ಬಜ್ಪೆ: ಗುಡ್ಡ ಜರಿದುಬಿದ್ದು 8 ಮನೆಗಳಿಗೆ ಹಾನಿ; ಎರಡು ರಿಕ್ಷಾ, ಕಾರು ಜಖಂ
ಬಜ್ಪೆ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಶಾಂತಿಗುಡ್ಡೆ ಕೊಂಚಾರ್ ಬಳಿ ಎಂಎಸ್‌ಇಝೆಡ್ ನಿರ್ಮಿಸಿದ ನಿರ್ವಹಿಸಿತರ ಕಾಲನಿಯಲ್ಲಿ ಗುಡ್ಡ ಜರಿದುಬಿದ್ದು 8 ಮನೆಗಳಿಗೆ ಹಾನಿಯಾಗಿದ್ದು, ಎರಡು ರಿಕ್ಷಾ ಮತ್ತು ಒಂದು ಕಾರು ಸಂಪೂರ್ಣವಾಗಿ ಮಣ್ಣಿನಡಿಯಲ್ಲಿ ಹೂತುಹೋಗಿರುವ ಘಟನೆ ವರದಿಯಾಗಿದೆ.
ಮನೆಯಲ್ಲಿ ವಾಸವಾಗಿದ್ದ ನಿವಾಸಿಗಳು ಪವಾಡ ಸದೃಶ ಪಾರಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ದುರ್ಘಟನೆಗೆ ಅವೈಜ್ಞಾನಿಕ ರೀತಿಯಲ್ಲಿ ಕಾಲನಿ ನಿರ್ಮಿಸಿರುವ ಎಂಎಸ್‌ಇಝೆಡ್ ನೇರ ಕಾರಣ ಎಂದು ಆರೋಪಿಸಿದೆ.
ನಿರಂತರ ಮಳೆಯಿಂದಾಗಿ ಕಾಲನಿಯ ಜನರು ಆತಂಕದದಿಂದಲೇ ದಿನದೂಡಬೇಕಾಗಿರುವ ಪರಿಸ್ಥಿತಿ ಇದೆ. ಲೇಔಟ್ ಮಾಡುವಾಗ ಯಾವುದೇ ಸೂಕ್ತ ತಡೆಗೋಡೆ ಮಾಡದೇ ಇರುವುದರಿಂದ ಈ ಅನಾಹುತ ನಡೆದಿದೆ.ಈ ದುರ್ಘಟನೆಗೆ ಎಂಎಸ್‌ಇಝೆಡ್ ನೇರ ಕಾರಣ ಎಂದು ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಂಚಾಲಕ ಸಿರಾಜ್ ಬಜ್ಪೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಸಹ ಸಂಚಾಲಕರಾದ ಇಸ್ಮಾಯಿಲ್ ಇಂಜಿನಿಯರ್, ಸಾಮಾಜಿಕ ಕಾರ್ಯಕರ್ತ ನಿಸಾರ್ ಕರಾವಳಿ, ವಸಂತ್ ,ಗ್ರಾ.ಪಂ. ಮಾಜಿ ಸದಸ್ಯರಾದ ನಝೀರ್, ನಾಗೇಶ್, ಅಫೀಝ್ ಕೊಳಂಬೆ, ಅಝ್ಮಲ್ ಮತ್ತು ಒಕ್ಕೂಟದ ಸದಸ್ಯರು ಮತ್ತು ನಾಗರಿಕರು ಉಪಸ್ಥಿತರಿದ್ದರು.