ಫೆ.24ರಂದು ಉಳ್ಳಾಲದಲ್ಲಿ ಅಬ್ಬಕ್ಕ ಉತ್ಸವ
ಮಂಗಳೂರು: ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ 2023-2024ನೇ ಸಾಲಿನ ಅಬ್ಬಕ್ಕೋತ್ಸವ ಫೆ.24ರಂದು ಉಳ್ಳಾಲ ನಗರಸಭೆಯ ಆವರಣದಲ್ಲಿರುವ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ ಹೇಳಿದರು.
ಅವರು ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಕರ್ಷಕ ತುಳುನಾಡ ಜಾನಪದ ದಿಬ್ಬಣದೊಂದಿಗೆ ಕಾರ್ಯಕ್ರಮ ಫೆ.24ರಂದು ಬೆಳಗ್ಗೆ 8.30ಕ್ಕೆ ಆರಂಭಗೊಳ್ಳಲಿದೆ ಎಂದರು.
ಉಳ್ಳಾಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬಾಲಕೃಷ್ಣ ಎಚ್.ಎನ್ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. 10ಕ್ಕೆ ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆಯನ್ನು ವಿಧಾನ ಸಭಾ ಸ್ಪೀಕರ್ ಯು.ಟಿ. ಖಾದರ್ ವಹಿಸಲಿದ್ದಾರೆ. ಮಂಗಳೂರು ವೀರರಾಣಿ ಅಬ್ಬಕ್ಕ ಜೈನ ಮಹಿಳಾ ಸಂಘದ ಕಾರ್ಯದರ್ಶಿ ಡಾ. ಅಕ್ಷತಾ ಆದರ್ಶ್ ಜೈನ್ ಉತ್ಸವದ ಉದ್ಘಾಟನೆ ನಡೆಯಲಿದೆ. ಚಿತ್ರ ನಟಿ ಸರೋಜಿನಿ ಎಸ್ ಶೆಟ್ಟಿ ಸಾಂಸ್ಕೃತಿಕ ಕಾರ್ಯಕ್ರಮವನ್ನು, ಉಳ್ಳಾಲ ನಗರಸಭೆಯ ಪೌರಾಯುಕ್ತರಾದ ವಾಣಿ ಆಳ್ವರು ಸಾಹಿತ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಧಾನಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಆಶಯ ಭಾಷಣ ಮಾಡಲಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರರಿಂದ ಶುಭಾಶಂಸನೆ ಮಾಡಲಿದ್ದಾರೆ ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಹಾಗೂ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸ ಲಾಗುತ್ತದೆ. ಪ್ರೋ.ಅಮೃತ ಸೋಮೇಶ್ವರರ ಸಂಸ್ಕರಣೆಗಾಗಿ ಡಾ. ಕೆ ಚಿನ್ನಪ್ಪ ಗೌಡರ ಅಧ್ಯಕ್ಷತೆಯಲ್ಲಿ ಅಮೃತರ ಬದುಕು ಬರಹದ ಬಗ್ಗೆ ವಿಚಾರಗೋಷ್ಠಿಯನ್ನು ಏರ್ಪಡಿಸಲಾಗಿದೆ. ಪಾದೇಕಲ್ ವಿಷ್ಣುಭಟ್ ಮತ್ತು ಅರುಣ್ ಉಳ್ಳಾಲ್ ವಿಷಯ ಮಂಡನೆ ಮಾಡಲಿರುವರು. ಅಮೃತ ಸೋಮೇಶ್ವರರ ನೆನಪಿನಲ್ಲಿ ಅಮೃತ ಬಹುಭಾಷಾ ಕಾವ್ಯ ಗಾಯನ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಸುಲೋಚನಾ ಪಚ್ಚಿನಡ್ಕ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು.
ಸಂಜೆ 5.30ಕ್ಕೆ ಸಮಾರೋಪ ನಡೆಯಲಿದ್ದು,. ಈ ಸಂದರ್ಭ ಪ್ರಸಿದ್ಧ ಲೇಖಕಿ ಡಾ. ಪ್ರಮೀಳಾ ಮಾಧವ್ ಮತ್ತು ಖ್ಯಾತ ಕ್ರೀಡಾಪಟು ಡಾ. ಕೆ. ಮಾಲತಿ ಹೊಳ್ಳರಿಗೆ ಪ್ರತಿಷ್ಠಿತ ವೀರರಾಣಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದವರು ಹೇಳಿದರು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ದಿನಕರ ಉಳ್ಳಾಲ್, ಪ್ರಧಾನ ಕಾರ‌್ಯದರ್ಶಿ ಧನಲಕ್ಷ್ಮಿ ಗಟ್ಟಿ, ಉಪಾಧ್ಯಕ್ಷರಾದ ದೇವಕಿ ಆರ್. ಉಳ್ಳಾಲ್, ಯು.ಪಿ. ಆಲಿಯಬ್ಬ, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ ಹಾಗೂ ರತ್ನಾವತಿ ಜೆ ಬೈಕಾಡಿ ಉಪಸ್ಥಿತರಿದ್ದರು.