×
Ad

ನ.1-3: ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್‌ನ ದಶಮಾನೋತ್ಸವ

Update: 2024-10-28 23:30 IST

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದ ದಾರುನ್ನೂರ್ ಎಜುಕೇಶನ್ ಸೆಂಟರ್ ಇದರ ದಶಮಾನೋತ್ಸವ ಹಾಗೂ ಸನದು ದಾನ ಸಮ್ಮೇಳನವು ನ.1ರಿಂದ 3 ರ ತನಕ ನಡೆಯಲಿದೆ ಎಂದು ದಾರುನ್ನೂರು ಕೇಂದ್ರ ಸಮಿತಿಯ ವೈಸ್ ಚೇರ್ಮೆನ್ ಇಬ್ರಾಹೀಂ ಕೋಡಿಜಾಲ್ ತಿಳಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಶಮಾನೋತ್ಸವ ಅಂಗವಾಗಿ ನ. 1ರಂದು ಮಧ್ಯಾಹ್ನ ತೋಡಾರು ಮಖಾಂ ಝಿಯಾರತ್ ನೊಂದಿಗೆ ಕಾರ್ಯಕ್ರಮ ಆರಂಭಗೊಂಡು ಸಂಸ್ಥೆಯ ಕ್ಯಾಂಪಸ್ ವರೆಗೆ ವಾಹನ ಜಾಥಾ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಅವರಣದಲ್ಲಿ ದ್ವಜಾರೋಹಣ ಕಾರ್ಯಕ್ರಮದಲ್ಲಿ ಕಲ್ಲಿಕೋಟೆ ಖಾಝಿ ಅಸೈಯ್ಯದ್ ಮುಹಮ್ಮದ್ ಕೋಯ ಜಮಲುಲ್ಲೈಲಿ ತಂಳ್ ನೇತೃತ್ವ ನೀಡಲಿದ್ದಾರೆ ಎಮದು ಮಾಹಿತಿ ನೀಡಿದರು.

ಈ ಮೂರು ದಿನಗಳಲ್ಲಿ ವಿಜ್ಞಾನ, ತಂತ್ರಜ್ಞಾನ, ಪಾರಂಪರಿಕ ವಸ್ತುಗಳು, ವಿಸ್ಮಯ ಲೋಕ. ಮೆಂಟಲಿಸಂ, ಗಣಿತ, ಎಐ ಮತ್ತು ಇತರ ವಿಶೇಷ ಆಕರ್ಷಣೆಗಳನ್ನೊಳಗೊಂಡ ದಾರುನ್ನೂರು ಎಕ್ಪ್ಸೊ 2024 ಸಾರ್ವಜನಿಕರಿಗಾಗಿ ತೆರೆಯ ಲಿದ್ದು,ಇದರ ಉದ್ಘಾಟನೆಯನ್ನು ಮೂಡಬಿದ್ರೆ ವೃತ್ತ ನಿರೀಕ್ಷಕರಾದ ಸಂದೇಶ್ ಪಿ.ಜಿ ಮಾಡಲಿದ್ದಾರೆ.

ನ. 1ರಂದು ಮಗ್ರಿಬ್ ನಮಾಝಿನ ಬಳಿಕ ದಶಮಾನೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಶರೀಫ್ ಹಾಜಿ ವೈಟ್ ಸ್ಪೋನ್ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದರಲ್ಲಿ ಸಮಸ್ತ ಕೇಂದ್ರ ಮುಶಾವರ ಕೋಶಾಧಿಕಾರಿ ಶೈಖುನಾ ಉಮರ್ ಮುಸ್ಲಿಯಾರ್ ಕೊಯ್ಯೋಡ್, ಸೈಯ್ಯದ್ ಅಲೀ ತಂಙಳ್ ಕುಂಬೋಳ್, ತ್ವಾಖಾ ಉಸ್ತಾದ್ ಭಾಗವಹಿ ಸಲಿದ್ದಾರೆ. ಅಂತರಾಷ್ಟ್ರೀಯ ವಾಗ್ಮಿ ಅಲ್ ಹಾಫಿಳ್ ಅಹ್ಮದ್ ಕಬೀರ್ ಬಾಖವಿ ಕೇರಳ ಇವರಿಂದ ಮುಖ್ಯ ಪ್ರಭಾಷಣ ನಡೆಯಲಿದೆ ಎಂದರು.

