ಅನೈತಿಕ ಪೊಲೀಸ್ ಗಿರಿ ಎಸಗುವವರಿಗೆ ಕನಿಷ್ಠ 7 ವರ್ಷ ಸಜೆಯ ಕಠಿಣ ಕಾನೂನು ಜಾರಿಯಾಗಲಿ: ಐವನ್ ಆಗ್ರಹ
ಮಂಗಳೂರು, ಜು. 29: ಕರಾವಳಿಯಲ್ಲಿ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚಳದಿಂದ ಪೊಲೀಸ್ ಸಿಬ್ಬಂದಿ ಕುಟುಂಬಕ್ಕೂ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಅನೈತಿಕ ಪೊಲೀಸ್ ಗಿರಿ ಎಸಗುವ ಆರೋಪಿಗಳಿಗೆ ಕನಿಷ್ಠ ಏಳು ವರ್ಷಗಳ ಸಜೆಯೊಂದಿಗೆ ಕಠಿಣ ಕಾನೂನು ರೂಪಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಬಿ.ಸಿ.ರೋಡಿನಲ್ಲಿ ಶನಿವಾರ ನಡೆದ ಘಟನೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿ ಹಾಗೂ ಅವರ ಮನೆಯವರ ಮೇಲೆ ಈ ರೀತಿ ಬೀದಿಯಲ್ಲಿ ಧರ್ಮದ ಹೆಸರು ಕೇಳಿ ಹಲ್ಲೆ ನಡೆಸುತ್ತಾರೆಂದರೆ ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗಾಗಬೇಡ ಎಂದು ಪ್ರಶ್ನಿಸಿದರು.
ಇಂತಹ ಅನೈತಿಕ ಪೊಲೀಸ್ ಗಿರಿಗೆ ಕುಮ್ಮಕ್ಕು ನೀಡುವ ಹಿಂದಿನ ಶಕ್ತಿಯನ್ನು ಪತ್ತೆಹಚ್ಚಬೇಕಾಗಿದೆ ಎಂದ ಅವರು, ಉಡುಪಿ ಪ್ರಕರಣದ ಬಗ್ಗೆ ಬೀದಿಳಿದಿರುವ ಶಾಸಕರು, ಸಂಸದರು ಈ ಪ್ರಕರಣದ ಬಗ್ಗೆ ತಮ್ಮ ನಿಲುವೇನು ಎಂದು ಸ್ಪಷ್ಟಪಡಿಸಬೇಕು. ಬಂಟ್ವಾಳ ಶಾಸಕರು ಯಾಕೆ ಧ್ವನಿ ಎತ್ತಿಲ್ಲ. ಪೊಲೀಸ್ ಸಿಬ್ಬಂದಿಯ ಪತ್ನಿ ಮೇಲೆಯೂ ಹಲ್ಲೆ ನಡೆಸಲಾಗಿದೆ. ಅವರು ಹೆಣ್ಣಲ್ಲವೇ? ಬಿಜೆಪಿಯವರಿಂದ ದ್ವಂದ್ವ ನಿಲುವು ಏಕೆ ಎಂದು ಪ್ರಶ್ನಿಸಿದರು.
ಉಡುಪಿಯ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮಾಡಬೇಕೆನ್ನುವುದು ಸರಿ, ಆದರೆ ಕಾನೂನು ಕೈಗೆತ್ತಿಕೊಂಡು, ರಾಜಕೀಯ ಮಾಡಿ ಸಮಾಜವನ್ನು ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ರಾಜಕೀಯಕ್ಕಾಗಿ ಮಕ್ಕಳ ಭವಿಷ್ಯ ಹಾಳು ಮಾಡಲಾಗುತ್ತಿದೆ. ಇದನ್ನು ಖಂಡಿಸುವುದಾಗಿ ಐವನ್ ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಮಣಿಪುರದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಲೋಕಸಭೆಯಲ್ಲಿ ವಿಪಕ್ಷಗಳು ಮಾತನಾಡದ ಪರಿಸ್ಥಿತಿಯನ್ನು ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ. ಪ್ರಧಾನಿ ಮೋದಿಯವರು ಉಕ್ರೇನ್- ರಶ್ಯ ನಡುವಿನ ಯುದ್ಧವನ್ನು ತಡೆಯುವ ಶಕ್ತಿ ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ನಮ್ಮದೇ ದೇಶದಲ್ಲಿ ನಡೆಯುತ್ತಿರುವ ಹತ್ಯೆ, ಅತ್ಯಾಚಾರ, ಗಲಭೆ ಬಗ್ಗೆ ನಿರ್ಲಕ್ಷ್ಯ ಯಾಕೆ ಎಂದು ಪ್ರಶ್ನಿಸಿದರು.
