×
Ad

ಕಾಮಗಾರಿ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ ಆರೋಪ: ಶಿರಾಡಿ ಗ್ರಾ.ಪಂ. ಸದಸ್ಯ ಪೌಲೋಸ್ ಅನರ್ಹ

Update: 2026-01-24 20:53 IST

ಉಪ್ಪಿನಂಗಡಿ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾಮಗಾರಿ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಶಿರಾಡಿ ಗ್ರಾಮ ಪಂಚಾಯತ್ ಸದಸ್ಯ ಎಂ.ಕೆ.ಪೌಲೋಸ್ ಅವರನ್ನು ಸದಸ್ಯ ಸ್ಥಾನದಿಂದ ತೆಗೆದು ಹಾಕಿ ಮುಂದಿನ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಪೀಠಾಧಿಕಾರಿ (ಗ್ರಾಮ ಪಂಚಾಯತ್) ಶಿವಕುಮಾರ ಅವರು ಆದೇಶ ಹೊರಡಿಸಿದ್ದಾರೆ.

ಎಂ.ಕೆ.ಪೌಲೋಸ್ ಅವರು 2001-2002 ರಿಂದ 2020-2021ರವರೆಗೆ ನಿರಂತರವಾಗಿ ಶಿರಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಅವಧಿಯಲ್ಲಿ ಶಿರಾಡಿ ಗ್ರಾಮ ಪಂಚಾಯತ್‍ನ ಗುತ್ತಿಗೆ ಕೆಲಸವನ್ನು ಪತ್ನಿ ಮೇರಿ ಪೌಲೋಸ್‍ರವರಿಗೆ ಮಂಜೂರು ಮಾಡಿಸಿ ಲಾಭದಾಯಕ ಹುದ್ದೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಸಾಬು ಯು.ಜಿ. ಶಿರಾಡಿ ಎಂಬವರು 26.11.2021ರಂದು ಕರ್ನಾಟಕ ಲೋಕಾಯುಕ್ತ ಕಚೇರಿಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಲೋಕಾಯುಕ್ತರು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ತಂಡ ರಚಿಸಿ, ಪಡೆದಿರುವ ತನಿಖಾ ವರದಿಯಲ್ಲಿ ಎಂ.ಕೆ.ಪೌಲೋಸ್ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಕಾಮಗಾರಿಗಳನ್ನು ನಿರ್ವಹಿಸಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಅವರ ಸದಸ್ವತ್ವ ರದ್ದತಿಗೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.

ಪ್ರಾದೇಶಿಕ ಆಯುಕ್ತರ ವರದಿ; ಎಂ.ಕೆ.ಪೌಲೋಸ್ ಅವರ ಕುಟುಂಬ ಸದಸ್ಯರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಿ, ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಕಲಂ 43(ಎ)ರಡಿ ಕ್ರಮ ಜರಗಿಸಲು ಪ್ರಾದೇಶಿಕ ಆಯುಕ್ತರು ಈ ಮುಂದಿನಂತೆ ವರದಿ ಸಲ್ಲಿಸಿದ್ದರು. ಎಂ.ಕೆ.ಪೌಲೋಸ್ ಅವರು ಶಿರಾಡಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು ಅವರ ಪತ್ನಿ ಮೇರಿಯವರು ಸಿವಿಲ್ ಗುತ್ತಿಗೆ ಲೈಸನ್ಸ್ ಹೊಂದಿರುತ್ತಾರೆ. ಇವರು ಶಿರಾಡಿ ಗ್ರಾಮ ಪಂಚಾಯತ್‍ನ ಕೆಲವೊಂದು ಕಾಮಗಾರಿಗಳನ್ನು ಗುತ್ತಿಗೆಗೆ ಪಡೆದು ನಿರ್ವಹಿಸಿರುವುದು ಗ್ರಾ.ಪಂ. ದಾಖಲೆಗಳಿಂದ ಕಂಡುಬಂದಿರುತ್ತದೆ. ಎಂ.ಕೆ.ಪೌಲೋಸ್ ಅವರು ಶಿರಾಡಿ ಗ್ರಾ.ಪಂ.ನಲ್ಲಿ 2007ರಿಂದ 2010ರ ತನಕ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರ ಪತ್ನಿ ಮೇರಿ ಅವರು 2007-08ನೇ ಸಾಲಿನಲ್ಲಿ 6 ಕಾಮಗಾರಿ, 2009-10ನೇ ಸಾಲಿನಲ್ಲಿ 5 ಕಾಮಗಾರಿ, 2010-11ನೇ ಸಾಲಿನಲ್ಲಿ 1 ಕಾಮಗಾರಿ ನಿರ್ವಹಿಸಿ 5,77,938 ರೂ.ಬಿಲ್ಲಿನ ಮೊತ್ತ ಪಡೆದುಕೊಂಡಿದ್ದಾರೆ. 2015ರಿಂದ 2020ನೇ ಸಾಲಿನ ತನಕ ಸದಸ್ಯರಾಗಿದ್ದ ಅವಧಿಯಲ್ಲಿ ಅವರ ಪತ್ನಿ ಮೇರಿ ಅವರು 2015-16ನೇ ಸಾಲಿನಲ್ಲಿ 3 ಕಾಮಗಾರಿ ಮತ್ತು 2018-19ನೇ ಸಾಲಿನಲ್ಲಿ 1 ಕಾಮಗಾರಿ, 2019-20ನೇ ಸಾಲಿನಲ್ಲಿ 5 ಕಾಮಗಾರಿ ಸೇರಿ ಒಟ್ಟು ರೂ.4,72,075 ಬಿಲ್ಲು ಪಡೆದುಕೊಂಡಿದ್ದಾರೆ. 2020-21ನೇ ಸಾಲಿನಲ್ಲಿ ಮೇರಿಯವರಿಗೆ ಗ್ರಾ.ಪಂ.ನ ಕಾಮಗಾರಿ ನಿರ್ವಹಿಸಲು ಲಿಖಿತ ಆದೇಶ ನೀಡಿರುವುದು ಕಂಡು ಬಂದಿರುವುದಿಲ್ಲ. ಆದರೆ 2020-21ರಲ್ಲಿ 14 ಮತ್ತು 15ನೇ ಹಣಕಾಸು ಅನುದಾನದ 8 ಕಾಮಗಾರಿ ನಿರ್ವಹಿಸಿದ್ದು ರೂ.10,93,464 ಬಿಲ್ಲುಗಳನ್ನು ಪಡೆದುಕೊಂಡಿರುವುದು ಕಂಡು ಬಂದಿದೆ. ಮೇರಿ ಪೌಲೋಸ್ ಅವರು ತಮ್ಮ ಪತಿ ಶಿರಾಡಿ ಗ್ರಾ.ಪಂ. ಸದಸ್ಯರಾಗಿರುತ್ತಾರೆ ಎಂದು ತಿಳಿದಿದ್ದರೂ ಸಹ ಇದೇ ಗ್ರಾಮ ಪಂಚಾಯತ್‍ನ ಕೆಲವು ಕಾಮಗಾರಿಗಳನ್ನು ಪಡೆದುಕೊಂಡು ಬಿಲ್ಲುಗಳನ್ನು ಪಡೆದುಕೊಂಡಿರುವುದು ನಿಯಮಬಾಹಿರವಾಗಿರುತ್ತದೆ. ಆದ್ದರಿಂದ ಸದರಿಯವರ ವಿರುದ್ಧ ಕ್ರಮ ಜರಗಿಲು ಶಿಫಾರಸ್ಸು ಮಾಡಿದ್ದರು.

