×
Ad

ಸೆ.19ರಂದು ಮುಡಿಪು ಎಜು ಪಾರ್ಕ್‌ನಲ್ಲಿ ‘ಫರ್ಹೇ ಮೀಲಾದ್ ’ಸಂಭ್ರಮ

Update: 2025-09-17 22:37 IST

ಮಂಗಳೂರು: ಪ್ರವಾದಿ ಪೈಗಂಬರರ 1,500ನೇ ಜನ್ಮ ಮಾಸಾಚರಣೆಯ ಅಂಗವಾಗಿ ಮಜ್ಲಿಸ್ ಎಜುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮುಡಿಪು ಸಂಸ್ಥೆಯ ವತಿಯಿಂದ ‘ಫರ್ಹೇ ಮೀಲಾದ್ ’ಸಂಭ್ರಮ ಸಮಾವೇಶವು ಸೆ.19ರಂದು ಮುಡಿಪುವಿನ ಮಜ್ಲಿಸ್ ಎಜು ಪಾರ್ಕ್‌ನಲ್ಲಿ ನಡೆಯಲಿದೆ ಎಂದು ಮುಡಿಪು ಮಜ್ಲಿಸ್ ಎಜು ಪಾರ್ಕ್‌ನ ಅಧ್ಯಕ್ಷ ಶರಫ್ಫುಸ್ಸಾದಾತ್ ಸಯ್ಯದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಳ್ ಆದೂರು ತಿಳಿಸಿದ್ದಾರೆ.

ಮಂಗಳೂರು ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜನಸೇವೆಯೇ ಅತ್ಯಂತ ಶ್ರೇಷ್ಠ ಸತ್ಕರ್ಮ ಎಂಬ ಪ್ರವಾದಿಗಳ ಸಂದೇಶವನ್ನು ಅಳವಡಿಸಿಕೊಂಡು ಪ್ರಸ್ತುತ ಸಮಾವೇಶದ ಅಂಗವಾಗಿ ವಿವಿಧ ಜನಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಕೈ ಮತ್ತು ಕಾಲುಗಳನ್ನು ಕಳೆದುಕೊಂಡಿರುವ ಅಂಗವಿಕಲರ ಜೀವನದಲ್ಲಿ ಹೊಸ ಭರವಸೆ ಮೂಡಿಸುವ ಉದ್ದೇಶದಿಂದ ಕೃತಕ ಕೈ ಮತ್ತು ಕಾಲುಗಳನ್ನು ಉಚಿತ ವಾಗಿ ಅಳವಡಿಸಲಾಗುವುದು. ಕಳೆದ ಎರಡು ವರ್ಷಗಳಿಂದ ಸಂಸ್ಥೆಯ ವತಿಯಿಂದ ಅಂಗವಿಕಲರಿಗೆ ಕೃತಕ ಕಾಲುಗಳನ್ನು ನೀಡಲಾಗಿದ್ದು, ಈ ಬಾರಿ ಕೈ ಇಲ್ಲದವರನ್ನು ಕೂಡ ಪರಿಗಣಿಸಲಾಗಿದೆ. ಜಾತಿ ಮತ ಭೇದವಿಲ್ಲದೆ ಅಂಗವಿಕಲರಿಗೆ ಒದಗಿಸಲಾಗುವ ಈ ಸೇವೆಗಾಗಿ ಈಗಾಗಲೇ 150ಕ್ಕೂ ಅಧಿಕ ಅರ್ಹರು ಹೆಸರು ನೋಂದಾಯಿಸಿ ದ್ದಾರೆ. ಅವರೆಲ್ಲರಿಗೂ ಕೃತಕ ಕೈ ಮತ್ತು ಕಾಲುಗಳನ್ನು ಒದಗಿಸಲಾಗುವುದು.

ಸೆ. 19ರಂದು ಬೆಳಗ್ಗೆ 9 ಗಂಟೆಗೆ ರಕ್ತದಾನ ಶಿಬಿರ ಮತ್ತು ಬೃಹತ್ ವೈದ್ಯಕೀಯ ಶಿಬಿರ ನಡೆಯಲಿದ್ದು ಅಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದಿಕ್ ಚಿಕಿತ್ಸೆಯನ್ನು ನೀಡಲಾಗುವುದು. ಇದೇ ವೇಳೆ ಯು ಟಿ ಫರೀದ್ ಸ್ಮರಣಾ ಸಂಗಮ ನಡೆಯಲಿದೆ. ಓಲ್ಡ್ ಏಜ್ ಮದ್ರಸಕ್ಕೆ ಶಿಲಾನ್ಯಾಸ ನಡೆಯಲಿದೆ. ಸಂಜೆ 4 ಗಂಟೆಗೆ ನಡೆಯುವ ಬೃಹತ್ ಸಮ್ಮೇಳನ ‘ಹುಬ್ಬುನ್ನಬಿ ಕಾನ್ಫರೆನ್ಸ್’ನಲ್ಲಿ ನಾಗೂರು ದರ್ಗಾ ಶರೀಫ್ ಖಲೀಫಾ ಹಝ್ರತ್ ಸಯ್ಯದ್ ಮುಹಮ್ಮದ್, ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಕೇರಳ ರಾಜ್ಯ ಹಜ್ ಕಮಿಟಿ ಅಧ್ಯಕ್ಷ ಡಾ.ಹುಸೈನ್ ಸಖಾಫಿ ಚುಳ್ಳಿಕ್ಕೋಡ್ ವಿಧಾನಸಭಾ ಸ್ಪೀಕರ್ ಯು ಟಿ. ಖಾದರ್, ಯೇನಪೋಯ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ವೈ ಅಬ್ದುಲ್ಲ ಕುಂಞಿ ಹಾಜಿ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.

