ಫೆ.18ರಿಂದ ಶ್ವೇತಯಾನ ಸರಣಿ ಕಾರ್ಯಕ್ರಮ
ಉಡುಪಿ, ಫೆ.6: ತೆಕ್ಕಟ್ಟೆ ಕೋಮೆ ಯಶಸ್ವಿ ಕಲಾವೃಂದ ವತಿಯಿಂದ 25ನೇ ವರ್ಷ ಬೆಳ್ಳಿ ಹಬ್ಬ ಅಂಗವಾಗಿ 1999-ಶ್ವೇತಯಾನ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬೆಳ್ಳಿಹಬ್ಬ ಸಂಭ್ರಮಾಚರಣೆ ಸಮಿತಿ ಕಾರ್ಯಾಧ್ಯಕ್ಷ ಸುಜಯ ಶೆಟ್ಟಿ ತಿಳಿಸಿದ್ದಾರೆ.
ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಕ್ಷಗಾನ, ನಾಟಕ. ನೃತ್ಯ, ಸಂಗೀತ ಕಲಾ ಪ್ರಕಾರವನ್ನು ಒಳಗೊಂಡ ಸರಣಿ ಕಾರ್ಯಕ್ರಮ ವಾರಾಂತ್ಯ ಶನಿವಾರ, ರವಿವಾರ ಆಯೋಜಿಸಲಾಗಿದೆ. ಫೆ.18ರಿಂದ ಉದ್ಘಾಟನೆ ಗೊಂಡು 2025ರ ಮಾರ್ಚ್ 2ರವರೆಗೆ ನಡೆಯಲಿದೆ. ಒಟ್ಟು 108 ರೀತಿಯ ಕಾರ್ಯಕ್ರಮಗಳು ಪ್ರಸ್ತುತಿಗೊಳ್ಳಲಿದೆ. ಸ್ಥಳೀಯ, ಜಿಲ್ಲೆ ಸಹಿತ ಹೊರ ರಾಜ್ಯದ ಕಲಾ ತಂಡಗಳು ಇದರಲ್ಲಿ ಭಾಗವಹಿಸುತ್ತಿದೆ ಎಂದರು.
ಫೆ.18ರ ಸಂಜೆ 5 ಗಂಟೆ ಗೆ ತೆಕ್ಕಟ್ಟೆ ಹಯಗ್ರೀವದಿಂದ ಪ್ರೆಸಿಡೆಂಟ್ ಕನ್ವೆನ್ಶನ್ ಸೆಂಟರ್‌ವರೆಗೆ ಪುರ ಮೆರವಣಿಗೆ ನಡೆಯ ಲಿದ್ದು, ಪ್ರೆಸಿಡೆಂಟ್ ಕನ್ವೆನ್ಶನ್ ಸೆಂಟರ್‌ನಲ್ಲಿ ರಾತ್ರಿ 7ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ನೆರವೇರಿಸಲಿದ್ದಾರೆ. ಅಂದು ಆನಂದ್ ಸಿ. ಕುಂದರ್, ಶಿವರಾಮ ಶೆಟ್ಟಿ ಮಲ್ಯಾಡಿ, ಬಾಬು ಪೂಜಾರಿ ಮಲ್ಯಾಡಿ, ಯು. ಎಸ್. ಶೆಣೈ ಸಹಿತ ಮೊದಲಾದ ಪ್ರಮುಖರನ್ನು ಒಳಗೊಂಡ ಪಾತ್ರದಾರಿಗಳಿಂದ ಪುರಾಣ ಕಥಾ ಕಲ್ಯಾಣ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಸೀತಾರಾಮ್ ಶೆಟ್ಟಿ ಮಲ್ಯಾಡಿ, ಪದಾಧಿಕಾರಿ ಗಳಾದ ಕೊಯ್ಕೂರು ಸೀತರಾಮ ಶೆಟ್ಟಿ, ಹೆರಿಯ ಮಾಸ್ತರ್, ಶ್ರೀಷ ಭಟ್, ವೆಂಕಟೇಶ್ ವೈದ್ಯ, ರಾಘವೇಂದ್ರ ತುಂಗ, ಗೋಪಾಲ ಪೂಜಾರಿ ಉಪಸ್ಥಿತರಿದ್ದರು.