ಮಣಿಪುರದಂತಹ ಸುಮಾರು 35 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸಣ್ಣ ರಾಜ್ಯದಲ್ಲಿನ ಗಲಭೆಯನ್ನು ಹತೋಟಿಗೆ ತರಲು ಅಲ್ಲಿನ ರಾಜ್ಯ ಅಥವಾ ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದರು.
ಪ್ರಧಾನಿ ತಮ್ಮ ಹುದ್ದೆಗೆ ತಕ್ಕ ರೀತಿಯಲ್ಲಿ ವರ್ತಿಸುತ್ತಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಡುತ್ತಿದೆ ಎಂದು ಹೇಳಿದ ಅವರು, ಪೊಲೀಸರು ತಮ್ಮ ಕಾರ್ಯಾಚರಣೆಯಲ್ಲಿ ವಿಫಲರಾದ ಹಿನ್ನೆಲೆಯಲ್ಲಿಯೇ ದ.ಕ. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್ಗಿರಿ ಹೆಚ್ಚಲು ಕಾರಣವಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನವೀನ್ ಡಿಸೋಜ, ಅಶ್ರಫ್, ಶುಭೋದಯ ಆಳ್ವ, ಟಿ.ಕೆ. ಸುಧೀರ್, ವಿಕಾಸ್ ಶೆಟ್ಟಿ, ಮುಹಮ್ಮದ್, ಪದ್ಮನಾಭ, ಸತೀಶ್ ಪೆಂಗಲ್, ಮನುರಾಜ್ ಮೊದಲಾದವರು ಉಪಸ್ಥಿತರಿದ್ದರು.
ಜು.31ರಂದು ಲಾಲ್ ಬಾಗ್ ನಲ್ಲಿ ಪ್ರತಿಭಟನೆ
ಮಣಿಪುರದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿ ಕೇಂದ್ರದ ಅಸಹಕಾರ ಧೋರಣೆ, ಪ್ರಧಾನಿ ಮೌನ, ಕಳೆದ ಸುಮಾರು 3 ತಿಂಗಳಿನಿಂದ ನಡೆಯುತ್ತಿರುವ ನರಮೇಧವನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರಕಾರದ ವೈಫಲ್ಯ ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಜುಲೈ 31ರಂದು ಲಾಲ್ ಬಾಗ್ ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಯಲಿದೆ. ಪಕ್ಷದ ಹಿರಿಯ ನಾಯಕರು, ಶಾಸಕರು, ಕಳೆದ ಚುನಾವಣೆಯ ಶಾಸಕ ಅಭ್ಯರ್ಥಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.
ಆ.1ರಂದು ಮುಖ್ಯಮಂತ್ರಿ ಮಂಗಳೂರು- ಉಡುಪಿ ಭೇಟಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಸ್ಟ್ 1ರಂದು ಕರಾವಳಿ ಜಿಲ್ಲೆಗಳಾದ ದ.ಕ. ಹಾಗೂ ಉಡುಪಿಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10:20ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅವರು ಉಭಯ ಜಿಲ್ಲೆಗಳಲ್ಲಿ ಅಧಿಕಾರಿಗಳ ಜತೆ ಮಳೆ ಹಾನಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ಹರೀಶ್ ಕುಮಾರ್ ತಿಳಿಸಿದರು.