×
Ad

ಜ.13 ರಂದು ನರಿಂಗಾನ ಕಂಬಳೋತ್ಸವ ಉದ್ಘಾಟನೆ

Update: 2024-01-09 17:32 IST

ಕೊಣಾಜೆ: ಮಂಗಳೂರು ವಿಧಾನ ಸಭಾ ಕ್ಷೇತ್ರ, ಉಳ್ಳಾಲ ತಾಲೂಕಿನ ಇತಿಹಾಸದಲ್ಲಿ ಮೊದಲ ಸರಕಾರಿ ಕಂಬಳವಾಗಿ ಗುರುತಿಸಿಕೊಂಡಿರುವ ನರಿಂಗಾನ ಕಂಬಳವು ಈ ಬಾರಿ ಎರಡನೇ ವರ್ಷದ ನರಿಂಗಾನ ಕಂಬಳೋತ್ಸವ ನರಿಂಗಾನ ಗ್ರಾಮದ ಮೋರ್ಲ ಬೋಳದ ಲವ-ಕುಶ ಜೋಡುಕರೆಯಲ್ಲಿ ಜ. 13ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.

ನರಿಂಗಾನ ಕಂಬಳವು ಎಲ್ಲಾ ಜಾತಿ, ಧರ್ಮ, ವರ್ಗಗಳ ಜನರು ಸೇರಿಕೊಂಡು ಮಾಡುವ ಒಂದು ಸಾರ್ವಜನಿಕ ಕಂಬಳ ವಾಗಿದೆ. ಕಂಬಳೋತ್ಸವ ಸೌಹಾರ್ದತೆಯಿಂದ ಸಾಮರಸ್ಯತೆಯಿಂದ ಇಡೀ ದೇಶಕ್ಕೆ ಮಾದರಿಯಾಗಿ ನಡೆಯಲಿದೆ.

ಉದ್ಘಾಟನೆ ಸಮಾರಂಭ ಜ.‌13ರಂದು ಬೆಳಗ್ಗೆ 10.30ಕ್ಕೆ ನಡೆಯಲಿದ್ದು ಸರ್ವ ಧರ್ಮದ ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಶ್ರೀ ಬ್ರಹ್ಮಶ್ರೀ ಉಚ್ಚಿಲತ್ತಾಯ. ನೀಲೇಶ್ವರ ಪದ್ಮನಾಭ ತಂತ್ರಿಯವರು ಕಂಬಳ ಉದ್ಘಾಟಿಸಲಿದ್ದು, ವೇದ ಮೂರ್ತಿ ವರ್ಕಾಡಿ ಹೊಸಮನೆ ರಾಜೇಶ್ ತಾಳಿತ್ತಾಯರು, ಬೋಳ ಸಂತ ಲಾರೆನ್ಸರ ದೇವಾಲಯದ ಧರ್ಮಗುರು ಅತಿ ವಂದನೀಯ ರೆ. ಫಾ. ಪೆಡ್ರಿಕ್ ಕೊರೆಯಾ, ಮಂಜನಾಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಅಜೀಝ್ ಮೈಸೂರು ಬಾವ, ಗುಣಕರ ಆಳ್ಬ ಯಾನೆ ರಾಮ ರೈ ಬೋಳಿಯಾರುಗುತ್ತು, ಬಡಾಜೆ ರವಿಶಂಕರ್ ಶೆಟ್ಟಿ, ಗಣೇಶ್ ಭಟ್ ಪಂಜಾಲ ಸೇರಿದಂತೆ ಎಲ್ಲ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಕಂಬಳ ಉದ್ಘಾಟನೆಗೊಳ್ಳಲಿದೆ.

ಮಧ್ಯಾಹ್ನ 3.30ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಕೆಪಿಸಿಸಿ ಅಧ್ಯಕ್ಷರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಗೃಹಸಚಿವರಾಗಿರುವ ಡಾ. ಜಿ. ಪರಮೇಶ್ವರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ದಿನೇಶ್ ಗುಂಡೂರಾವ್, ಯುವಜನ ಮತ್ತು ಕ್ರೀಡಾ ಸಚಿವರಾಗಿರುವ ಬಿ.‌ ನಾಗೇಂದ್ರ, ವಕ್ಫ್ ಮತ್ತು ಪೌರಾಡಳಿತ ಸಚಿವ ರಹೀಂ‌ ಖಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, SCDCC ಬ್ಯಾಂಕ್ ಅಧ್ಯಕ್ಷ ಡಾ.ಎಂ. ಎನ್. ರಾಜೇಂದ್ರ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಕಂಬಳ‌ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ, ಪ್ರಧಾನ ಕಾರ್ಯದರ್ಶಿ ನವಾಝ್ ನರಿಂಗಾನ , ಪ್ರಧಾನ ಸಂಚಾಲಕ ಗಿರೀಶ್ ಆಳ್ವ, ಪಿ. ಆರ್.‌ಶೆಟ್ಟಿ ಪೊಯ್ಯೆಲು, ಲೋಕೇಶ್ ಶೆಟ್ಟಿ ಮುಚ್ಚೂರು, ನವೀನ್ ಚಂದ್ರ ಆಳ್ವ, ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ರವೀಂದ್ರನಾಥ ಶೆಟ್ಟಿ ತಲಪಾಡಿ ದೊಡ್ಡಮನೆ, ಪದ್ಮನಾಭ ನರಿಂಗಾನ, ಚಂದ್ರಹಾಸ್ ಕರರ್ಕೇರ, ಮಮತಾ ಡಿ.ಎಸ್.ಗಟ್ಟಿ, ಅಬ್ದುಲ್ ಜಲೀಲ್ ಮೋಂಟುಗೋಳಿ, ಎನ್ ಎಸ್ ನಾಸಿರ್ ನಡುಪದವು, ಪಿಯುಸ್ ರೋಡ್ರಿಗಸ್, ಮುರಲೀಧರ ಶೆಟ್ಟಿ ಮೋರ್ಲ, ಚಂದ್ರಹಾಸ್ ಶೆಟ್ಟಿ ಮೋರ್ಲ ಕರುಣಾಕರ ಶೆಟ್ಟಿ ಮೋರ್ಲ, ಮ್ಯಾಕ್ಇಮ್ ಡಿಸೋಜ ವಿನಯ್ ಶೆಟ್ಟಿ ಮೋರ್ಲ, ಸುಂದರ ಪೂಜಾರಿ ಕೋಡಿಮಜಲು ಮೊದಲಾದವರು ಉಪಸ್ಥಿತರಿದ್ದರು.

