×
Ad

ನ.26: ವಿಶುಕುಮಾರ್ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ

Update: 2023-11-23 18:52 IST

ಮಂಗಳೂರು, ನ.23: ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶದಡಿ ಕಾರ್ಯನಿರ್ವಹಿಸುತ್ತಿರುವ ಯುವವಾಹಿನಿ (ರಿ) ಕೇಂದ್ರ ಸಮಿತಿಯು ಸಾಹಿತಿ ವಿಶುಕುಮಾರ್‌ರ ಸಂಸ್ಕರಣೆಯ ಸಂದರ್ಭ ಕೊಡಮಾಡುವ ವಿಶುಕುಮಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನ.26ರಂದು ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಹರೀಶ್ ಪೂಜಾರಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶುಕುಮಾರ್ ದತ್ತಿನಿಧಿ ಸಮಿತಿಯ ಆಶ್ರಯದಲ್ಲಿ ಯುವ ವಾಹಿನಿ (ರಿ) ಸಸಿಹಿತ್ಲು ಘಟಕದ ಆತಿಥ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನವಲ್ಲದೆ ‘ಕನ್ನಡ ರಾಜ್ಯೋತ್ಸವ -ವಿಶು ಕುಮಾರ್ ಸಾಹಿತ್ಯೋತ್ಸವ’ ಆಯೋಜಿಸಿದೆ ಎಂದರು.

ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಬೆಳಗ್ಗೆ 9:30ಕ್ಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕರಾದ ವೇದವ್ಯಾಸ್ ಕಾಮತ್, ಡಾ.ವೈ ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಂಜೆ 3:30ಕ್ಕೆ ವಿಶುಕುಮಾರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಸಿನಿಮಾ ಕ್ಷೇತ್ರದ ಅಪ್ರತಿಮ ಸಾಧಕ, ಕರ್ನಾಟಕ ರತ್ನ ದಿ. ಡಾ.ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಗುವ ವಿಶುಕುಮಾರ್ ಪ್ರಶಸ್ತಿಯನ್ನು ಪುನೀತ್ ರಾಜ್‌ಕುಮಾರ್‌ರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸ್ವೀಕರಿಸಲಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಪತ್ರಕರ್ತ ಗಿರೀಶ್ ರಾವ್ ಹತ್ವಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶುಕುಮಾರ್‌ರ ಪತ್ನಿ ನ್ಯಾಯವಾದಿ ವಿಜಯಲಕ್ಷ್ಮಿ, ನಿರ್ದೇಶಕ ವಿಜಯ ಕುಮಾರ್ ಕೋಡಿಯಾಲ್‌ಬೈಲ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಈ ಸಂದರ್ಭ ಸುಪ್ರಿತಾ ಚರನ್ ಪಾಲಪ್ಪಅವರಿಗೆ ಯುವ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕುಸಮಾಕರ್ ಕುಂಪಲ, ಸಂಚಾಲಕ ಭಾಸ್ಕರ್ ಕೋಟ್ಯಾನ್ ಕೂಳೂರು, ನಿರ್ದೇಶಕ ಭಾಸ್ಕರ್ ಕೋಟ್ಯಾನ್ ಸಸಿಹಿತ್ಲು, ಯುವವಾಹಿನಿ ಸಸಿಹಿತ್ಲು ಘಟಕದ ಅಧ್ಯಕ್ಷೆ ಮೋಹಿನಿ, ಆಯ್ಕೆ ಸಮಿತಿಯ ಸದಸ್ಯ ಶಂಕರ ಸುವರ್ಣ, ಕೋಶಾಧಿಕಾರಿ ಶ್ರವಣ್ ಕುಮಾರ್, ನರೇಶ್ ಸಸಿಹಿತ್ಲು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News