ಕೊರಗ ಸಮುದಾಯದ ಮತ್ತೊಂದು ಅಧ್ಯಯನದ ಅಗತ್ಯವಿದೆ: ದಿನೇಶ್ ಅಮೀನ್‌ಮಟ್ಟು
ಕೋಡಿಕಲ್‌ನಲ್ಲಿ ಕೊರಗರ ಭೂಮಿಹಬ್ಬ
ಮಂಗಳೂರು, ಆ. 18: ಕೊರಗರ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಾ ಸಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 30 ವರ್ಷಗಳಿಂದ ಸಮುದಾಯದಲ್ಲಿ ಆಗಿರುವ ಸಮಗ್ರ ಬದಲಾವಣೆಗಳ ಕುರಿತಂತೆ ಮತ್ತೊಂದು ಅಧ್ಯಯನದ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅಭಿಪಾಯಿಸಿದ್ದಾರೆ.
ದ.ಕ. ಜಿಲ್ಲಾ ಕೊರಗರ ಸಂಘ, ಡಾ.ಬಿ.ಆರ್. ಅಂಬೇಡ್ಕರ್ ಯುವ ಮಂಡಲದ ವತಿಯಿಂದ ಕೋಡಿಕಲ್‌ನ ಕುದ್ಮುಲ್ ರಂಗರಾವ್ ಕೊರಗ ಸಮುದಾಯ ಭವವನದಲ್ಲಿ ಸೋಮವಾರ ಆಯೋಜಿಸಲಾದ ಕೊರಗರ ಭೂಮಿ ಹಬ್ಬದಲ್ಲಿ ಭೂಮಿ ಚಳವಳಿಯ ಸಾಕ್ಷ್ಯ ಚಿತ್ರ ಅನಾವರಣಗೊಳಿಸಿ ಮಾತನಾಡಿದರು.
ಕೊರಗ ಸಮುದಾಯದ ಬಗ್ಗೆ ಮುಹಮ್ಮದ್ ಪೀರ್ ಅವರು 1994ರಲ್ಲಿ ಮಂಡಿಸಿದ ಮುಹಮ್ಮದ್ ಪೀರ್ ವರದಿಯ ಬಳಿಕ ಕೊರಗ ಸಮುದಾಯದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಯ ಅಧ್ಯಯನದ ಅಗತ್ಯವಿದೆ. ಕೊರಗ ಸಮುದಾಯ ಇದನ್ನು ತಮ್ಮ ಪ್ರಮುಖ ಬೇಡಿಕೆಯಾಗಿಸಿ ಸರಕಾರದ ಮುಂದಿಡಬೇಕು ಎಂದು ಅವರು ಕರೆ ನೀಡಿದರು.
ಸಮುದಾಯದಲ್ಲಿ ಶಿಶು ಮರಣ ಯಾಕಿಷ್ಟು ಆಗುತ್ತಿದೆ ಎಂಬ ಬಗ್ಗೆ ವೈಜ್ಞಾನಿಕ ಕಾರಣವನ್ನು ತಿಳಿಯುವ ಅಗತ್ಯವಿದೆ. ಇದಕ್ಕೆ ವಂಶವಾಹಿನಿ ಅಥವಾ ಬೇರೆ ಕಾರಣಗಳಿವೇ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚುವ ನಿಟ್ಟಿನಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆ ನಡೆಸಿ ವರದಿ ತಯಾರಿಸಬೇಕು ಎಂದವರು ಹೇಳಿದರು.
ಉನ್ನತ ಶಿಕ್ಷಣಕ್ಕಾಗಿ ಮಕ್ಕಳಿಗೆ ಹಲವು ಯೋಜನೆಗಳ ಮೂಲಕ ಪ್ರಯೋಜನ ಸಿಗುತ್ತಿದೆ. ಆದರೆ ಪದವಿ, ಸ್ನಾತಕೋತ್ತರ ಪದವಿ ಆದವರಿಗೆ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಶೇ. 2ರಷ್ಟು ಸಿಗುತ್ತಿರುವ ಸರಕಾರಿ ಉದ್ಯೋಗಕ್ಕೆ ಪೂರಕವಾಗಿ ತರಬೇತಿಯ ಅಗತ್ಯವಿದೆ. ಕೇವಲ ಶಿಕ್ಷಣ ದೊರೆತರೆ ಸಾಲದು, ಉದ್ಯೋಗ ತರಬೇತಿ ಯೋಜನೆಗಳು ಇಂದಿನ ಅಗತ್ಯವಾಗಿದೆ ಎಂದವರು ಹೇಳಿದರು.