ನ. 2 ರಂದು ಬೆಳಗ್ಗೆ ಬ್ಯಾರಿ ಸಾಂಸ್ಕೃತಿಕ ಸಮ್ಮಿಲನದಲ್ಲಿ ಬ್ಯಾರಿ ಸಾಹಿತ್ಯ, ಸಂಸ್ಕೃತಿ ಮತ್ತು ಬೆಳವಣಿಗೆ, ತರಬೇತಿ, ಯೂತ್ ಮೀಟ್, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಬ್ಯಾರಿ ಸಾಧಕರಿಗೆ ಸನ್ಮಾನ ನಡೆಯಲಿದೆ. 10:30 ಗಂಟೆಗೆ ದಾರುನ್ನೂರು ಹಿತೈಶಿಗಳಾದ ಅನಿವಾಸಿ ಭಾರತೀಯರ ಗಲ್ಫ್ ಮೀಟ್ ನಡೆಯಲಿದೆ. ಅಪರಾಹ್ನ ಶಹೀದ್ ಸಿ.ಎಂ ಉಸ್ತಾದ್ ಕಾನ್ವರೆನ್ಸ್ ನಲ್ಲಿ ಸಿ.ಎಂ ಉಸ್ತಾದ್ ಜೀವನ ಚರಿತ್ರೆಯ ಬಗ್ಗೆ ವಿವಿಧ ಸೆಮಿನಾರುಗಳು ನಡೆಯಲಿದೆ. ಅಸರ್ ನಮಾಝ್‌ನ ಬಳಿಕ ಅಸೈಯ್ಯದ್ ಸ್ವಾದಿಖಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಇವರು ನೂತನ ಗ್ರಂಥಾಲಯ ಉದ್ಘಾಟನೆ ನೆರವೇರಿಸಲಿದ್ದಾರೆ. ಮಗ್ರಿಬ್ ನಮಾಝಿನ ಬಳಿಕ ಅಲ್ ಹಾಜ್ ಕೆ.ಎಸ್ ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ದಾರುಲ್ ಹುದಾ ವಿಶ್ವವಿದ್ಯಾನಿಲಯದ ವೈಸ್ ಚಾನ್ಸಲರ್ ಡಾ. ಬಹಾವುದ್ದೀನ್ ಮುಹಮ್ಮದ್ ನದ್ವಿ ಕೂರಿಯಾಡ್, ಕೊಡಗು ಖಾಝಿ ಅಬ್ದುಲ್ಲಾ ಮುಸ್ಲಿಯಾರ್ ಭಾಗವಹಿಸಲಿದ್ದಾರೆ. ಅಂತರ್‌ರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಕೇರಳ ಇವರಿಂದ ಮುಖ್ಯ ಪ್ರಭಾಷಣ ಹಾಗೂ ವಲಿಯುದ್ದೀನ್ ಫೈಝಿ ವಾಯಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತ್ಮಿಕ ಮಜ್ಜಿಸ್ ನಡೆಯಲಿದೆ.

