×
Ad

ಸಂಚಾರ ಉಲ್ಲಂಘನೆ ಪತ್ತೆಗೆ ಆಧುನಿಕ ತಂತ್ರಜ್ಞಾನದ ಕ್ಯಾಮರಾ ಅಳವಡಿಕೆ: ಡಿಸಿಪಿ ದಿನೇಶ ಕುಮಾರ್

Update: 2023-08-19 20:00 IST

ಮಂಗಳೂರು, ಆ.19: ನಗರದಲ್ಲಿ ವಾಹನ ಸಂಚಾರವನ್ನು ಮತ್ತಷ್ಟು ವ್ಯವಸ್ಥಿತಗೊಳಿಸುವ ಸಲುವಾಗಿ ಇನ್ನೂ ಕೆಲವು ಕಡೆ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಅಲ್ಲದೆ ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮರಾಗಳನ್ನು ಅಳವಡಿಸಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಬಿ.ಪಿ. ಹೇಳಿದ್ದಾರೆ.

ಮಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ನಗರದ ಟಿಎಂಎ ಪೈ ಕನ್‌ವೆನ್ಷನ್ ಸಭಾಂಗಣದಲ್ಲಿ ಶನಿವಾರ ನಡೆದ ‘ಸಂಚಾರ ಸಂಪರ್ಕ ದಿವಸ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.

ನಗರದ ಕ್ಲಾಕ್‌ಟವರ್-ಆರ್‌ಟಿಒ-ಹ್ಯಾಮಿಲ್ಟನ್ (ಸ್ಟೇಟ್‌ಬ್ಯಾಂಕ್) ಸರ್ಕಲ್‌ವರೆಗೆ ಈಗ ಇರುವ ಏಕಮುಖ ಸಂಚಾರವನ್ನು ದ್ವಿಮುಖ ಸಂಚಾರವಾಗಿಸಲು ಬೇಡಿಕೆ ಇರುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಎ.ಬಿ.ಶೆಟ್ಟಿ ವೃತ್ತ ಇದ್ದ ಸ್ಥಳದಲ್ಲಿ ವೃತ್ತ ಮತ್ತೆ ರಚಿಸುವಂತೆ ಹಲವರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್ ಈಗ ಸಂಚಾರ ಸುಗಮವಾಗಿರುವ ಬಗ್ಗೆ ಅಭಿಪ್ರಾಯಗಳಿವೆ. ಆದರೆ ಕೆಲವು ಸಮಸ್ಯೆಗಳ ಬಗ್ಗೆಯೂ ದೂರುಗಳು ಬಂದಿವೆ. ಇದರ ಬಗ್ಗೆ ಎರಡನೇ ಸುತ್ತಿನ ಸಭೆ ಶೀಘ್ರದಲ್ಲೇ ನಡೆಯಲಿದೆ. ಆ ಬಳಿಕ ಏಕಮುಖ ಸಂಚಾರ ಬದಲಾವಣೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

ಆಟೋರಿಕ್ಷಾ ಚಾಲಕರ ಸಂಘದ ಅರುಣ್ ಕುಮಾರ್ ಮಾತನಾಡಿ ಇತ್ತೀಚೆಗೆ ನನ್ನ ರಿಕ್ಷಾಕ್ಕೆ ಬೈಕ್ ಢಿಕ್ಕಿಯಾಗಿತ್ತು. ಅದರ ನಂಬರ್ ಪತ್ತೆಗಾಗಿ ಸ್ಮಾರ್ಟ್ ಸಿಟಿಯ ಕಮಾಂಡ್ ಸೆಂಟರ್‌ನಲ್ಲಿ ಸಿಸಿ ಕ್ಯಾಮರಾ ದೃಶ್ಯ ಪರಿಶೀಲಿಸಿದಾಗ ಅದರಲ್ಲಿ ವಾಹನದ ನಂಬರ್ ಪ್ಲೇಟ್ ದೃಶ್ಯ ದಾಖಲಾಗಿರಲಿಲ್ಲ. ಹಾಗಾಗಿ ಸಿಸಿ ಕ್ಯಾಮರಾಗಳ ಗುಣಮಟ್ಟ ಹೆಚ್ಚಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್ ‘ಸ್ಮಾರ್ಟ್‌ಸಿಟಿ ಯೋಜನೆಯಡಿ ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ವನ್ನೊಳಗೊಂಡ ಸ್ವಯಂ ಚಾಲಿತವಾಗಿ ವಾಹನಗಳ ನಂಬರ್‌ಪ್ಲೇಟ್ ಸ್ಪಷ್ಟವಾಗಿ ಗುರುತಿಸುವ, ಸೀಟ್ ಬೆಲ್ಟ್, ಹೆಲ್ಮೆಟ್ ಧರಿಸದಿರುವುದು ಮೊದಲಾದ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚುವ ಕ್ಯಾಮರಾಗಳ ಅಳವಡಿಕೆಯಾಗಲಿದೆ. ನಗರದ 75 ಕಡೆ ಮತ್ತೆ ಸಿಸಿ ಕ್ಯಾಮರಾ ಅಳವಡಿಕೆಯಾಗಲಿದೆ ಎಂದರು.

