×
Ad

ಫೆ.10ರಂದು ದ.ಕ. ಪತ್ರಕರ್ತರಿಂದ ಗ್ರಾಮ ವಾಸ್ತವ್ಯ

Update: 2024-02-08 15:20 IST

ಮಂಗಳೂರು, ಫೆ.8: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ನೇತೃತ್ವ ಹಾಗೂ ವಿವಿಧ ಸಂಘ ಸಂಸ್ಥೆಗಳು, ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಸುಳ್ಯ ಬಂಗ್ಲೆಗುಡ್ಡೆಯ ಕೊಲ್ಲಮೊಗರು ಸರಕಾರಿ ಶಾಲೆಯಲ್ಲಿ ಫೆ.10ರಂದು ಪತ್ರಕರ್ತರ 5ನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ.ಖಾದರ್ ನೆರವೇರಿಸಲಿದ್ದಾರೆ. ವೈದ್ಯಕೀಯ ತಪಾಸಣೆ ಶಿಬಿರ ಉದ್ಘಾಟನೆಯನ್ನು ಆರೋಗ್ಯ ಹಾಗೂ ದಕ್ಷಿಣ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೆರವೇರಿಸಲಿದ್ದಾರೆ. ಕೃಷಿ ಸಚಿವ ಚೆಲುವರಾಯಸ್ವಾಮಿ ರೈತ ಸಂತೆ ಉದ್ಘಾಟಿಸಲಿದ್ದು, ಕಂದಾಯ ಸಚಿವ ಗ್ರಾಮ ವಾಸ್ತವ್ಯದ ಮಾಹಿತಿ ಪುಸ್ತಕ ಬಿಡುಗಡೆಗೊಳಿಸುವರು. ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಫಲಾನುಭವಿಗಳಿಗೆ ವಿವಿಧ ಸಲವತ್ತುಗಳ ವಿತರಣೆ ನೆರವೇರಿಸಲಿದ್ದು, ಅರಣ್ಯ ಸಚಿವ ಈಶ್ವರ ಖಂಡ್ರೆ ಹಸಿರು ಉಸಿರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮಗಳಿಗೆ ಚಾಲನೆ ನೀಡಲಿದ್ದು, ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸುವರು.

ಸ್ವಸಹಾಯ ಗುಂಪುಗಳ ಉತ್ಪಾದನೆಗಳ ಮಾರಾಟ ಮಳಿಗೆಗಳನ್ನು ಶಾಸಕಿ ಭಾಗೀರಥಿ ಮುರುಳ್ಯ, ವಿವಿಧ ಸರಕಾರಿ ಇಲಾಖೆಗಳ ಮಾಹಿತಿ ಕೇಂದ್ರಗಳಿಗೆ ಚಾಲನೆಯನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೀಡಲಿದ್ದಾರೆ.

ಬೆಳಗ್ಗೆ 10:30ರಿಂದ 1ರವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ನೇರ ಸಂವಾದ. ಅಪರಾಹ್ನ 2ರಿಂದ 3 ಗಂಟೆಯವರೆಗೆ ರೈತರಿಗೆ ಅಡಿಕೆ ಬೆಳೆಗೆ ಹಳದಿ ರೋಗ ಹಾಗೂ ಎಲ್ಲೆ ಚುಕ್ಕಿ ರೋಗದ ಬಗೆ ತಜ್ಞರಿಂದ ಮಹಿತಿ ಕಾರ್ಯಕ್ರಮ ನಡೆಯಲಿದ್ದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ಉದ್ಘಾಟನೆ ನೆರವೇರಿಸುವರು.

ಅಪರಾಹ್ನ 3ರಿಂದ ರೈತರಿಗೆ ಹೈನುಗಾರಿಕೆ ಮತ್ತು ಜೇನು ಕೃಷಿ ಕುರಿತು ಮಾಹಿತಿ ಕಾರ್ಯಗಾರವನ್ನು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸುವರು. ಸಂಜೆ 4ಕ್ಕೆ ಜನಶಿಕ್ಷಣ ಟ್ರಸ್ಟ್ನ ನಿರ್ದೇಶಕರಾದ ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರಿಂದ ಸ್ವಚ್ಛ ಗ್ರಾಮ ಸ್ವಚ್ಛ ಪರಿಸರ -ಪ್ಲಾಸ್ಟಿಕ್ ತ್ಯಾಜ್ಯ ವಿರುದ್ಧ ಜಾಗೃತಿ ಅಭಿಯಾನ ನಡೆಯಲಿದೆ.

ಸಂಜೆ 4:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬಳಿಕ ಗ್ರಾಮದ ವಿವಿಧ ಪ್ರದೇಶಗಳಿಗೆ ಪತ್ರಕರ್ತರ ಭೇಟಿ ಹಾಗೂ ಸಂಜೆ 7ಕ್ಕೆ ಐತ ಕೊರಗ ಎಂಬವರ ಮನೆಯಲ್ಲಿ ಚಾವಡಿ ಚರ್ಚೆ ನಡೆಯಲಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News