×
Ad

ಫೆ.25-27: ತೊಕ್ಕೊಟ್ಟು-ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ಡಿವೈಎಫ್‌ಐ 12ನೆ ರಾಜ್ಯ ಸಮ್ಮೇಳನ

Update: 2024-02-19 19:26 IST

ಮಂಗಳೂರು: ಸಾಮರಸ್ಯ, ಉದ್ಯೋಗ, ಘನತೆಯ ಬದುಕಿಗಾಗಿ ಎಂಬ ಘೋಷಣೆಯೊಂದಿಗೆ ಡಿವೈಎಫ್‌ಐ 12ನೇ ಕರ್ನಾಟಕ ರಾಜ್ಯ ಸಮ್ಮೇಳನವು ಫೆ.25,26,27ರಂದು ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿರುವ ಯುನಿಟಿ ಸಭಾಂಗಣ ದಲ್ಲಿ ನಡೆಯಲಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನದ ಮೊದಲ ಎರಡು ದಿನ ಪ್ರತಿನಿಧಿ ಅಧಿವೇಶನ ನಡೆಯಲಿದೆ. ರಾಜ್ಯದ ಪ್ರತಿ ಜಿಲ್ಲೆಗಳಿಂದಲೂ ಸದಸ್ಯತ್ವದ ಆಧಾರದ ಮೇಲೆ ಮುನ್ನೂರು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಫೆ.25ರಂದು ಬೆಳಗ್ಗೆ 10ಕ್ಕೆ ಯುನಿಟಿ ಹಾಲ್‌ನ ಪ್ರೊ.ಅಮೃತ ಸೋಮೇಶ್ವರ ವೇದಿಕೆಯ, ಡಾ. ವಿಠಲ್ ಭಂಡಾರಿಯ ಸಭಾಂಗಣದ, ನಾಗೇಶ್ ಕುಮಾರ್ ನಗರದಲ್ಲಿ ನಡೆಯುವ ಸಮ್ಮೇಳನವನ್ನು ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಿವೈಎಫ್‌ಐ ಅಖಿಲ ಭಾರತ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಎಎ ರಹೀಮ್ ಭಾಗವಹಿಸಲಿದ್ದಾರೆ. ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಹಾಗೂ ನಿವೃತ್ತ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಸ್ವಾಗತ ಭಾಷಣ ಮಾಡಲಿದ್ದಾರೆ. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯಲ್ಲಿ ಕಾರ್ಯದರ್ಶಿ ಬಸವರಾಜ್ ಪೂಜಾರ್, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಾಜೇಶ್ ವೆಲ್ಲಾಟ್, ಕರ್ನಾಟಕ ರಾಜ್ಯ ಸಮಿತಿ ಸದಸ್ಯೆ ರೇಣುಕಾ ಕಹರ್ ಪಾಲ್ಗೊಳ್ಳಲಿದ್ದಾರೆ ಎಂದರು.

*ವಿಶೇಷ ಉಪನ್ಯಾಸ: ಫೆ.26ರಂದು ಬೆಳಗ್ಗೆ 10:30ಕ್ಕೆ ದೆಹಲಿ ಜೆಎನ್‌ಯು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ. ಪುರುಷೋತ್ತಮ ಬಿಳಿಮಲೆ ಅವರಿಂದ ‘ಕರಾವಳಿ ಕಟ್ಟಿದ ಬಗೆ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನಡೆಯಲಿದೆ.

