ಬೀದಿ ಬದಿ ಫಾಸ್ಟ್‌ಫುಡ್ ಬಗ್ಗೆ ನಿಗಾ ವಹಿಸಲು ಸಲಹೆ; ವೆಂಡಿಂಗ್ ರೆನ್ ಬಳಿಕ ಸೂಕ್ತ ಕ್ರಮ: ಮೇಯರ್
ಮಂಗಳೂರು, ಜ. 29: ನಗರದ ವಿವಿಧ ಕಡೆ ಅಲ್ಲಲ್ಲಿ ಬೀದಿ ಬದಿ ವ್ಯಾಪಾರ, ಸಂಜೆ ಹೊತ್ತು ಫಾಸ್ಟ್‌ಫುಡ್‌ಗಳ ಕಾರ್ಯಾಚರಣೆ ಹೆಚ್ಚಳವಾಗುತ್ತಿದೆ. ಇಂತಹ ಆಹಾರ ಪೂರೈಕೆಯ ವ್ಯವಸ್ಥೆಯಲ್ಲಿ ಸೂಕ್ತ ನೀರಿನ ವ್ಯವಸ್ಥೆ, ಸ್ವಚ್ಛತೆಯನ್ನು ಕಾಪಾಡದ ಕಾರಣ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಈಬಗ್ಗೆ ನಿಗಾ ವಹಿಸಬೇಕು ಎಂದು ನಾಗರಿಕರನೇಕರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರನ್ನು ಒತ್ತಾಯಿಸಿದ್ದಾರೆ.
ಸೋಮವಾರ ಮೇಯರ್ ಸಭಾಂಗಣದಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಹಲವು ನಾಗರಿಕರು ನಗರದ ವಿವಿಧ ಕಡೆಗಳಲ್ಲಿನ ಸಮಸ್ಯೆ ಬಗ್ಗೆ ಗಮನ ಸೆಳೆದರು.
ಕಂಕನಾಡಿಯ ಜೋಸೆಫ್ ಎಂವಬರು ಮಾತನಾಡಿ, ನಮ್ಮ ಪ್ರದೇಶದಲ್ಲಿ ಹಲವಾರು ಆಸ್ಪತ್ರೆಗಳಿವೆ. ಸಂಜೆ ಹೊತ್ತು ಫುಟ್ಪಾತ್‌ಗಳಲ್ಲಿ ಫಾಸ್ಟ್‌ಫುಡ್‌ಗಳು ಮಾರಾಟವಾಗುತ್ತವೆ. ಅಲ್ಲಿ ನೀರಿನ ವ್ಯವಸ್ಥೆ ಸಮಪರ್ಕವಾಗಿರುವುದಿಲ್ಲ. ಆಹಾರ ಸ್ವಚ್ಛತೆಯನ್ನೂ ಯಾರೂ ನೋಡುವುದಿಲ್ಲ. ಇದರಿಂದ ವಿವಿಧ ರೀತಿಯ ರೋಗಗಳಿಗೆ ಕಾರಣವಾಗುತ್ತಿದೆ ಎಂದರು.