ಕಾಸರಗೋಡು ಜಿಲ್ಲೆಯ ಮಲೆನಾಡು ಪ್ರದೇಶವಾದ ಅದೂರಿನಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವೆಯ ಉದ್ದೇಶದಿಂದ 2002 ರಲ್ಲಿ ಸ್ಥಾಪಿಸಿದ ಮಜ್ಲಿಸ್ ಇಂದು 15ಕ್ಕೂ ಅಧಿಕ ಶಿಕ್ಷಣಾಲಯಗಳ ಮೂಲಕ ಸಾವಿರಾರು ಮಕ್ಕಳಿಗೆ ಬಹುಮುಖ ವಿದ್ಯಾಭ್ಯಾಸವನ್ನು ನೀಡಲಾಗುತ್ತಿದೆ. ಈಗಾಗಲೇ 10,000 ಕ್ಕೂ ಅಧಿಕ ಮಕ್ಕಳು ಅಧ್ಯಯನ ವನ್ನು ಪೂರ್ಣಗೊಳಿಸಿದ್ದು ,ಪ್ರಸ್ತುತ 2,000 ಕ್ಕೂ ಹೆಚ್ಚು ಮಕ್ಕಳು ಅಧ್ಯಯನ ನಿರತರಾಗಿದ್ದಾರೆ. ಅನಾಥ ಮಕ್ಕಳಿಗೆ ಶಿಕ್ಷಣ, ಕಲಿಕಾ ಸಾಮಗ್ರಿಗಳು ಮತ್ತು ಶೈಕ್ಷಣಿಕ ಪ್ರವಾಸಗಳನ್ನು ಪ್ರಾರಂಭದಿಂದಲೂ ಸಂಪೂರ್ಣ ಉಚಿತವಾಗಿ ಒದಗಿಸಲಾಗುತ್ತಿದೆ. ಶಿಕ್ಷಣ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಇಂದು ವೈದ್ಯರು, ಇಂಜಿನಿಯರ್‌ಗಳು, ವಕೀಲರು, ಶಿಕ್ಷಕರು ಉದ್ಯಮಿಗಳು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕಳೆದ ಒಂದು ದಶಕದಿಂದ ಉಳ್ಳಾಲ ತಾಲೂಕಿನ ಮುಡಿಪುವಿನಲ್ಲಿ ವಿದ್ಯಾಭ್ಯಾಸ ಕೇಂದ್ರವನ್ನು ಆರಂಭಿಸಿರುವ ‘ಮಜ್ಲಿಸ್’ ನಲ್ಲಿ ಶಾಲಾಪೂರ್ವ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದ ತನಕ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಿದೆ. ಹೆಣ್ಮಕ್ಕಳ ಪಿಯು ಕಾಲೇಜು, ಧಾರ್ಮಿಕ-ಲೌಕಿಕ ಸಮನ್ವಯ ಉಚಿತ ಶಿಕ್ಷಣ ಕೇಂದ್ರಗಳು ಇಲ್ಲಿದ್ದು , ಧಾರ್ಮಿಕ ಮತ್ತು ಸಾಮಾಜಿಕ ಅರಿವು ಪಡೆಯ ಬಯಸುವ 70 ವರ್ಷ ದಾಟಿದ ವೃದ್ಧರು ಸೇರಿದಂತೆ ವಯಸ್ಕರಿಗಾಗಿ ಓಲ್ಡ್ ಏಜ್ ಮದರಸಾವನ್ನು ಸ್ಥಾಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರೋಗದಿಂದ ಬಳಲುತ್ತಿರುವ ಹಲವು ಅಸಹಾಯಕ ಬಡ ರೋಗಿಗಳಿಗೆ ಚಿಕಿತ್ಸೆ ಮತ್ತು ಔಷಧಿಗಳಿಗಾಗಿ ಮಾಸಿಕ ಸಹಾಯಧನವನ್ನು ‘ಮಜ್ಲಿಸ್ ನೀಡುತ್ತಿದ್ದು, ವಿಧವೆಯರು ಮತ್ತು ನಿರ್ಗತಿಕ ಗೃಹಿಣಿಯರಿಗೆ ಮಾಸಿಕ ಜೀವನ ವೆಚ್ಚ ವನ್ನು ಒದಗಿಸಲಾಗುತ್ತಿದೆ. ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮತ್ತು ನಿವೇಶನ ಖರೀದಿಗೆ ನೆರವು ನೀಡುವುದು ಸೇರಿದಂತೆ ಹಲವು ಜನಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ.

ಮುಡಿಪುವಿನ ಮಜ್ಲಿಸ್ ಎಜು ಪಾರ್ಕ್‌ನಲ್ಲಿ ಸಖಾಫಿಯ್ಯ ಅಧ್ಯಾತ್ಮಿಕ ಸಂಗಮವು ಪ್ರತೀ ತಿಂಗಳು ನಡೆಯುತ್ತಿದ್ದು, ದೈವಿಕ ಪುಣ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಬಯಸಿ ಸಾವಿರಾರು ಜನ ಸೇರುತ್ತಾರೆ. ರೋಗ ರುಜಿನಗಳು ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುವ ಅಸಂಖ್ಯಾತ ಜನರು ಪರಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಸಂಚಾಲಕ ಕೆ.ಎಂ. ಅಬೂಬಕರ್ ಸಿದ್ದೀಖ್ , ಉಪಾಧ್ಯಕ್ಷರು ಜಲಾಲುದ್ದೀನ್ ತಂಙಳ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಪಿ.ಬಿ.ತೌಸಿಫ್ ಉಪಸ್ಥಿತರಿದ್ದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News