ನ. 3 ರಂದು ಪೂರ್ವಾಹ್ನ ಮಹಲ್ಲ್ ಅಭಿವೃದ್ಧಿ ಉಲಮಾ ಉಮರಾ ಸಮನ್ವಯತೆ, ಶೈಕ್ಷಣಿಕ ಚಟುವಟಿಕೆ, ಸಂಘಟನೆ ಮತ್ತು ನಾಯಕತ್ವ ತರಬೇತಿ ಹಾಗೂ ಸಮಾಲೋಚನೆಯ ಬಗ್ಗೆ ಕಾನ್ವರೆನ್ಸ್ ನಡೆಯಲಿದೆ. ಮರ್ಹೂಂ ನೌಶಾದ್ ಹಾಜಿ ಮೆಮೋರಿಯಲ್ ಕಟ್ಟಡದ ಉದ್ಘಾಟನೆಯು ನಡೆಯಲಿದೆ ಎಂದು ಇಬ್ರಾಹೀಂ ಕೋಡಿಜಾಲ್ ಮಾಹಿತಿ ನೀಡಿದರು.

ಸೌಹಾರ್ದ ಸಂಗಮ: ನವೆಂಬರ್ 3 ರಂದು ಅಪರಾಹ್ನ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸೌಹಾರ್ದ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವರುಗಳಾದ ಝಮೀರ್ ಅಹಮದ್, ರಹೀಂ ಖಾನ್, ಶಾಸಕರುಗಳಾದ ಹರೀಶ್ ಪೂಂಜ, ಉಮನಾಥ ಕೋಟ್ಯಾನ್. ವೇದವ್ಯಾಸ್ ಕಾಮತ್, ಐವನ್ ಡಿಸೋಜ, ಮಾಜಿ ಸಚಿವ ಅಭಯಚಂದ್ರ ಜೈನ್. ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕಾಶಿಪಟ್ಣ ಗ್ರಾಪಂ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಮರೋಡಿ ಗ್ರಾಪಂ ಅಧ್ಯಕ್ಷ ರತ್ನಾಕರ ಬುಣ್ಣನ್, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ರಕ್ಷಿತ್ ಶಿವರಾಮ್ ಮತ್ತು ಮಿಥುನ್ ರೈ ಸ್ಥಳೀಯ ಪ್ರಮುಖರಾದ ಜಯಂತ್ ಕೋಟ್ಯಾನ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

*ಸನದುದಾನ: ಅದೇ ದಿನ ಮಗ್ರಿಬ್ ನಮಾಝಿನ ಬಳಿಕ ಪ್ರಥಮ ಸನದು ದಾನ ಸಮ್ಮೇಳನವು ಶೈಖುನಾ ತ್ವಾಖಾ ಉಸ್ತಾದರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಇದರಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಅಧ್ಯಕ್ಷ ಸೈಯ್ಯದುಲ್ ಉಲಮಾ ಜೆಫ್ರಿ ಮುತ್ತು ಕೋಯ ತಂಙಳ್ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಆ ಪ್ರೋ. ಶೈಖುನಾ ಆಲಿಕುಟ್ಟಿ ಉಸ್ತಾದ್, ಕಾರ್ಯದರ್ಶಿ ಶೈಖುನಾ ಎಂ.ಟಿ ಅಬ್ದುಲ್ಲಾ ಮುಸ್ಲಿಯಾರ್ ಭಾಗವಹಿಸಲಿದ್ದಾರೆ. ಅಲ್ ಹಾಫಿಲ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಲಿದ್ದಾರೆ ಎಂದು ಇಬ್ರಾಹಿಂ ಕೋಡಿಜಾಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಾರುನ್ನೂರು ಕೇಂದ್ರ ಸಮಿತಿ ಅಧ್ಯಕ್ಷ ಖಾಝಿ ತ್ಯಾಖಾ ಅಹ್ಮದ್ ಮುಸ್ಲಿಯಾರ್ , ದಶಮಾನೋತ್ಸವ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಫಕೀರಪ್ಪ ಮಾಸ್ಟರ್ , ದಾರುನ್ನೂರು ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಮದ್ ಹಾಜಿ , ಜೊತೆ ಕಾರ್ಯದರ್ಶಿ ಅದ್ದು ಹಾಜಿ, ಉಪಾಧ್ಯಕ್ಷರ ಹಾಸ್ಕೋ ಅಬ್ದುಲ್ ರಹಿಮಾನ್ ಹಾಜಿ , ಮಂಗಳೂರು ವಲಯ ಉಪಾಧ್ಯಕ್ಷ ಶಾಲಿ ತಂಳ್, ಜೊತೆ ಕಾರ್ಯದರ್ಶಿ ಎಫ್ ಅಬ್ದುಲ ಜಲೀಲ್ , ಕೇಂದ್ರ ಜುಮಾ ಮಸೀದಿ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಕೇಂದ್ರ ಸಮಿತಿಯ ಲೆಕ್ಕಪರಿಶೋಧಕ ಹಾಸ್ಕೋ ಅಬುಶಾಲಿ, ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ತಂಳ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಬಗ್ಗೆ ಒಂದಿಷ್ಟು...

