×
Ad

ಫೆ.10-11ರಂದು 'ವಿಶ್ವ ಕೊಂಕಣಿ ಸಮಾರೋಹ', ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ

Update: 2024-02-08 14:55 IST

ಮಂಗಳೂರು, ಫೆ.8: ನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಫೆ.10 ಮತ್ತು 11ರಂದು 'ವಿಶ್ವ ಕೊಂಕಣಿ ಸಮಾರೋಹ' ಎಂಬ ಸಾಹಿತ್ಯ ಕಲೋತ್ಸವ ನಡೆಯಲಿದ್ದು, ಈ ಸಂದರ್ಭ ವಿಶ್ವ ಕೊಂಕಣಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರದ ಅಧ್ಯಕ್ಷ ನಂದಗೋಪಾಲ್ ಶೆಣೈ, ಸಮಾರಂಭದಲ್ಲಿ ವಿಶ್ವ ಕೊಂಕಣಿ ನಾಟಕೋತ್ಸವ ಹಾಗೂ ವಿವಿಧ ವಿಚಾರಗೋಷ್ಠಿಗಳ ಸರಣಿ ಕಾರ್ಯಕ್ರಮ ನಡೆಯಲಿದೆ ಎಂದರು.

ಫೆ.10ರಂದು ಬೆಳಗ್ಗೆ 10ಕ್ಕೆ ಕೊಂಕಣಿ ರಂಗಭೂಮಿ 'ಇಂದು-ಮುಂದು' ಎಂಬ ಗೋಷ್ಠಿಯನ್ನು ಜಾನ್ ಎಂ. ಪೆರ್ಮನ್ನೂರು ನಿರ್ವಹಿಸುವರು. 11ಕ್ಕೆ 'ಕೊಂಕಣಿ ಭಾಷಾಭಿವೃದ್ಧಿಗೆ ಕೃತಕ ಬುದ್ದಿಮತ್ತೆ ಅಳವಡಿಕೆ' ಗೋಷ್ಠಿಯನ್ನು ಗೌರೀಶ ಪ್ರಭು ಮುನ್ನಡೆಸಲಿರುವರು. ಅಪರಾಹ್ನ 2ಕ್ಕೆ 'ಗೋವಾದ ಹೊರಗೆ ಕೊಂಕಣಿಯ ಸ್ಥಿತಿ ಗತಿ' ವಿಚಾರ ಗೋಷ್ಠಿಯನ್ನು ಡಾ.ಕಸ್ತೂರಿ ಮೋಹನ ಪೈ ನಡೆಸಿಕೊಡಲಿದ್ದಾರೆ. 3ಕ್ಕೆ 'ಕೊಂಕಣಿ ಭಾಷೆ ಮತ್ತು ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ' ವಿಚಾರ ಗೋಷ್ಠಿಯನ್ನು ಡಾ. ಕಿರಣ್ ಬುಡ್ಕುಳೆ ನಡೆಸಿಕೊಡವರು.

ಫೆ. 11ರಂದು ಬೆಳಗ್ಗೆ 9ರಿಂದ 10:30ರವರೆಗೆ 'ಭಾರತೀಯ ಕೊಂಕಣ ಕಾಳಜಿ' ಎಂಬ ಆನ್ ಲೈನ್ ಗೋಷ್ಠಿಯಲ್ಲಿ ದೇಶವಿದೇಶಗಳ ಪ್ರತಿನಿಧಿಗಳು ಭಾಗವಹಿಸುವರು. ಕಿಶೂ ಬಾರ್ಕೂರ್ ಗೋಷ್ಠಿಯ ಸಮನ್ವಯಕಾರರಾಗಿರುತ್ತಾರೆ. ಅಪರಾಹ್ನ 2:45ಕ್ಕೆ '21ನೇ ಶತಮಾನದ ಕೊಂಕಣಿ ಕವಿತೆಗಳು' ವಿಚಾರಗೋಷ್ಠಿಯನ್ನು ಗೋಕುಲ್ ದಾಸ್ ಪ್ರಭು ನಡೆಸಿಕೊಡಲಿದ್ದಾರೆ ಎಂದು ಅವರು ವಿವರಿಸಿದರು.

