನಮ್ಮ ವಿಶ್ವವಿದ್ಯಾನಿಲಯ ನವೀನ ರೀತಿಯ, ರೋಗಿಗಳ-ಕೇಂದ್ರಿತವಾದ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ. ಅದು ಸಂತಾನೋತ್ಪತ್ತಿ ಆರೋಗ್ಯದ ಫಲಿತಾಂಶಗಳನ್ನು ಸುಧಾರಿ ಸುತ್ತದೆ ಎಂದರು.
ಕೆಎಂಸಿ ಮಣಿಪಾಲದ ಕ್ಲಿನಿಕಲ್ ಎಂಬ್ರಿಯಾಲಜಿಯ ಮುಖ್ಯಸ್ಥ ಡಾ. ಸತೀಶ್ ಅಡಿಗ ಮಾತನಾಡಿ, ಭಾರತದಲ್ಲಿ ಸುಮಾರು 20 ಮಿಲಿಯನ್ ದಂಪತಿಗಳಿಗೆ ಸಂತಾನವೃದ್ಧಿಯ ನೆರವಿನ ಅಗತ್ಯವಿದೆ. ಆದರೂ ಪುರುಷ ಫಲವತ್ತತೆಯ ಸಂಶೋಧನೆ ಸೀಮಿತವಾಗಿದೆ. ಜಾಗತಿಕವಾಗಿ ವೀರ್ಯದ ಗುಣಮಟ್ಟ ಇಳಿಕೆಯು ಇಂದು ಆತಂಕಕಾರಿ ವಿಚಾರವಾಗಿದೆ. ಈ ಕಾರ್ಯಾ ಗಾರವು ಭಾರತೀಯ ಪುರುಷರಲ್ಲೂ ಇದೇ ರೀತಿಯ ಬದಲಾವಣೆಗಳಿವೆಯೇ ಮತ್ತು ಈ ಪ್ರವೃತ್ತಿಗಳು ಜರ್ಮನಿಯೊಂದಿಗೆ ಹೇಗೆ ಹೋಲಿಕೆಯಾಗುತ್ತಿವೆ ಎಂಬುದನ್ನು ಅಧ್ಯಯನ ಮಾಡಲಾಗುವುದು ಎಂದರು.
ಜರ್ಮನಿ ವಿವಿಯ ಸಂತಾನೋತ್ಪತ್ತಿ ಔಷಧ ಮತ್ತು ಆಂಡ್ರಾಲಜಿ ಕೇಂದ್ರದ ನಿರ್ದೇಶಕರಾದ ಡಾ.ಸ್ಟೀಫನ್ ಶ್ಲಾಟ್, ಜರ್ಮನಿ ಗಿಸೆನ್‌ನ ಜಸ್ಟಸ್ ಲೀಬಿಗ್ ವಿಶ್ವವಿದ್ಯಾಲಯದ ಪ್ರೊ.ಡಾ.ಆಂಡ್ರಿಯಾಸ್ ಮೈನ್ಹಾರ್ಡ್, ಜರ್ಮನಿಯ ಲೈಂಗಿಕ ತಜ್ಞೆ ಡಾ.ಕ್ಲೌಡಿಯಾ ಕ್ರಾಲ್ಮನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.