ಖಾಸಗಿ ಬಸ್‌ಗಳಲ್ಲಿ ಕರ್ಕಶ ಹಾರ್ನ್ ಬಳಕೆ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದೆ. ಇಂತಹ ಹಾರ್ನ್ ಬಳಕೆ ಮಾಡುವ ಚಾಲಕರ ಲೈಸನ್ಸ್ ಅಮಾನತಿಗೆ ಆರ್‌ಟಿಒಗೆ ಪ್ರಸ್ತಾವನೆ ಸಲ್ಲಿಸಲು ಮತ್ತು ಬಸ್ಸನ್ನು ಒಂದು ದಿನದ ಮಟ್ಟಿಗೆ ಸಾರಿಗೆ ಇಲಾಖೆಯ ಸುಪರ್ದಿಗೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಡಿಸಿಪಿ ದಿನೇಶ್ ಕುಮಾರ್ ಮಾಹಿತಿ ನೀಡಿದರು.

ನಗರದೆಲ್ಲೆಡೆ ಹೊಂಡ ಗುಂಡಿಗಳಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಹಾಗಾಗಿ ಪಾಲಿಕೆಯು ಗುಂಡಿ ಮುಚ್ಚುವ ಕಾಮಗಾರಿ ನಡೆಸಬೇಕು ಎಂದು ರಸ್ತೆ ಸುರಕ್ಷಾ ಸಮಿತಿಯ ಸದಸ್ಯ ಜಿ.ಕೆ.ಭಟ್ ಒತ್ತಾಯಿಸಿದರು.

ಕೆಲವು ಬಸ್‌ಗಳು ರೂಟ್ ತಪ್ಪಿಸಿ ಸಂಚರಿಸುತ್ತಿರುವ ಕುರಿತು ಸಾರ್ವಜನಿಕರು ದೂರಿದಾಗ ಬಸ್‌ಗಳಿಗೆ ಜಿಪಿಎಸ್ ಅಳವಡಿಸಿ ಅದನ್ನು ಸ್ಮಾರ್ಟ್‌ಸಿಟಿ ಕಮಾಂಡ್ ಸೆಂಟರ್‌ಗೆ ಟ್ಯಾಗ್ ಮಾಡಲಾಗಿತ್ತು. ಆದರೆ ಕೆಲವು ಚಾಲಕರು ಜಿಪಿಎಸ್‌ನ ಸಂಪರ್ಕ ತೆಗೆಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ಬಸ್ ಮಾಲಕರು ತಿಳಿಸಿದರು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳು ವಂತೆ ಅಧಿಕಾರಿಗಳು ಬಸ್ ಮಾಲಕರಿಗೆ ಸೂಚಿಸಿದರು.

ಪಾದಚಾರಿಗಳು ‘ಝೀಬ್ರಾ ಕ್ರಾಸ್’ಗಳನ್ನು ಹೊರತುಪಡಿಸಿ ಇತರೆ ಸ್ಥಳಗಳಲ್ಲಿ ರಸ್ತೆ ದಾಟಿದರೆ ಅವರ ಮೇಲೆ ದಂಡ ವಿಧಿ ಸುವ ನಿಯಮ ಬೆಂಗಳೂರು ಮತ್ತು ಇತರ ಕೆಲವು ನಗರಗಳಲ್ಲಿದ್ದು ಅದೇ ರೀತಿ ಮಂಗಳೂರಿನಲ್ಲಿಯೂ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಎಸಿಪಿ ಗೀತಾ ಕುಲಕರ್ಣಿ, ಎಆರ್‌ಟಿಒ ವಿಶ್ವನಾಥ ನಾಯ್ಕ್, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಕಾಂತ್, ಪಾಲಿಕೆಯ ಕಾರ್ಯನಿರ್ವಾಹಕ ಇಂಜಿನಿಯರ್ ನರೇಶ್ ಶೆಣೈ ಉಪಸ್ಥಿ ತರಿದ್ದರು. ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್, ಎ.ಕೃಷ್ಣನ್, ದಿಲ್‌ರಾಜ್ ಆಳ್ವ, ಗೂಡ್ಸ್ ಟೆಂಪೋ ಚಾಲಕರ ಮಾಲಕರ ಸಂಘದ ಅಧ್ಯಕ್ಷ ಸಿರಾಜ್ ಮತ್ತಿತರರು ಸಂಚಾರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News