ಉಪ ಮುಖ್ಯಮಂತ್ರಿಗಳು, ರಾಜ್ಯ ಗೃಹಸಚಿವರು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಕಂಬಳ ಕರೆಯ ಬಳಿಗೆ ಆಗಮಿಸಲಿದ್ದು ಕೊಲ್ಲರಕೋಡಿ ಶಾಲೆಯ ಬಳಿ ಹೆಲಿಪ್ಯಾಡ್ ನಿರ್ಮಾಣ ಆಗುತ್ತಿದೆ.

ಕಂಬಳ ಕೋಣಗಳ ಯಜಮಾನರಾಗಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಪಜೀರು ಕೇದಗೆಬೈಲು ಲವ- ಕುಶ ಜೋಡುಕರೆ ಕಂಬಳದ ವ್ಯವಸ್ಥಾಪಕರಾಗಿ, ಪ್ರಸ್ತುತ ಕಳೆದ ಎರಡು ವರ್ಷಗಳಿಂದ ನರಿಂಗಾನದ ಲವ-ಕುಶ ಜೋಡುಕರೆ ಕಂಬಳದ ಗೌರವಾಧ್ಯಕ್ಷರಾಸ ಹಿರಿಯರಾದ ವೆಂಕಪ್ಪ ಕಾಜವ ಮಿತ್ತಕೋಡಿ ಹಾಗೂ ಕಂಬಳಕ್ಷೇತ್ರದ ಸಾಧಕರಾಗಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿರುವ ಶ್ರೀ ಮಹಾಬಲ ಶೆಟ್ಟಿ ಮಾಣಿಸಾಗು, ಎನ್. ರವೀಂದ್ರ ಶೆಟ್ಟಿ ನುಲಿಯಾಲು ಹಾಗೂ ಎನ್. ಪದ್ಮನಾಭ ನರಿಂಗಾನ ಅವರನ್ನು ಸನ್ಮಾನಿಸಲಾಗುವುದು.

ಕಂಬಳ ಕರೆಯಲ್ಲಿ ಸಾಧನೆಗೈದ ಹಿರಿಯ ನಾಲ್ಕು ಕೋಣಗಳಾದ ಕೊಳಚೂರು ಕುಂಡೊಟ್ಟು ಸುಕುಮಾರ್ ಶೆಟ್ಟಿ ಅವರ ಯಜಮಾನತ್ವದ "ಚೆನ್ನ", ನಂದಳಿಕೆ ಶ್ರೀಕಾಂತ್ ಭಟ್ ಅವರ " ಪಾಂಡು", ಬೋಳದಗುತ್ತು ಸತೀಶ್ ಶೆಟ್ಟಿ ಅವರ "ದೋಣಿ" ಹಾಗೂ ಇರುವೈಲು ಪಾನಿಲ ಬಾಡ ಪೂಜಾರಿ ಅವರ ಯಜಮಾನತ್ವದ "ತಾಟೆ" ಹೆಸರಿನ ಕೋಣಗಳಿಗೆ ಗೌರವದ ಸನ್ಮಾನ. ಕಂಬಳದಲ್ಲಿ ಭಾಗವಹಿಸುವ ಕೋಣಗಳ ಯಜಮಾನರಿಗೆ ಬೆಳ್ಳಿಯ ಪದಕ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ಕನೆ ಹಲಗೆ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಪ್ರಶಸ್ತಿ ಮಾತ್ರ ನೀಡಲಾಗುತ್ತಿದ್ದು, ಇನ್ನುಳಿದಂತೆ ಅಡ್ಡ ಹಲಗೆ ವಿಭಾಗ, ಹಗ್ಗದ ವಿಭಾಗದಲ್ಲಿ ಸೀನಿಯರ್ ಹಾಗೂ ಜೂನಿಯರ್, ನೇಗಿಲು ವಿಭಾಗದಲ್ಲಿ ಸೀನಿಯರ್ ಹಾಗೂ ಜೂನಿಯರ್ ಸ್ಪರ್ಧೆಯಲ್ಲಿ ಪ್ರಥಮ , ದ್ವಿತೀಯ, ತೃತೀಯ ಹಾಗೂ ಚತುರ್ಥ ಬಹುಮಾನ ನೀಡಿ ಪುರಸ್ಕರಿಸಲಾಗುವುದು.

ಜ. 15ರಂದು ಸೋಮವಾರ ಮಧ್ಯಾಹ್ನ‌ 3.00ಗಂಟೆಯಿಂದ ಮಹಿಳೆಯರಿಗಾಗಿ ಹೊನಲು ಬೆಳಕಿನ ಕ್ರೀಡಾಕೂಟ ಜಿಲ್ಲಾ ಪಂಚಾಯಿತಿ ಮಾಜಿ‌ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಅವರ ನೇತೃತ್ವದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News