×
Ad

ಶವಾಗಾರದಲ್ಲಿ ಮೃತದೇಹದ ನಿರ್ಲಕ್ಷ್ಯ ಆರೋಪ: ಮೃತರ ಉತ್ತರಾಧಿಕಾರಿಗೆ ಪರಿಹಾರ ನೀಡಲು ಆದೇಶ

Update: 2023-11-22 20:10 IST

ಮಂಗಳೂರು : ಗ್ರಾಹಕರ ಹಕ್ಕುಗಳ ಸಂರಕ್ಷಕನಾಗಿ ಕಾರ್ಯ ನಿರ್ವಹಿಸುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ (ಗ್ರಾಹಕ ನ್ಯಾಯಾಲಯ)ವು ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ನಿರ್ಲಕ್ಷ್ಯಕ್ಕೆ ಸಂಬಂಧಿಸಿ 5 ಲಕ್ಷ ರೂ. ಮೃತರ ಸಂಬಂಧಿಕರಿಗೆ ನೀಡುವಂತೆ ತೀರ್ಪು ನೀಡಿರುವ ಪ್ರಕರಣ ನಡೆದಿದೆ.

ದೇರಳಕಟ್ಟೆಯ ಪ್ರತಿಷ್ಠಿತ ಆಸ್ಪತ್ರೆಯೊಂದಕ್ಕೆ ದ.ಕ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ನವೆಂಬರ್ 8ರಂದು ನೀಡಿರುವ ತೀರ್ಪಿನಲ್ಲಿ, ಪ್ರಕರಣಕ್ಕೆ ಸಂಬಂಧಿಸಿ ದೂರು ಸಲ್ಲಿಸಿರುವ ಮೃತರ ಸಂಬಂದಿಕರಿಗೆ 5 ಲಕ್ಷ ರೂ. ಪರಿಹಾರವನ್ನು ಒಂದು ತಿಂಗಳಲ್ಲಿ ಪಾವತಿಸದಿದ್ದರೆ, ಬಳಿಕ ಈ ಮೊತ್ತಕ್ಕೆ ಶೇ. 8ರ ಬಡ್ಡಿ ಸೇರಿಸಿ ನೀಡುವಂತೆ ಆದೇಶಿಸಿದೆ.

ಏನಿದು ಘಟನೆ

2019ರ ಅಕ್ಟೋಬರ್ 25ರಂದು ಮೃತಪಟ್ಟಿದ್ದ ವಿಲ್ಸನ್ ಅಲನ್ ಫೆರ್ನಾಂಡಿಸ್ ಅವರ ಮೃತದೇಹವನ್ನು ದೇರಳಕಟ್ಟೆಯ ಪ್ರತಿಷ್ಠಿತ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಈ ಸೇವೆಗಾಗಿ ಆಸ್ಪತ್ರೆಯವರು 2,250 ರೂ.ಗಳನ್ನು ಪಡೆದಿದ್ದರು. ಆದರೆ 2019ರ ಅಕ್ಟೋಬರ್ 27ರಂದು ರೆಫ್ರಿಜರೇಟರ್ ಹಾಳಾಗಿರುವುದರಿಂದ ಮೃತದೇಹವನ್ನು ಕೊಂಡೊಯ್ಯುವಂತೆ ಆಸ್ಪತ್ರೆಯವರು ಮೃತರ ಸಹೋದರ ನೆಲ್ಸನ್ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಆದರೆ ಮೃತದೇಹವನ್ನು ನೆಲ್ಸನ್ ನೋಡಿದಾಗ ಅದು ಸಂಪೂರ್ಣವಾಗಿ ಕೊಳೆತು ಹೋಗಿತ್ತು. ಈ ಬಗ್ಗೆ ವಿಚಾರಿಸಿದಾಗ ಆಸ್ಪತ್ರೆಯ ಸಿಬ್ಬಂದಿ ಮೃತದೇಹ ಇರಿಸುವ ರೆಫ್ರಿಜರೇಟರ್ ವಿದ್ಯುತ್ ಸಂಚಾರ ನಿಲುಗಡೆಯ ಕಾರಣ ಹೀಗಾಗಿರುವುದಾಗಿ ತಿಳಿಸಿದ್ದರು. ಆದರೆ ಇದರಿಂದ ಮಾನಸಿಕವಾಗಿ ತೊಂದರೆಗೆ ಒಳಗಾಗಿದ್ದ ಮೃತರ ಕುಟುಂಬ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದರು.

ಕ್ರೈಸ್ತ ಸಮುದಾಯದವರಿಗೆ ಮೃತದೇಹ ದೇವಾಲಯ ಇದ್ದ ಹಾಗೆ, ಅದಕ್ಕೆ ಪವಿತ್ರ ಸ್ಥಾನದಲ್ಲಿಟ್ಟು ಅದಕ್ಕೆ ಅಂತಿಮ ನಮನ ಸಲ್ಲಿಸಲಾಗುತ್ತದೆ. ಆದರೆ ಮೃತದೇಹ ಕೊಳೆತಿರುವ ಕಾರಣ ಈ ಗೌರವ ಸಲ್ಲಿಸಲು ಅಸಾಧ್ಯವಾಗಿದ್ದು, ಇದು ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ಸೇವಾ ಲೋಪ ಎಂದು ನೆಲ್ಸನ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದರು. ಆದರೆ ಆಸ್ಪತ್ರೆಯವರು, ರೆಫ್ರಿಜರೇಟರ್ ಅನಿರೀಕ್ಷಿತವಾಗಿ ಕೆಟ್ಟುಹೋದ ಕಾರಣ ಸಮಸ್ಯೆಯಾಗಿತ್ತು. ಈ ಬಗ್ಗೆ ಆಸ್ಪತ್ರೆಯಿಂದ ಸೂಚನೆ ನೀಡಿದ ತಕ್ಷಣ ಸಂಬಂಧಫಟ್ಟವರು ಮೃತದೇಹ ಸಾಗಿಸುತ್ತಿದ್ದರೆ ಕೊಳೆಯುತ್ತಿರಲಿಲ್ಲ ಎಂಬ ಉತ್ತರವನ್ನೂ ನೀಡಿದ್ದರು. ಈ ಬಗ್ಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ವಿಚಾರಣೆ ನಡೆದು, ಆಯೋಗವು ಈ ಪ್ರಕರಣವನ್ನು ಆಸ್ಪತ್ರೆಯ ನಿರ್ಲಕ್ಷ್ಯ ಹಾಗೂ ಸೇವಾ ಲೋಪ ಎಂದು ತೀರ್ಮಾನಿಸಿ, ಮೃತರ ಸಂಬಂಧಿಕರಿಗೆ ಪರಿಹಾರ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದೆ.

ದೂರುದಾರರ ಪರವಾಗಿ ಮಂಗಳೂರಿನ ನ್ಯಾಯವಾದಿ ಎ. ದಿನೇಶ ಭಂಡಾರಿ ಹಾಗೂ ಕೆ.ಎಸ್.ಎನ್. ಅಡಿಗ ವಾದಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News