ಯೂಥ್ ಮಾರ್ಚ್: ಸಮ್ಮೇಳನದ ಸಮಾರೋಪವು ಫೆ.27ರಂದು ಜರುಗಲಿದ್ದು, ಆ ಪ್ರಯುಕ್ತ ಅಂದು ಅಪರಾಹ್ನ 3ಕ್ಕೆ ಕುತ್ತಾರ್ ಜಂಕ್ಷನ್‌ನಿಂದ ಕಲ್ಲಾಪು ಯುನಿಟಿ ಹಾಲ್ ಮೈದಾನದವರೆಗೆ ಯುವಜನರ ವರ್ಣರಂಜಿತ ರ್ಯಾಲಿ ನಡೆಯಲಿದೆ. ಸೌಹಾರ್ದ ಸಾರುವ ಟ್ಯಾಬ್ಲೋಗಳು. ಡಾ.ಅಂಬೇಡ್ಕರ್, ಮಹಾತ್ಮ ಗಾಂಧಿ, ಭಗತ್ ಸಿಂಗ್, ನಾರಾಯಣ ಗುರು, ಕೋಟಿ-ಚೆನ್ನಯ, ಕುದ್ಮಲ್ ರಂಗರಾವ್, ವಸಾಹತು ಆಕ್ರಮಣದ ವಿರುದ್ಧ ಸೈನ್ಯ ಕಟ್ಟಿ ಹೋರಾಡಿದ ಟಿಪ್ಪುಸುಲ್ತಾನ್, ರಾಣಿ ಅಬ್ಬಕ್ಕ, ಅಮರ ಸುಳ್ಳ ವೀರರ ಭಾವಚಿತ್ರಗಳ ಮೆರವಣಿಗೆ, ಚೆಂಡೆ, ಬ್ಯಾಂಡ್‌ಸೆಟ್, ವೇಷಭೂಷಣಗಳ ಜೊತೆಗೆ ಯುವಜನರ ಆಕರ್ಷಕ ಪಥ ಸಂಚಲನ ನಡೆಯಲಿದೆ.

*ಸಮ್ಮೇಳನದ ಬಹಿರಂಗ ಸಭೆ: ಸಮ್ಮೇಳನದ ಬಹಿರಂಗ ಸಭೆಯು ಫೆ.27ರ ಸಂಜೆ 4ಕ್ಕೆ ತೊಕ್ಕೊಟ್ಟು ಯುನಿಟಿ ಮೈದಾನದ ಭಾಸ್ಕರ ಕುಂಬಳೆ ವೇದಿಕೆಯ ಶ್ರೀನಿವಾಸ್ ಬಜಾಲ್ ನಗರದಲ್ಲಿ ನಡೆಯಲಿದೆ. ಸಿಪಿಎಂ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಚಲನಚಿತ್ರ ನಟ ಪ್ರಕಾಶ್ ರೈ, ಡಿವೈಎಫ್‌ಐ ಕೇಂದ್ರ ಸಮಿತಿಯ ಅಧ್ಯಕ್ಷ ಎ.ಎ. ರಹೀಂ ಪ್ರಧಾನ ಭಾಷಣ ಮಾಡಲಿದ್ದಾರೆ.

*ಸಾಂಸ್ಕೃತಿಕ ಕಾರ್ಯಕ್ರಮ: ಸಮ್ಮೇಳನದ ಮೂರು ದಿವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನಾದ ಮಣಿನಾಲ್ಕೂರು ಅವರ ಏಕತಾರಿ ಹಾಡುಗಳ ಗಾಯನ, ಪಿವೈಎಂ ಟ್ರೂಪ್ಸ್ ಬಜಾಲ್ ಮತ್ತು ಸೌಹಾರ್ದ ಕಲಾವಿದರು ಕುತ್ತಾರು ಇವರಿಂದ ಸಾಂಸ್ಕೃತಿಕ ಉತ್ಸವ, ಡಾ.ಅಮೃತ ಸೋಮೇಶ್ವರರ ನೆನಪಿನಲ್ಲಿ ಅಮೃತ ಸ್ಮರಣೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಬಜಾಲ್, ಸಂಘಟನಾ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಕೋಶಾಧಿಕಾರಿ ಬಿ.ಕೆ ಇಮ್ತಿಯಾಝ್, ನವೀನ್ ಕೊಂಚಾಡಿ, ಮನೋಜ್ ವಾಮಂಜೂರು, ರಿಝ್ವಾನ್ ಹರೇಕಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News