×
Ad

ಅ.19ರಂದು ಕುದ್ರೋಳಿ ಕ್ಷೇತ್ರದಲ್ಲಿ ಗೂಡುದೀಪ ಸ್ಪರ್ಧೆ

Update: 2025-10-17 19:08 IST

ಮಂಗಳೂರು, ಅ.17: ನಮ್ಮ ಕುಡ್ಲ ವಾಹಿನಿಯಿಂದ 25ನೇ ವರ್ಷದ ಗೂಡುದೀಪ ಸ್ಪರ್ಧೆ ಅ.19ರಂದು ಸಂಜೆ 6ರಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ನಾನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಪುರಸ್ಕಾರ, ಸನ್ಮಾನ ನಡೆಯಲಿದೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರಾ ಅವರು ಮಾತನಾಡಿ, ಸಾಂಪ್ರದಾಯಿಕ, ಆಧುನಿಕ ಹಾಗೂ ಪ್ರತಿಕೃತಿ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯ ಲಿದೆ. ಪ್ರತಿಯೊಂದು ವಿಭಾಗದಲ್ಲೂ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕ, ತೃತೀಯ ಸ್ಥಾನ ಪಡೆದ ಮೂವರು ವಿಜೇತರಿಗೆ ಬೆಳ್ಳಿಯ ಪದಕ ಹಾಗೂ 50 ಪ್ರೋತ್ಸಾಹಕ ಬಹುಮಾನ ಹಾಗೂ ವಿಶೇಷ ಪ್ರೋತ್ಸಾಹಕ ಬಹುಮಾನಗಳಿವೆ. ಭಾಗವಹಿಸಿದ ಪ್ರತಿಯೊಬ್ಬ ಸ್ಪರ್ಧಿಗೂ ನೆನಪಿನ ಕಾಣಿಕೆಯ ಜೊತೆಗೆ ಸಿಹಿತಿಂಡಿಯ ಪೊಟ್ಟಣ ಹಾಗೂ ಶ್ರೀಕ್ಷೇತ್ರದ ಪ್ರಸಾದ ನೀಡಿ ಗೌರವಿಸಲಾಗುವುದು ಎಂದರು.

ಪ್ರಶಸ್ತಿ ಪುರಸ್ಕಾರ: ರಂಗಭೂಮಿ ಕಲಾವಿದರಾಗಿರುವ ಲಕ್ಷ್ಮಣ ಕುಮಾರ್ ಮಲ್ಲೂರು ಇವರಿಗೆ ನಮ್ಮಕುಡ್ಲ ಪ್ರಶಸ್ತಿ, ಸಮಾಜ ಸೇವಕ, ಅಸಾಮಾನ್ಯ ಸಾಧಕರಾದ ಉಡುಪಿಯ ಡಾ. ಜಿ. ಶಂಕರ್‌ರವರಿಗೆ ನಮ್ಮ ತುಳುವೆರ್ ಪ್ರಶಸ್ತಿ, ಸಮಾಜ ಸೇವೆ ಮಾಡುತ್ತಿರುವ ಯುವವಾಹಿನಿ ಸಂಸ್ಥೆಗೆ ಬಿ. ಪಿ. ಕರ್ಕೇರ ಸೇವಾ ಪ್ರಶಸ್ತಿ, ಮಂಗಳೂರಿನಲ್ಲಿ ಸೇವಾ ಭಾವ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ ಸಾಧಕಿ ಗೀತಾ ಶೆಟ್ಟಿ ಇವರಿಗೆ ಲಕ್ಷ್ಮೀ ಬಿ. ಪಿ. ಕರ್ಕೇರ ಪ್ರಶಸ್ತಿ, ನಮ್ಮ ಕುಡ್ಲ ಹಿರಿಯ ಕ್ಯಾಮರಮೆನ್ ದಿವಾಕರ ಬೈಕಂಪಾಡಿ ಅವರ ಪುತ್ರ ಶೋಧಿತ್ ಅಮೀನ್ ಬೈಕಂಪಾಡಿ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕುಡ್ಲ ವಾಹಿನಿ ನಿರ್ದೇಶಕರಾದ ಹರೀಶ್ ಬಿ. ಕರ್ಕೇರಾ, ಸುರೇಶ್ ಬಿ. ಕರ್ಕೇರಾ, ಮೋಹನ್ ಬಿ. ಕರ್ಕೇರಾ, ಸಂತೋಷ್ ಬಿ. ಕರ್ಕೇರಾ, ಪ್ರಮುಖರಾದ ದಯಾನಂದ ಕಟೀಲ್, ಸುದರ್ಶನ್ ಕೋಟ್ಯಾನ್, ಜಯಂತ್ ಉಳ್ಳಾಲ್ ಉಪಸ್ಥಿತರ್ದಿದ್ದರು.

ನಮ್ಮ ಕುಡ್ಲ ಗೌರವ ಸನ್ಮಾನ

ಸಹಕಾರಿ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿದ, ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ರಾಜಕೀಯ ರಂಗ ಸೇರಿ ಜನಪ್ರತಿನಿಧಿಯಾಗಿ ಕರ್ನಾಟಕ ಸರಕಾರದ ಮಾಜಿ ಸಚಿವ, ಉದ್ಯಮಿ ಕೃಷ್ಣ ಜೆ. ಪಾಲೆಮಾರ್, ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ವೆಂಕಟರಮಣ ಅಕ್ಕರಾಜು ಗೌರವ ಸನ್ಮಾನ ನಡೆಯಲಿದೆ. ಸಮಾರಂಭವು ಸಂಜೆ 3 ಗಂಟೆಗೆ ಭಜನಾ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಿ, ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು, ಕ್ಷೇತ್ರದ ಸುತ್ತಲೂ ಕಂಗೊಳಿಸುವ ಗೂಡುದೀಪಗಳ ದೃಶ್ಯ , ಪ್ರಶಸ್ತಿ ಪ್ರದಾನ ಹಾಗೂ ಬಹುಮಾನ ವಿತರಣಾ ಸಭಾ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News