×
Ad

ಡಿ.16: ಕದ್ರಿ ಯುದ್ಧ ಸ್ಮಾರಕದಲ್ಲಿ ‘ವಿಜಯ ದಿವಸ’ ಆಚರಣೆ

Update: 2023-12-14 17:46 IST

ಮಂಗಳೂರು : ಪಾಕಿಸ್ಥಾನದ ವಿರುದ್ಧ 1971ರ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ಸ್ಮರಣಾರ್ಥ ದ.ಕ. ಜಿಲ್ಲಾ ನಿವೃತ್ತ ಸೈನಿಕರ ಸಂಘದ ವತಿಯಿಂದ ಡಿ.16ರಂದು ಬೆಳಗ್ಗೆ 8:30ಕ್ಕೆ ನಗರದ ಕದ್ರಿ ಹಿಲ್ಸ್‌ನಲ್ಲಿರುವ ಯೋಧರ ಯುದ್ಧ ಸ್ಮಾರಕದಲ್ಲಿ ಹೂಹಾರ/ ಗುಚ್ಚಗಳನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿ ‘ವಿಜಯ ದಿವಸ್’ ಆಚರಿಸಲಾಗುವುದು ಎಂದು ಸಂಘದ ಕಾರ್ಯದರ್ಶಿ ಕ್ಯಾ.ದೀಪಕ್ ಅಡ್ಯಂತಾಯ ಹೇಳಿದರು.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯುದ್ಧದಲ್ಲಿ ಭಾರತೀಯ ವೀರ ಯೋಧರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುವ ಹಾಗೂ ಯುವ ಸಮಾಜಕ್ಕೆ ಸೈನಿಕರ ರಾಷ್ಟ್ರಭಕ್ತಿಯ ಸಮರ್ಪಣಾ ಮನೋಭಾವದ ಬಗ್ಗೆ ಸ್ಫೂರ್ತಿ ತುಂಬಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಡಿಜಿ ಎನ್‌ಸಿಸಿ ವತಿಯಿಂದ ‘ಜಾದಿ ಕಾ ಅಮೃತ ಮಹೋತ್ಸವ’ ಅಂಗವಾಗಿ ನಾರಿ ಶಕ್ತಿ ಆಚರಿಸಲು ಕನ್ಯಾಕುಮಾರಿಯಿಂದ ಹೊಸದಿಲ್ಲಿಯವರೆಗೆ ಅಖಿಲ ಭಾರತ ಎನ್‌ಸಿಸಿ ಬಾಲಕಿಯರ ಮೆಗಾ ಸೈಕಲ್ ರ್ಯಾಲಿ ಆಯೋಜಿಸಲಾಗಿದೆ. ಈ ರ್ಯಾಲಿಗೆ ಡಿಸೆಂಬರ್ 8ರಂದು ಕನ್ಯಾಕುಮಾರಿಯಲ್ಲಿ ಚಾಲನೆ ನೀಡಲಾಗಿದೆ. ಡಿ.16ರಂದು ಮಧ್ಯಾಹ್ನ 12ಕ್ಕೆ ರಾಜ್ಯದ ಗಡಿ ಪ್ರದೇಶ ತಲಪಾಡಿ ಮೂಲಕ ಕರ್ನಾಟಕ ಪ್ರವೇಶಿಸಲಿದೆ ಎಂದು ಎನ್‌ಸಿಸಿ ಸರ್ವಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಗ್ರೇಶಿಯನ್ ಸಿಕ್ವೇರ ತಿಳಿಸಿದರು.

ಬಳಿಕ ಈ ರ್ಯಾಲಿಯು ಮಂಗಳೂರು ಕೆಪಿಟಿ ಸಮೀಪದ ಯುದ್ಧ ಸ್ಮಾರಕ ತಲುಪಲಿದ್ದು, ಎನ್‌ಸಿಸಿ ಕಮಾಂಡರ್ ಕರ್ನಲ್ ಎನ್.ಕೆ. ಭಗಾಸ್ರ ಅವರಿಂದ ಧ್ವಜಾರೋಹಣ ನಡೆಯಲಿದೆ. ಬ್ರಿಗೇಡಿಯರ್ ಐ.ಎನ್.ರೈ ಚಾಲನೆ ನೀಡುವರು. ಡಿ.17ರಂದು ಕೆಪಿಟಿ ಯುದ್ಧ ಸ್ಮಾರಕದಿಂದ ಸೈಕಲ್ ರ್ಯಾಲಿಯು ಪ್ರಯಾಣ ಮುಂದುವರಿಸಲಿದ್ದು, ಉಡುಪಿ ಮಾರ್ಗವಾಗಿ ಹೊನ್ನಾವರ ಕಡೆಗೆ ಸಂಚರಿಸಲಿದೆ. ಸೈಕಲ್ ರ್ಯಾಲಿಯಲ್ಲಿ ಗುಜರಾತ್‌ನ ಎನ್‌ಸಿಸಿ ಬಾಲಕಿಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಕೋಶಾಧಿಕಾರಿ ಸುಧೀರ್ ಪೈ, ಸದಸ್ಯ ಅಪ್ಪು ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News