ಜೂ.30: ಸಸಿಹಿತ್ಲುವಿನಲ್ಲಿ ಕೆಸರುಗದ್ದೆ ಕ್ರೀಡಾಕೂಟ "ಗ್ರಾಮದ ಗೌಜಿ"
ಸುರತ್ಕಲ್: ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಅಗ್ಗಿದಕಳಿಯ ಸಸಿಹಿತ್ಲು ಸಂಸ್ಥೆಯ ವತಿಯಿಂದ ಜೂ.30ರಂದು ಕೆಸರುಗದ್ದೆ ಕ್ರೀಡಾಕೂಟ ಗ್ರಾಮದ ಗೌಜಿಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್. ಹೇಳಿದ್ದಾರೆ.
ಬುಧವಾರ ಸುರತ್ಕಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಂಸ್ಥೆ ಗ್ರಾಮ ಅಭ್ಯುದಯಕ್ಕಾಗಿ ಉಚಿತ ಅಂಬ್ಯುಲೆನ್ಸ್ ಸೇವೆ, ನಿರ್ಗತಿಕರಿಗೆ ಮನೆ, ವಿದ್ಯಾರ್ಥಿವೇತನ ವಿತರಣೆ, ಉಚಿತ ಟ್ಯೂಷನ್, ಆರೋಗ್ಯ ಶಿಬಿರ, ಮಾನಸಿಕ ಮಕ್ಕಳ ಬಲಪ್ರವರ್ಧನೆಗೆ ವಿಶೇಷ ಶಿಬಿರ ಮೊದಲಾದವು ಕೆಲಸ ಕಾರ್ಯ ನಡೆಸುತ್ತಾ ಬಂದಿದೆ.
ಸುವರ್ಣ ಮಹೋತ್ಸವದ ಅಂಗವಾಗಿ ಮೇ ತಿಂಗಳಲ್ಲಿ ಉದ್ಘಾಟನಾ ಸಮಾರಂಭ ಮತ್ತು ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ ನಡೆದಿದ್ದು, ಜೂನ್ ತಿಂಗಳಲ್ಲಿ ಬೃಹತ್ ಉಚಿತ ಆರೋಗ್ಯ ಶಿಬಿರ ನಡೆಸಿರುತ್ತೇವೆ.
ಸುವರ್ಣ ಮಹೋತ್ಸವದ ನೆನಪಿನಲ್ಲಿ ಈ ಬಾರಿ ಜೂನ್ 30 ರಂದು ಕೆಸರುಗದ್ದೆ ಕ್ರೀಡಾಕೂಟ ಗ್ರಾಮದ ಗೌಜಿಯನ್ನು ಆಯೋಜಿಸಿದ್ದು, ಮಂಗಳೂರು ಮತ್ತು ಮುಲ್ಕಿ ತಾಲೂಕು ವ್ಯಾಪ್ತಿಯ ತಂಡಗಳು ಭಾಗವಹಿಸಲಿವೆ ಎಂದರು.
ಬಳಿಕ ಮಾತಾಡಿದ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ರಮೇಶ್ ಪೂಜಾರಿ ಚೇಳಾಯರು, ನಾವು ಐದು ವರುಷ ದ.ಕ., ಉಡುಪಿ, ಕಾಸರಗೋಡು ತ್ರಿವಳಿ ಜಿಲ್ಲಾ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ನಡೆಸುತ್ತಿದ್ದೆವು. ಇದು ಸಾಕಷ್ಟು ಪ್ರಸಿದ್ದಿ ಯಾಗಿತ್ತು. ಈ ನಿಟ್ಟಿನಲ್ಲಿ ನಮಗೂ ಅವಕಾಶ ನೀಡುವಂತೆ ಸಾಕಷ್ಟು ಸಂಘಸಂಸ್ಥೆಗಳ ಬೇಡಿಕೆ ಹಿನ್ನೆಲೆಯಲ್ಲಿ ಅಂತಿಮವಾಗಿ ನಾವು ಮಂಗಳೂರು ಮೂಲ್ಕಿ ತಾಲೂಕು ಮಟ್ಟಕ್ಕೆ ವಿಸ್ತರಿಸಿದ್ದೇವೆ.
ಜೂನ್ 30 ರಂದು ಪೂರ್ವಾಹ್ನ 9 ರಿಂದ ಸಂಜೆ 5 ಗಂಟೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹಗ್ಗಜಗ್ಗಾಟ, ಪಿರಮಿಡ್ ಮೂಲಕ ಮಡಕೆ ಒಡೆಯುವ ಸ್ಪರ್ಧೆ, ಜಾನಪದ ಶೈಲಿಯ ನೃತ್ಯ ಸ್ಪರ್ಧೆ ಸಹಿತ ವಿವಿಧ ರೀತಿಯ ಗುಂಪು ಮತ್ತು ವೈಯುಕ್ತಿಕ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ನೀಡಲಿದ್ದೇವೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಸರುಗದ್ದೆ ಕ್ರೀಡಾಕೂಟ ಸಂಚಾಲಕ ಉದಯ ಬಿ. ಸುವರ್ಣ, ಮಹಿಳಾ ಸಮಿತಿ ಅಧ್ಯಕ್ಷೆ ಸರೋಜಿನಿ ಶಾಂತರಾಜ್, ಸಂಘದ ಕಾರ್ಯದರ್ಶಿ ನರೇಶ್ ಕುಮಾರ್ ಸಸಿಹಿತ್ಲು, ಕೋಶಾಧಿಕಾರಿ ವಸಂತ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.