ಮಂಗಳೂರು: 28 ವರ್ಷಗಳ ಬಳಿಕ ಕುಟುಂಬದ ಜೊತೆಗೂಡಿದ ಮಹಿಳೆ
ಚೈತಾಲಿ ಯಾನೆ ಕಾಂಚನ್ಮಾಲ ಲಾಯ್
ಮಂಗಳೂರು: ಮಹಿಳೆಯೊಬ್ಬರು ಸುಮಾರು 28 ವರ್ಷಗಳ ಬಳಿಕ ಕುಟುಂಬದ ಜೊತೆಗೂಡಿದ ಅಪರೂಪದ ಘಟನೆಗೆ ಸ್ನೇಹಾಲಯ ಮತ್ತು ಶ್ರದ್ಧಾ ಫೌಂಡೇಶನ್ ತಂಡ ಸಾಕ್ಷಿಯಾಯಿತು. ಪತಿ, ಮಕ್ಕಳ, ಸಹೋದರರು 28 ವರ್ಷದ ಹಿಂದೆ ಕಾಣೆಯಾಗಿದ್ದ ಚೈತಾಲಿ ಯಾನೆ ಕಾಂಚನ್ಮಾಲ ಲಾಯ್ ಅವರನ್ನು ಬರಮಾಡಿಕೊಂಡರು.
ಅಂದಹಾಗೆ ಚೈತಾಲಿಯ ಇಬ್ಬರು ಪುತ್ರರಲ್ಲಿ ಒಬ್ಬರು ಅಮೃತಸರದಲ್ಲಿ ಸೇನೆಯ ಅಧಿಕಾರಿಯಾಗಿದ್ದರೆ, ಮತ್ತೊಬ್ಬರು ಸಿಲ್ಚರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಹೆತ್ತ ತಾಯಿ ಎಂದಿಗೂ ಮರಳಿ ಬರುವುದಿಲ್ಲ ಎಂಬ ನಿರಾಶೆಯಲ್ಲಿದ್ದ ಈ ಇಬ್ಬರೂ ಕೂಡ ಅನಿರೀಕ್ಷಿತವಾಗಿ ತಾಯಿಯನ್ನು ಸಜೀವವಾಗಿ, ಸ್ವಸ್ಥ ಸ್ಥಿತಿಯಲ್ಲಿ ನೋಡಿ ಭಾವುಕರಾದರು.
2023ರ ಸೆ.13ರಂದು ಸ್ನೇಹಾಲಯದ ತಂಡವು ಚೈತಾಲಿ ಅವರನ್ನು ರಕ್ಷಿಸಿ ಅವರ ಗುರುತು ಪತ್ತೆಹಚ್ಚಲು ಸಾಕಷ್ಟು ಪ್ರಯತ್ನ ನಡೆಸಿತು. ಅಂತಿಮವಾಗಿ 2024ರ ನ.25ರಂದು ಚೈತಾಲಿ ಅವರನ್ನು ಶ್ರದ್ಧಾ ಫೌಂಡೇಶನ್‌ಗೆ ವರ್ಗಾಯಿಸಲಾಯಿತು. ಆದರೂ ವೈಯಕ್ತಿಕ ಮಾಹಿತಿ ಸಿಗದ ಕಾರಣ ಕುಟುಂಬವನ್ನು ಪತ್ತೆ ಮಾಡಲು ಸಾಮಾಜಿಕ ಮಾಧ್ಯಮಗಳ ಸಹಿತ ನಾನಾ ರೀತಿಯ ಪ್ರಯತ್ನಗಳನ್ನು ಮುಂದುವರಿಸಲಾಯಿತು. ಈ ಮಧ್ಯೆ ಮಹಿಳೆಯೊಬ್ಬರು ಚೈತಾಲಿಯ ಕುಟುಂಬ ಸದಸ್ಯರನ್ನು ಗುರುತಿಸಿದರು. ಅಪರೂಪದ ಈ ಪುನರ್ಮಿಲನಕ್ಕೆ ಸ್ನೇಹಾಲಯ ಮತ್ತು ಶ್ರದ್ದಾ ಫೌಂಡೇಶನ್‌ಗಳ ಅವಿರತ ನವರತ ಶ್ರಮದಿಂದ ಸಾಧ್ಯವಾಯಿತು.
ಸ್ನೇಹಾಲಯವು ದೇಶಾದ್ಯಂತ 1,490ಕ್ಕೂ ಅಧಿಕ ನಾಪತ್ತೆಯಾದವರನ್ನು ತಮ್ಮ ಕುಟುಂಬದ ಬಳಿಗೆ ಸೇರಿಸುವ ಮಹತ್ಕಾರ್ಯವನ್ನು ಮಾಡಿದೆ. ಜಾತಿ, ಭಾಷೆ, ಧರ್ಮದ ಬೇಧವಿಲ್ಲದೆ ನಾನಾ ಕುಟುಂಬಗಳನ್ನು ಪುನಃ ಒಂದಾಗಿ ಸೇರಿಸುವ ಈ ಸಂಸ್ಥೆಯ ಸೇವೆಯ ಬಗ್ಗೆ ವ್ಯಾಪಕ ಪ್ರಶಂಶೆ ವ್ಯಕ್ತವಾಗುತ್ತಿವೆ.