ಪ್ರಶಸ್ತಿ ಪ್ರದಾನ

ಫೆ.11ರಂದು 10:45ಕ್ಕೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭ ಮಂಗಳೂರು ವಿವಿ ಕುಲಪತಿ ಪ್ರೊ.ಜಯರಾಜ್ ಅಮೀನ್ ನೆರವೇರಿಸುವರು.

ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರವನ್ನು ಗೋವಾದ ಕೊಂಕಣಿ ಲೇಖಕ ಪ್ರಾಧ್ಯಾಪಕ ಡಾ. ಪ್ರಕಾಶ್ ಪರಿಯೆಂಕಾರ ಇವರ ಪೂರಮ್ ಕೃತಿಗೆ ನೀಡಲಾಗುವುದು. ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರವನ್ನು ಕೇರಳದ ಕೊಂಕಣಿ ಕವಿ, ಲೇಖಕ ಆರ್.ಎಸ್. ಭಾಸ್ಕರ್ ಅವರ ಕೊಂಕಣಿ ಕವಿತಾ ಸಂಕಲನ ಚೈತ್ರಾ ಕವಿತಾ ಪುಸ್ತಕಕ್ಕೆ ನೀಡಲಾಗುವುದು. ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ ಪ್ರಶಸ್ತಿಯನ್ನು ಗೋವಾದ ಹಿರಿಯ ಕೊಂಕಣಿ ಕಲಾವಿದ ರಮಾನಂದ ರಾಯ್ಕರ ಇವರು ಕೊಂಕಣಿ ಭಾಷೆ, ಸಂಗೀತ, ಸಾಹಿತ್ಯಕ್ಕೆ ನೀಡಿದ ಕೊಡುಗೆ ಪರಿಗಣಿಸಿ ನೀಡಲಾಗುವುದು.

ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರವನ್ನು ಮೆಟಮೋರ್ಫೆಸ್ ಸೇವಾ ಸಂಸ್ಥೆಯ ವೀರ ನಾರಿ ಸೇವೆಗಾಗಿ ಶಕುಂತಲಾ ಎ. ಭಂಡಾರ್ಕಾರ್ ಅವರಿಗೆ ಪ್ರದಾನ ಮಾಡಲಾಗುವುದು. ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಇನ್ನೊಂದು ಸೇವಾ ಪುರಸ್ಕಾರವನ್ನು ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ನ ಜೋಸೆಫ್ ಕ್ರಾಸ್ತಾರಿಗೆ ನೀಡಲಾಗುವುದು. ಡಾ.ಪಿ.ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರವನ್ನು ಗೋವಾದ ಲೇಖಕ ರಮೇಶ ಲಾಡ್ ಅವರಿಗೆ ಹಾಗೂ ಡಾ. ಪಿ.ದಯಾನಂದ ಪೈ ವಿಶ್ವ ಕೊಂಕಣಿ ರಂಗ ಶ್ರೇಷ್ಟ ಪುರಸ್ಕಾರವನ್ನು ಶ್ರೀನಿವಾಸ ರಾವ್ (ಕಾಸರಗೋಡು ಚಿನ್ನಾ) ಅವರಿಗೆ ನೀಡಲಾಗುವುದು. ಪ್ರಶಸ್ತಿ ತಲಾ ಒಂದು ಲಕ್ಷ ರೂ. ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದರು.

ಎರಡು ದಿನಗಳಲ್ಲಿ ಸಂಜೆ 5ರಿಂದ 8ರವರೆಗೆ ಮಂಗಳೂರಿನ ಟಿ.ವಿ. ರಮಣ ಪೈ ಸಭಾಗೃಹದಲ್ಲಿ ಕೊಂಕಣಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಕರ್ನಾಟಕ, ಮುಂಬೈ, ಗೋವಾ, ಕೇರಳ ರಾಜ್ಯಗಳಿಂದ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೋಶಾಧಿಕಾರಿ ಬಿ.ಆರ್. ಭಟ್, ಕಸ್ತೂರಿ ಮೋಹನ್ ಪೈ, ರಮೇಶ್, ಡಾ.ಬಿ.ದೇವದಾಸ್ ಪೈ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News