×
Ad

ಅ.10: ಮಸ್ಕತ್‌ನಲ್ಲಿ ‘ಪೆಪೆರೆ ಪೆಪೆ ಡುಂ’ ಬ್ರಾಸ್ ಬ್ಯಾಂಡ್ ಸ್ಪರ್ಧೆ

Update: 2025-10-07 18:30 IST

ಮಂಗಳೂರು, ಅ.7: ಕರಾವಳಿಯ ಕೊಂಕಣಿ ಸಂಗೀತ ಲೋಕದಲ್ಲಿ ಬ್ರಾಸ್ ಬ್ಯಾಂಡ್‌ನ ಪ್ರಚಾರ ಹಾಗೂ ಉತ್ತೇಜನಕ್ಕಾಗಿ ‘ಆಮಿ ಆನಿ ಅಮ್ಚಿಂ’ ಸಂಘಟನೆಯ ಮೂಲಕ ಹುಟ್ಟಿಕೊಂಡ ‘ಪೆಪೆರೆ ಪೆಪೆ ಡುಂ’ ಬ್ರಾಸ್ ಬ್ಯಾಂಡ್ ಸ್ಪರ್ಧಾ ಕಾರ್ಯಕ್ರಮವನ್ನು ಅಕ್ಟೋಬರ್ 10 ಒಮನ್ ದೇಶದ ರಾಜಧಾನಿ ಮಸ್ಮತ್‌ನಲ್ಲಿ ಆಯೋಜಿಸಲಾಗಿದೆ ಎಂದು ಮಂಗಳೂರಿನ ‘ಆಮಿ ಆನಿ ಅಮ್ಚಿಂ’ ಸಂಘಟನೆಯ ಅಧ್ಯಕ್ಷ ಡೆನಿಸ್ ಡಿ ಸಿಲ್ವ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಪೆಪೆರೆ ಪೆಪೆ ಡುಂ’ ಬ್ರಾಸ್ ಬ್ಯಾಂಡ್ ಸ್ಪರ್ಧಾ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಗಲ್ಫ್ ರಾಷ್ಟ್ರಕ್ಕೆ ಕಾಲಿಡು ತ್ತಿದ್ದು, ಮಸ್ಕತ್‌ನ ಎಂಸಿಸಿಪಿ ಸಂಘಟನೆ, ಆಮಿ ಆನಿ ಅಮ್ಚಿ ಮತ್ತು ವೆಂಚರ್ ಎಂಟರ್‌ಟೇನ್ಮೆಂಟ್ ನೇತೃತ್ವದಲ್ಲಿ ಮಸ್ಕತ್‌ನ ರುವಿಯ ಅಲ್ ಫಲಾಜ್ ಹೋಟೆಲ್‌ನಲ್ಲಿ ನಡೆಯಲಿರುವ ಈ ಸಂಗೀತ ಸ್ಪರ್ಧೆಯಲ್ಲಿ ನಲ್ಕು ಪ್ರಮುಖ ತಂಡಗಳಾದ ‘ಮಸ್ಕತ್ ಚಿಂ ನಕ್ತಿರಾಂ’ ‘ದಬಕ್ ದಬಾ ಕಲಾಕಾರ್’, ’ಗಾಂವ್ಚಿಂ ಮೊತಿಯಾಂ’ ಮತ್ತು ‘ತನ್ಕಾಂತ್ಲಿಂ ತಾಲೆಂತಾಂ’ ಪ್ರಶಸ್ತಿಗಾಗಿ ಕಾದಾಡಲಿವೆ ಎಂದು ಮಾಹಿತಿ ನೀಡಿದರು.

ಕೊಂಕಣಿ ಹಾಡುಗಳು, ಬಾಯ್ಲಾ ನೃತ್ಯ, ಜೈವ್ ನೃತ್ಯ, ಹುಲಿ ನೃತ್ಯ ಮತ್ತಿತರರ ವಿಭಾಗಗಳಲ್ಲಿ ಈ ನಾಲ್ಕು ತಂಡ ಗಳು ಸ್ಪರ್ಧಿಸಲಿದ್ದು ವಿಜೇತ ತಂಡಕ್ಕೆ 1,000 ಒಮಾನಿ ರಿಯಾಲ್ (ಸುಮಾರು ರೂ. 2,30,000 ) ಮೊತ್ತದ ಪ್ರಶಸ್ತಿ ದೊರೆಯಲಿದ್ದು, ಉಳಿದ ಮೂರು ತಂಡಗಳಿಗೆ ತಲಾ 500 ಒಮಾನಿ ರಿಯಾಲ್ (ಸುಮಾರು ರೂ. 1,15,000) ಮೊತ್ತದ ಪ್ರಶಸ್ತಿಯನ್ನು ನೀಡಲಾಗುವುದು ಎಂದರು.

