‘ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ 6 ಪ್ರಶ್ನೆಗಳು’-ಕೃತಿ ಬಿಡುಗಡೆ
ಮಂಗಳೂರು: ಶಾಂತಿ ಪ್ರಕಾಶನ ಪ್ರಕಟಿಸಿದ, ಪತ್ರಕರ್ತ ಎ.ಕೆ. ಕುಕ್ಕಿಲ ಬರೆದ ‘ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ 6 ಪ್ರಶ್ನೆಗಳು’ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮವು ನಗರದ ಸಹಕಾರಿ ಸದನದ ಶಾಂತಿ ಪ್ರಕಾಶನದ ಸಭಾಂಗಣದಲ್ಲಿ ಸೋಮವಾರ ನಡೆಯಿತು.
ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ‘ತಂತ್ರಜ್ಞಾನ ಯುಗದಲ್ಲಿ ಓದುಗರ ಕೊರತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಒಳ್ಳೆಯ ಕೃತಿಗಳಿಗೆ ಸದಾ ಓದುಗರಿದ್ದಾರೆ. ಆರೋಗ್ಯಪೂರ್ಣ ಸಮಾಜಕ್ಕೆ ಉತ್ತಮ ಸಾಹಿತ್ಯ ಕೃತಿಗಳ ಅಗತ್ಯವಿದೆ. ಎ.ಕೆ. ಕುಕ್ಕಿಲ ಅವರ ಈ ಕೃತಿ ಸಮಾಜಕ್ಕೆ ಕೊಡುಗೆಯಾಗಲಿ’ ಎಂದು ಆಶಿಸಿದರು.
ಕೃತಿಯ ಬಗ್ಗೆ ಮಾತನಾಡಿದ ಚಿಂತಕ ಅರವಿಂದ ಚೊಕ್ಕಾಡಿ ‘ವಿಮರ್ಶೆ ಅಂದರೆ ಕೇವಲ ಟೀಕಿಸುವುದಲ್ಲ. ತಪ್ಪು ಒಪ್ಪು ಗಳನ್ನು ಅವಲೋಕಿಸಿ ಟಿಪ್ಪಣಿ ಮಾಡುವುದೇ ವಿಮರ್ಶೆಯಾಗಿದೆ. ಸಾಹಿತಿಗಳು ಸಮಾಜ ಸುಧಾರಣೆಯ ಪ್ರೇರಣಾ ಶಕ್ತಿ ಗಳು ಎಂಬ ಪ್ರಜ್ಞೆಯೂ ಸದಾ ನಮ್ಮಲ್ಲಿರಬೇಕು. ಹಾಗಾಗಿ ಇಸ್ಲಾಮಿನ ಬಗ್ಗೆ ಏನೇನೂ ಗೊತ್ತಿಲ್ಲದವರಿಗೆ ತಿಳಿಹೇಳುವ ಎ.ಕೆ.ಕುಕ್ಕಿಲ ಅವರ ಈ ಕೃತಿಯನ್ನು ಎಲ್ಲಾ ವರ್ಗದ ಜನರು ಓದುವ ಅಗತ್ಯವಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಮಾತನಾಡಿದರು. ಯೆನೆಪೊಯ ಮೆಡಿಕಲ್ ಕಾಲೇಜಿನ ಪ್ರೊ. ಡಾ. ಅಬ್ದುಲ್ ಮಜೀದ್ ಸಮಾರೋಪ ಭಾಷಣಗೈದರು. ಲೇಖಕ ಎ.ಕೆ. ಕುಕ್ಕಿಲ ಅನಿಸಿಕೆ ವ್ಯಕ್ತಪಡಿಸಿ ದರು. ಶಾಂತಿ ಪ್ರಕಾಶನದ ಉಪಾಧ್ಯಕ್ಷ ಕೆ.ಎಂ. ಶರೀಫ್ ಉಪಸ್ಥಿತರಿದ್ದರು.
ಶಾಂತಿ ಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಕುಂಞಿ ಸ್ವಾಗತಿಸಿದರು. ಮುಹಮ್ಮದ್ ಇನಾಮುಲ್ ಅಫ್‌ವಾನ್ ಕಿರಾಅತ್ ಪಠಿಸಿದರು. ಶಾಂತಿ ಪ್ರಕಾಶನದ ಕಾರ್ಯದರ್ಶಿ ಅಬ್ದುಸ್ಸಲಾಂ ಉಪ್ಪಿನಂಗಡಿ ವಂದಿಸಿದರು. ಕಾಸಿಂ ಕೆ.ಎಂ. ಕಾರ್ಯಕ್ರಮ ನಿರೂಪಿಸಿದರು.