ರಾಜಾರಾಂ ಅವರು ಕರೆ ಮಾಡಿ, ಕಾವೂರು ರಸ್ತೆ ಬದಿ ಗಾಡಿ ನಿಲ್ಲಿಸಲು ಜಾಗ ಇಲ್ಲ. ಗೂಡಂಗಡಿ, ಫಾಸ್ಟ್‌ಫುಡ್‌ಗಳು ಸಾಲು ಸಾಲಾಗಿದ್ದು, ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಪ್ರತಿಕ್ರಿಯಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಭೆ ನಡೆಸಲಾಗಿದೆ. ಪ್ರತಿ ವಾರ್ಡ್‌ನಲ್ಲಿ ಎಷ್ಟು ಮಂದಿ ಬೀದಿ ಬದಿ ವ್ಯಾಪಾರಿಗಳು ಇದ್ದಾರೆ ಎಂಬ ಬಗ್ಗೆ ಮಾಹಿತಿ ಕೇಳಲಾಗಿದೆ. ಪ್ರತಿ ವಾರ್ಡ್‌ನಲ್ಲಿಯೂ ಮುಂದೆ ಸೂಕ್ತ ವ್ಯಾಪಾರ ವಲಯ (ವೆಂಡಿಂಗ್ ರೆನ್) ಗುರುತಿಸಿ, ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಬಳಿಕ ನಿರ್ದಿಷ್ಟ ವ್ಯಾಪಾರ ವಲಯದಲ್ಲಿ ವ್ಯಾಪಾರ ಮಾಡದೆ ಇತರ ಪ್ರದೇಶಗಳಲ್ಲಿ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಿಗಳ ವಿರುದ್ಧ ಟೈಗರ್ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಮುಕ್ಕದಲ್ಲಿ ಫಿಶ್‌ಮಿಲ್‌ನಿಂದ ತೊಂದರೆ
ಆರ್.ಬಿ. ಶೆಟ್ಟಿ ಎಂಬವರು ಕರೆ ಮಾಡಿ, ಮುಕ್ಕ ಪ್ರದೇಶದಲ್ಲಿ ಫಿಸ್‌ಮಿಲ್‌ನಿಂದ ಕೊಳಚೆ ನೀರು ಸಮುದ್ರ ಸೇರುತ್ತಿದ್ದು, ಕೆಟ್ಟ ವಾಸನೆಯಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಮೇಯರ್‌ಗೆ ಪತ್ರವನ್ನೂ ಬರೆದಿರುವುದಾಗಿ ಹೇಳಿದರು.
ಅಧಿಕಾರಗಳನು ಕಳುಹಿಸಿ ಪರಿಶೀಲನೆ ನಡೆಸುವುದಾಗಿ ಮೇಯರ್ ಭರವಸೆ ನೀಡಿದರು.
5 ತಿಂಗಳಿನಿಂದ ನೀರಿನ ಬಿಲ್ ಬಂದಿಲ್ಲ
ವಿನ್ಸೆಂಟ್ ಎಂಬವರು ಕರೆ ಮಾಡಿ ತಮಗೆ ಐದ ತಿಂಗಳಿನಿಂದ ನೀರಿನ ಬಿಲ್ ಬಂದಿಲ್ಲ ಎಂದು ದೂರು ಹೇಳಿಕೊಂಡರು.
ಸುರತ್ಕಲ್ ಕಾನದ ಆಶ್ರಯ ಕಾಲನಿಯ 200 ಮೀಟರ್ ರಸ್ತೆ ಡಾಮರೀಕರಣವಾಗಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ ಎಂದು ಅಹ್ಮದ್ ಬಾವ ದೂರಿದರು.
ಮನೆ ಬಳಿಯ ತಡೆಗೋಡೆ ಕುಸಿದು ಬಿದ್ದಿದ್ದರೂ ಅದನ್ನು ಸರಿಪಡಿಸುವ ಕಾರ್ಯ ಆಗಿಲ್ಲ. ಈ ಹಿಂದೆ ದೂರು ನೀಡಿದ್ದರೂ ಪರಿಹಾರ ಆಗಿಲ್ಲ ಎಂದು ಸೋಫಿಯಾ ಎಂಬವರು ಹೇಳಿದಾಗ, ಅದು ಖಾಸಗಿ ಜಾಗ ಆಗಿರುವ ಕಾರಣ ಪಾಲಿಕೆ ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಮೇಯರ್ ಹೇಳಿದರು.