ದಕ್ಷಿಣ ಕನ್ನಡ ಜಿಲ್ಲೆಯ ಕಾಶಿಪಟ್ಟ ಗ್ರಾಮದಲ್ಲಿ ಕಳೆದ ಹತ್ತು ವರ್ಷಗಳಿಂದ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣವನ್ನು ನೀಡುತ್ತಿ ರುವ ‘ದಾರುನ್ನೂರು ಎಜುಕೇಶನ್ ಸೆಂಟರ್, ಶೈಕ್ಷಣಿಕ ಸಬಲೀಕರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿಯವರ ನೇತೃತ್ವದಲ್ಲಿ ಸ್ಥಳೀಯ ಕೆಲವು ಸಮಾನ ಮನಸ್ಕ  ದಾನಿಗಳು ಸೇರಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲೆಯ ಖಾಝಿಯಾಗಿದ್ದ ಮರ್ಹೂಂ ಶೈಖುನಾ ಸಿ.ಎಂ ಅಬ್ದುಲ್ಲಾ ಮುಸ್ಲಿಯಾರ್ ಚೆಂಬರಿಕ್ಕರವರ ಸ್ಮರಣಾರ್ಥ ಉದಯಿಸಿದ ಸಂಸ್ಥೆಯಾಗಿದೆ ದಾರುನ್ನೂರ್ ಎಜ್ಯುಕೇಶನ್ ಸೆಂಟರ್.

ಶಹೀದ್ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ಫೌಂಡೇಶನ್ ಕರ್ನಾಟಕ (ರಿ) ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯ ವಿದ್ಯಾ ಕೇಂದ್ರದಲ್ಲಿ 330 ರಷ್ಟು ವಿದ್ಯಾರ್ಥಿಗಳು ಧಾರ್ಮಿಕ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣವನ್ನು ಪಡೆಯುತ್ತಿ ದ್ದಾರೆ. ಪ್ರಮುಖ ಭಾಷೆಗಳಾಗಿ ಕನ್ನಡ, ಹಿಂದಿ, ಇಂಗ್ಲಿಷ್, ಅರಬಿ, ಉರ್ದು, ಮಲಯಾಳಂ ಹಾಗೂ ಇತರ ಭಾಷಾ ಸಾಹಿತ್ಯದಲ್ಲೂ ಪ್ರಾವಿಣ್ಯತೆಯನ್ನು ನೀಡಲಾಗುತ್ತಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ ಸಂಪೂರ್ಣ ಉಚಿತವಾಗಿದೆ. 12 ಎಕ್ರೆ ವಿಸ್ತೀರ್ಣದ ಕ್ಯಾಂಪಸ್‌ನ್ನು ಹೊಂದಿದೆ. ಮುಂದೆ ದಾರುನ್ನೂರ್ ಮಹಿಳಾ ಕಾಲೇಜನ್ನು ತೆರೆಯಲು ಉದ್ದೇಶಿಸ ಲಾಗಿದೆ ಎಂದು ಇಬ್ರಾಹಿಂ ಕೋಡಿಜಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News