ಜೂ.8ರಂದು ಅಬ್ದುಲ್ ರಹಿಮಾನ್ ಕೊಳತ್ತಮಜಲು ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ
ಮಂಗಳೂರು: ಕೊಳತ್ತಮಜಲಿನಲ್ಲಿ ಮೇ 27ರಂದು ಹತ್ಯೆಯಾಗಿರುವ ಅಬ್ದುಲ್ ರಹಿಮಾನ್ ಕೊಳತ್ತಮಜಲು ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಜೂನ್ 8ರಂದು ಕೊಳತ್ತಮಜಲು ಮದ್ರಸಾ ಸಭಾಂಗಣದಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಆಯೋಜಿಸಲಾಗಿದೆ ಎಂದು ಎಸ್‌ಕೆಎಸ್‌ಎಸ್‌ಎಫ್ ರಾಜ್ಯ ನಾಯಕ ಅನೀಸ್ ಕೌಸರಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಎಚ್‌ಎಮ್ ಫೌಂಡೇಶನ್ ವತಿಯಿಂದ ಕೊಳತ್ತಮಜಲು ಮುಹಿಯ್ಯದ್ದೀನ್ ಜುಮಾ ಮಸೀದಿ ಮತ್ತು ಎಸ್‌ಕೆಎಸ್‌ಎಫ್ ಕೊಳತ್ತಮಜಲು ಶಾಖೆ ಆಶ್ರಯದಲ್ಲಿ , ಬ್ಲಡ್ ಡೋನರ್ಸ್ ಮಂಗಳೂರು ಸಹಯೋಗದೊಂದಿಗೆ ಈ ಶಿಬಿರ ನಡೆಯಲಿದೆ ಎಂದರು.
ಕೊಳತ್ತಮಜಲು ಎಂಬ ಸಣ್ಣ ಊರಿನಲ್ಲಿ ಅಬ್ದುಲ್ ರಹಿಮಾನ್ ಹತ್ಯೆ ನಡೆದಾಗ ಆ ಪ್ರದೇಶದ ಜನರ ಮನಸ್ಸಿನಲ್ಲಿ ಭಯದ ವಾತಾವರಣ ಸೃಷ್ಠಿಯಾಗಿತ್ತು, ಈ ಊರಿನಲ್ಲಿ ಎಲ್ಲಾ ಧರ್ಮದವರು ದಿನಗೂಲಿ ಕೆಲಸ ಮಾಡಿಕೊಂಡು, ಸಣ್ಣ ಸಣ್ಣ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಾರೆ. ಆ ಘಟನೆ ನಡೆದಾಗ ಎಲ್ಲರ ಮನಸ್ಸಿನಲ್ಲೂ ಭಯದ ವಾತಾವರಣ ಉಂಟಾಗಿತ್ತು, ಇದೀಗ ಊರಿನಲ್ಲಿ ಉತ್ತಮ ಸಂದೇಶ ಕೊಡಲು ರಕ್ತದಾನ ಶಿಬಿರವನ್ನು ಎಲ್ಲ ಧರ್ಮೀಯರನ್ನು ಸೇರಿಸಿಕೊಂಡು ಆಯೋಜಿಸಲಾಗಿದೆ ಎಂದು ಅನೀಸ್ ಕೌಸರಿ ತಿಳಿಸಿದರು.
ಕರಾವಳಿ ಸಂಸ್ಕೃತಿ ಎನ್ನುವುದು ಈಗ ಬಿಂಬಿಸುವಂತೆ ಜೀವಕ್ಕೆ ಜೀವ ತೆಗೆಯುವ ಮತ್ತು ರಕ್ತಕ್ಕೆ ರಕ್ತ ತೆಗೆಯುವುದು ಅಲ್ಲ. ಮಂಗಳೂರು ದೊಡ್ಡ ಮೆಡಿಕಲ್ ಸಿಟಿ. ಇಲ್ಲಿ ರಾಜ್ಯಗಳ ಹೊರ ರಾಜ್ಯಗಳ ಲಕ್ಷಾಂತರ ಮಂದಿ ಚಿಕಿತ್ಸೆ ಪಡೆಯುತ್ತಾರೆ. ಮಂಗಳೂರಿನವರು ಇಲ್ಲಿಗೆ ಬರುವ ಎಲ್ಲರಿಗೂ ಜಾತಿ ಮತ ಧರ್ಮದ ಭೇದ ಮಾಡದೆ ಎಲ್ಲರಿಗೂ ರಕ್ತ ಕೊಡುತ್ತಾರೆ. ರಕ್ತದಾನ ನಿರಂತರ ನಡೆಯುತ್ತಿದೆ. ಒಂದು ರೀತಿಯಲ್ಲಿ ಇಲ್ಲಿ ರಕ್ತ ಕೊಡುವ ಸಂಸ್ಕೃತಿ ಬೆಳೆದಿದೆ. ರಕ್ತ ಕೊಟ್ಟು ಇನ್ನೊಬ್ಬರ ಜೀವ ಉಳಿಸುವ ಸಂಸ್ಕೃತಿ ನಮ್ಮದು. ಇದನ್ನು ಇನ್ನಷ್ಟು ಬೆಳೆಸಬೇಕಾಗಿದೆ ಎಂದರು.
ಇವತ್ತು ಜೀವ ಕೊಡುವವರ ಬಗ್ಗೆ ಚಿಂತನೆ ನಡೆಸಿದರೆ ಒಳ್ಳೆಯ ಸಮಾಜವನ್ನು ಸೃಷ್ಟಿ ಮಾಡಲು ಮಾಡಲು ಸಾಧ್ಯ. ನಮ್ಮ ಮಕ್ಕಳಲ್ಲೂ ಧನಾತ್ಮಕ ಚಿಂತನೆಯನ್ನು ಮೂಡಿಸಲು ಸಾಧ್ಯ ಎಂದು ಹೇಳಿದರು.
ಜಿ.ಎಚ್.ಎಂ ಫೌಂಡೇಶನ್ (ರಿ) ಅಧ್ಯಕ್ಷ ಎಂ.ಬಿ ಶಾಫಿ, ಪ್ರಧಾನ ಕಾರ್ಯದರ್ಶಿ ಸಜೀವುದ್ದೀನ್ ಎಂ.ಎಸ್, ಗೌರವ ಸಲಹೆಗಾರರು ಝಕರಿಯ ಫರ್ವೀಝ್, ಸದಸ್ಯ ಎಂ.ಪಿ ನಾಸೀರ್, ಮೃತ ಅಬ್ದ್ದುರ‌್ರಹ್ಮಾನ್ ಸಹೋದರ ಹನೀಫ್ ಕೊಳ್ತಮಜಲು , ಎಸ್‌ಕೆಎಸ್‌ಎಸ್‌ಎಫ್ ಕೊಳತ್ತಮಜಲು ಯುನಿಟ್ ಅಧ್ಯಕ್ಷ ಮಹಮ್ಮದ್ ಶಬೀರ್, ಉಪಾಧ್ಯಕ್ಷ ರಿಯಾಝ್ ಎ.ಕೆ, ಕೊಳತ್ತಮಜಲು ಮುಹಿಯ್ಯದ್ದೀನ್ ಜುಮಾ ಮಸೀದಿಯ ಕಾರ್ಯದರ್ಶಿ ಸಮೀರ್ ಕೆ.ಎಮ್ ಉಪಸ್ಥಿತರಿದ್ದರು.