ಕೊಟ್ಟಾರ ಚೌಕಿ ಬಳಿ ಶೌಚಾಲಯ ವ್ಯವಸ್ಥೆ, ದಾರಿದೀಪ ವ್ಯವಸ್ಥೆ ಮಾಡುವಂತೆ ನಝೀರ್ ಎಂಬವರು ಆಗ್ರಹಿಸಿದರೆ, ಜಪ್ಪು ಮಹಾಕಾಳಿ ಪಡ್ಬು ಬಳಿ ರಸ್ತೆ ಡಾಮರೀಕರಣಕ್ಕಾಗಿ ಜಲ್ಲಿ ಹಾಕಿ ಒಂದೂವರೆ ತಿಂಗಳಾದರೂ ಕಾಮಗಾರಿ ಆಗಿಲ್ಲ ಎಂದು ಬಶೀರ್ ಎಂಬವರು ದೂರಿದರು.
ಹೊಯ್ಗೆ ಬಜಾರ್ ಬಳಿ ಸಿಸಿ ಕ್ಯಾಮರಾ ಅಳವಡಿಸಬೇಕೆಂಬ ಒತ್ತಾಯ ನಾಗರಿಕರೊಬ್ಬದಾಗಿದ್ದರೆ, ಪದವಿನಂಗಡಿಯಲ್ಲಿ ಎರಡು ತಾಸು ಮಾತ್ರ ನೀರು ಬರುವುದಾಗಿ ಇನ್ನೋರ್ವರು ದೂರಿದರು.
ಕಳೆದ ಫೋನ್ ಇನ್ ಕಾರ್ಯಕ್ರಮದಲ್ಲಿ 27 ದೂರುಗಳು ಬಂದಿದ್ದು, 22 ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ. ಐದು ದೂರುಗಳಿಗೆ ಸಂಬಂಧಿಸಿ ಇಂಜಿನಿಯರಿಂಗ್ ವಿಭಾಗದಿಂದ ಮಾಹಿತಿ ದೊರಕಿಲ್ಲ. ಈ ದೂರುಗಳಿಗೆ ಸ್ಪಂದಿಸಿ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು. ಒಂದು ಗಂಟೆಯಲ್ಲಿ ಇಂದು ಕೂಡಾ 28 ಸಾರ್ವಜನಿಕರಿಂದ ದೂರು ಕರೆಗಳನ್ನು ಮೇಯರ್ ಸ್ವೀಕರಿಸಿದರು.
ಉಪ ಮೇಯರ್ ಸುನೀತಾ, ಹಿರಿಯ ಅಧಿಕಾರಿ ಮಹೇಶ್ ಉಪಸ್ಥಿತರಿದ್ದರು.
ಬಗೆಹರಿಯದ ಕಾವೂರು ಕೆರೆ ಸಮಸ್ಯೆ
ದೇವರ ಜಳಕದ ಕೆರೆಯಾಗಿರುವ ಕಾವೂರು ಕೆರೆ ಅಭಿವೃದ್ಧಿಯಾಗಿದ್ದರೂ ಕೊಳಚೆ ನೀರು ಸೇರುವುದು ಮುಂದುವರಿದಿದೆ. ನೀರಿನ ಬಣ್ಣ ಬದಲಾಗಿದ್ದು, ಅಲ್ಲಿನ ಬೋರ್‌ವೆಲ್‌ನಿಂದ ಬರುವ ನೀರು ಕೆಟ್ಟ ವಾಸನೆಯಿಂದ ಕೂಡಿದೆ. ಅಲ್ಲಿ ಹಂದಿ ಸಾಕಾಣಿಕೆ ಮಾಡುವವರ ಮನೆಯಿಂದ ಕೊಳಚೆ ನೀರು ಕೆರೆ ನೀರನ್ನು ಸೇರುತ್ತಿದೆ ಎಂದು ಹರೀಶ್ ಹಾಗೂ ಬಿ.ಆರ್. ಡಿಸೋಜಾ ದೂರಿದರು.
ಈ ಬಗ್ಗೆ ಸೂಕ್ತ ಕ್ರಮ ವಹಿಸುವುದಾಗಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಭರವಸೆ ನೀಡಿದರು.