ಸ್ಪರ್ಧೆಗೆ ಸಂಗೀತ ಒದಗಿಸುವುದಕ್ಕಾಗಿ ಬೆಳ್ತಂಗಡಿ ತಾಲೂಕಿನ ಬದ್ಯಾರ್‌ನ ಅರುಣ್ ಸೆರಾವೊ ನೇತೃತ್ವದ 10 ಮಂದಿಯ ಬ್ರಾಸ್ ಬ್ಯಾಂಡ್ ವಾದಕರ ತಂಡವು ಮಸ್ಕತ್‌ಗೆ ಪ್ರಯಾಣಿಸಲಿದ್ದಾರೆ. ಸಂತೋಷ್ ಡಿ ಕೋಸ್ತಾ, ರೀನ ಕ್ಯಾಸ್ಟಲಿನೊ ಮತ್ತು ಅರುಣ್ ಡಿ ಸೋಜ ಈ ಕಾರ್ಯಕ್ರಮ ನಿರ್ವಹಿಸಲಿದ್ದಾರೆ ಡೆನಿಸ್ ಡಿ ಸಿಲ್ವ ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್ ಕೊಲಾಸೊ , ಸ್ಥಳೀಯ ಧರ್ಮಗುರು ವಂ. ಸ್ಟಿಫನ್ ಲುವಿಸ್, ಕೆಲರಾಯ್ ಚರ್ಚ್ ಧರ್ಮಗುರು ವಂ. ಸಿಲ್ವೆಸ್ಟರ್ ಡಿ ಕೊಸ್ಟಾ, ನ್ಯಾಶನಲ್ ಅಲೈಡ್ ಆಂಡ್ ಎಲ್ತ್‌ಕೇರ್ ಕೌನ್ಸಿಲ್‌ನ ರಾಜ್ಯಾಧ್ಯಕ್ಷ ಯು.ಟಿ. ಇಫ್ತಿಕಾರ್ ಫರೀದ್, ಪತ್ರಕರ್ತ ವಾಲ್ಟರ್ ನಂದಳಿಕೆ, ಅಲೆಕ್ಸಿಸ್ ಕ್ಯಾಸ್ಟಲಿನೊ ಮುಂತಾದವರು ಭಾಗವಹಿಸಲಿದ್ದಾರೆ.

ಬ್ರಾಸ್ ಬ್ಯಾಂಡ್ ಅನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ‘ಆಮಿ ಆನಿ ಅಮ್ಮಿಂ’ ತಂಡ 2024ರ ಫೆಬ್ರವರಿ ತಿಂಗಳಿನಲ್ಲಿ ಮೊದಲ ಬಾರಿಗೆ ‘ಪೆಪೆರೆ ಪೆಪೆ ಢುಂ’ ಕಾರ್ಯಕ್ರಮಕ್ಕೆ ಚಾಲನೆ ನೀಡಿತ್ತು. ಇದರಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 20 ತಂಡಗಳು ಪಾಲ್ಗೊಂಡಿದ್ದವು. ಇದರ ಸಮಾರೋಪ ಕಾರ್ಯಕ್ರಮವು ಅದೇ ವರ್ಷದ ನವೆಂಬರ್ ತಿಂಗಳಿನಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ದೊರೆತ ಯಶಸ್ಸಿನಿಂದ ಪ್ರೇರಣೆ ಪಡೆದು ‘ಪೆಪೆರೆ ಪೆಪೆ ಢುಂ’ ಕಾರ್ಯಕ್ರಮದ ಎರಡನೇ ಆವೃತ್ತಿಯನ್ನು ಇದೀಗ ಒಮನ್ ನಲ್ಲಿ ನಡೆಸಲಾಗುತ್ತಿದೆ ಡೆನಿಸ್ ಡಿ ಸಿಲ್ವ ಮಾಹಿತಿ ನೀಡಿದರು.

‘ಆಮಿ ಆನಿ ಅಮ್ಚಿಂ’ ಮಂಗಳೂರು ಸಂಘಟನೆಯ ಕಾರ್ಯದರ್ಶಿ ಸಂತೋಷ್ ಡಿ ಕೊಸ್ತಾ, ಸದಸ್ಯರಾದ ಲೊಯ್ಡ್ ರೇಗೊ, ಮೆಲ್ವಿನ್ ಡೆಸಾ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News