×
Ad

ರಾಜ್ಯಪಾಲರಿಗೆ ಅಗೌರವ ಆರೋಪ: ಬಿ.ಕೆ ಹರಿಪ್ರಸಾದ್‌, ಎಸ್. ರವಿ ಅಮಾನತಿಗೆ ಬಿಜೆಪಿ ಆಗ್ರಹ

Update: 2026-01-24 17:18 IST

ಮಂಗಳೂರು : ಜಂಟಿ ಅಧಿವೇಶನನ್ನು ಉದ್ದೇಶಿಸಿ ರಾಜ್ಯಪಾಲರು ಆರಂಭ ಹಾಗೂ ಕೊನೆಯ ಸಾಲು ಓದಿದರೆ ಇಡೀ ಭಾಷಣವನ್ನೇ ಓದಿದಂತೆ. ಇದು ಸಂವಿಧಾನಾತ್ಮಕವಾಗಿ ಸರಿಯಾಗಿಯೇ ಇದೆ. ಆದರೆ ಸಾಂವಿಧಾನಿಕ ಹುದ್ದೆಯ ರಾಜ್ಯಪಾಲರಿಗೆ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ಎಸ್. ರವಿ ಅಗೌರವ ತೋರಿದ್ದು, ಅವರ ವಿರುದ್ಧ ಸ್ಪೀಕರ್ ಅಮಾನತಿನ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಆಗ್ರಹಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಸದನಕ್ಕೆ ಆಗಮಿಸಿ ತೆರಳುವವರೆಗೆ ಅವರಿಗೆ ಸಾಂವಿಧಾನಿಕ ಗೌರವ ನೀಡಬೇಕಾದ್ದು ಶಾಸಕರ ಆದ್ಯ ಕರ್ತವ್ಯ. ಅದರ ಬದಲು ಹಿರಿಯ ಅನುಭವಿ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಮತ್ತು ರವಿ ಅವರು ರಾಜ್ಯಪಾಲರನ್ನೇ ತಡೆಯಲು ಮುಂದಾಗಿ ಹೈಡ್ರಾಮಾ ಸೃಷ್ಟಿಸಿರುವುದು ಸರಿಯಲ್ಲ. ಅವರಾಗಿಯೇ ಅವರ ಅಂಗಿ ಹರಿದುಕೊಂಡು ಬಳಿಕ ವಿಪಕ್ಷ ಸದಸ್ಯರ ಮೇಲೆ ಆರೋಪಿಸಿದ್ದಾರೆ. ಈ ಬಗ್ಗೆಯೂ ಸ್ಪೀಕರ್ ತನಿಖೆ ನಡೆಸಬೇಕಾಗಿದೆ ಎಂದು ಆಗ್ರಹಿಸಿದರು.

ಬಿ.ಕೆ.ಹರಿಪ್ರಸಾದ್ ಮತ್ತು ರವಿ ಅವರ ವರ್ತನೆ ವಿರುದ್ಧ ಸ್ಪೀಕರ್‌ಗೆ ವಿಪಕ್ಷ ಬಿಜೆಪಿ ದೂರು ನೀಡಿದೆ. ಈ ಹಿನ್ನೆಲೆಯಲ್ಲಿ ಸದನದ ನೀತಿ ನಿರೂಪಣೆ ಸಮಿತಿಗೆ ದೂರನ್ನು ಸ್ಪೀಕರ್ ವರ್ಗಾಯಿಸಿದ್ದಾರೆ. ಈಗ ಆಡಳಿತ ಪಕ್ಷದ ಸಚೇತಕರು ಈ ಬಗ್ಗೆ ಮರು ಪರಿಶೀಲಿಸುವಂತೆ ಸ್ಪೀಕರ್ ಅವರನ್ನು ಕೋರಿದ್ದು, ಮಂಗಳವಾರ ತೀರ್ಮಾನವನ್ನು ತಿಳಿಸುವುದಾಗಿ ಸ್ಪೀಕರ್ ಹೇಳಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನೀತಿ ನಿರೂಪಣೆ

ಸಮಿತಿಗೆ ನೀಡಿರುವುದನ್ನು ಮರು ಪರಿಶೀಲಿಸಿ ವಾಪಸ್ ಪಡೆಯಲು ಸ್ಪೀಕರ್ ಮುಂದಾಗಬಾರದು. ಸಚೇತಕರ ಕೋರಿಕೆಯನ್ನು ಸರಾಸಗಟ ತಿರಸ್ಕರಿಸಬೇಕು. ಮಾತ್ರವಲ್ಲ ಹರಿಪ್ರಸಾದ್‌ರ ಅಂಗಿ ಹರಿದ ಬಗ್ಗೆ ತನಿಖೆ ನಡೆಸಬೇಕು ಎಂದು ಪ್ರತಾಪ್‌ಸಿಂಹ ನಾಯಕ್ ಒತ್ತಾಯಿಸಿದರು.

ಪ್ರಸಕ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಅಧಿಕಾರ ಹಸ್ತಾಂತರ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ ಸರ್ಕಾರದ ಆಡಳಿತ ವೈಫಲ್ಯದ ಬಗ್ಗೆಯೂ ಆರೋಪಗಳು ಕೇಳಿಬರುತ್ತಿವೆ. ಹೀಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ ರಾಮ್ ಜೀ ಮಸೂದೆ ವಿಚಾರವನ್ನು ವಿವಾದಕ್ಕೆ ಬಳಸಿ ಜನತೆಯ ಗಮನ ಬೇರೆ ಕಡೆಗೆ ಸೆಳೆಯುವ ಉದ್ದೇಶವನ್ನು ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಹೊಂದಿದೆ. ಈ ವಿಶೇಷ ಅಧಿವೇಶನದಲ್ಲಿ ಆಡಳಿತ ಶಾಸಕರು ಮಾತ್ರವಲ್ಲ ಸಚಿವರು ಕೂಡ ವಿಪಕ್ಷಗಳಿಗೆ ಮಾತನಾಡಲು ಸದನದಲ್ಲಿ ಅವಕಾಶ ನೀಡುತ್ತಿಲ್ಲ. ಇದೇ ರೀತಿ ಗದ್ದಲದಲ್ಲೇ ಅಧಿವೇಶನವನ್ನು ಮುಕ್ತಾಯಗೊಳಿಸುವ ಇರಾದೆಯನ್ನು ಆಡಳಿತ ಕಾಂಗ್ರೆಸ್ ಹೊಂದಿದಂತಿದೆ ಎಂದು ಪ್ರತಾಪ್‌ಸಿಂಹ ನಾಯಕ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮುಖಂಡರಾದ ರಾಜಗೋಪಾಲ ರೈ, ಸುಜಿತ್ ಪ್ರತಾಪ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಶೋಭೇಂದ್ರ ಸಸಿಹಿತ್ಲು, ವಸಂತ ಪೂಜಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News