ನೋಟಿಸ್ ಸ್ವೀಕರಿಸಿದರೂ ಸಮಜಾಯಿಷಿ ಸಲ್ಲಿಸಿಲ್ಲ;

ಪ್ರಾದೇಶಿಕ ಆಯುಕ್ತರು ಸಲ್ಲಿಸಿರುವ ವಿಚಾರಣಾ ವರದಿಯನ್ನು ಅಂಗೀಕರಿಸುವ ಪೂರ್ವದಲ್ಲಿ ಎಂ.ಕೆ.ಪೌಲೋಸ್ ಅವರಿಗೆ ಉತ್ತರಿಸಲು ಸಾಕಷ್ಟು ಕಾಲಾವಕಾಶ ನೀಡಿ, ಪ್ರಾದೇಶಿಕ ಆಯುಕ್ತರು ಸಲ್ಲಿಸಿರುವ ವಿಚಾರಣಾ ವರದಿಯೊಂದಿಗೆ 27-5-2025 ಮತ್ತು 25-0-2025ರಂದು ಕಾರಣ ಕೇಳುವ ನೋಟಿಸ್‍ಗಳನ್ನು ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಜಾರಿಗೊಳಿಸಲಾಗಿದೆ. ಸದ್ರಿ ಕಾರಣ ಕೇಳುವ ನೋಟೀಸನ್ನು ಎಂ.ಕೆ.ಪೌಲೋಸ್ ಅವರು 10.7.2025ರಂದು ಖುದ್ದಾಗಿ ಸ್ವೀಕರಿಸಿದ್ದರೂ ಲಿಖಿತ ಸಮಜಾಯಿಷಿಯನ್ನು ಸಲ್ಲಿಸಿರಲಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಂ.ಕೆ.ಪೌಲೋಸ್ ಅವರ ಪತ್ನಿ ಗುತ್ತಿಗೆದಾರರಾಗಿದ್ದು ಅವರಿಗೆ ಗ್ರಾಮ ಪಂಚಾಯತ್‍ಗೆ ಸಂಬಂಧಿಸಿದ 14 ಮತ್ತು 15ನೇ ಹಣಕಾಸು ಯೋಜನೆಯಡಿ ಕಾಮಗಾರಿ ನಿರ್ವಹಿಸಲು ಅನುಕೂಲ ಮಾಡಿಕೊಟ್ಟು ನಿಯಮ ಉಲ್ಲಂಘಿಸಿ ರುತ್ತಾರೆ. ಆದ್ದರಿಂದ ಎಂ.ಕೆ.ಪೌಲೋಸ್ ಅವರನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 43(ಎ) (1), (ವಿ)ರನ್ವಯ ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಿದೆ ಹಾಗೂ ಇದೇ ಅಧಿನಿಯಮದ 43(ಎ) (ಎ)ರನ್ವಯ ಯಾವುದೇ ಪಂಚಾಯತ್‍ಗೆ ಮುಂದಿನ ಆರು ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪೀಠಾಧಿಕಾರಿ( ಗ್ರಾಮ ಪಂಚಾಯತ್) ಶಿವಕುಮಾರ್ ಅವರು ಆದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News