ಕೊರಗ ಸಮುದಾಯದ ಮೂಲಕಸಬು ಬುಟ್ಟಿ ಹೆಣೆಯುವುದು. ಆದರೆ ಇಂದು ಆ ವಸ್ತುಗಳಿಗೆ ಬೇಡಿಕೆ ಇಲ್ಲವಾಗಿದೆ. ಹಾಗಾಗಿ ಇಂದಿನ ಪ್ರಚಲಿತ ಉದ್ಯಮದ ಬಗ್ಗೆಯೂ ಸಮುದಾಯದ ಯುವಕರು ಆಸಕ್ತಿ ತೋರಿಸಬೇಕು ಎಂದು ಅಮೀನ್‌ಮಟ್ಟು ಹೇಳಿದರು.
ಸದ್ಯ ನಿಷೇಧಿಸಲ್ಪಟ್ಟಿರುವ ಅಜಲು ಪದ್ಧತಿಯೂ ಹಿಂದೆ ಸಂಸ್ಕೃತಿಯ ಹೆಸರಿನಲ್ಲಿ ಆಚರಿಸಲ್ಪಡುತ್ತಿತ್ತು. ಹಾಗಾಗಿ ಸಮುದಾಯದ ಸಂಸ್ಕೃತಿ ರಕ್ಷಣೆಯ ಸಂದರ್ಭದಲ್ಲಿಯೂ ಯಾವುದು ಸಂಸ್ಕೃತಿ, ಯಾವುದು ಆಚರಣೆ ಎಂಬ ಬಗ್ಗೆಯೂ ಸ್ಪಷ್ಟತೆ ಇರಬೇಕು. ಇತರ ಬಲಿಷ್ಟ ಸಮುದಾಯಗಳಂತೆ ತಮ್ಮ ಜನಸಂಖ್ಯೆಯ ಆಧಾರದಲ್ಲಿ ಕೊರಗ ಸಮುದಾಯ ತನ್ನ ನಿಮ್ಮ ಪಾಲಿನ ಅಧಿಕಾರ, ಪ್ರಾತಿನಿಧ್ಯ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಇದಕ್ಕೆ ಇತರ ಹೋರಾಟ ಗಾರರು ಕೈಜೋಡಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ಸಭಾ ಕಾರ್ಯವನ್ನುದ್ದೇಶಿಸಿ ಮಾತನಾಡಿದ ಕೊರಗ ಸಮುದಾಯದ ಮುಖಂಡ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಪಾಂಗಾಳ ಬಾಬು ಕೊರಗ, ಕೊರಗ ಸಮುದಾಯ ತಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡುತ್ತಲೇ ಬಂದಿದೆ. 1990ರಿಂದ ಭೂಮಿಗಾಗಿ ಹೋರಾಟ ಹೆಚ್ಚು ಚುರುಕು ಪಡೆಯಿತು. ತಮ್ಮ ಭೂಮಿಯ ಹಕ್ಕಿಗಾಗಿ ಬೀದಿ ಗಿಳಿದು ಹೋರಾಟ ನಡೆಸುವ ಸ್ಥಿತಿ ಎದುರಾಗಿತ್ತು. ಈಗ ಕೊರಗ ಸಮುದಾಯ ಸಂಘಟಿತವಾಗಿದ್ದು, ಇದು ಮತ್ತಷ್ಟು ಬಲಯುತವಾಗುವುದರೊಂದಿಗೆ ಮುಂದುವರಿಯಬೇಕು. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಮುಂದೆ ಕೊಂಡೊಯ್ಯಬೇಕಾದ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಕೊರಗರ ಜಿಲ್ಲಾ ಸಂಘದ ಅಧ್ಯಕ್ಷ ಎಂ.ಸುಂದರ ಬೆಳುವಾಯಿ ಅಧ್ಯಕ್ಷತೆ ವಹಿಸಿದ್ದರು.
ಸಮುದಾಯದ ಮುಖಂಡರಾದ ಅಣ್ಣಿ ಕೊರಗ(ಸಂದೀಪ್) ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮುದಾಯದ ಮುಖಂಡ ಗಣೇಶ್ ಬಾರ್ಕೂರು ಧ್ವಜಾರೋಹಣ ನೆರವೇರಿಸಿದರು.
ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಯೋಜನಾ ಸಮನ್ವಯ ಅಧಿಕಾರಿ (ಐಟಿಡಿಪಿ)ಬಸವರಾಜ್ ಎಚ್.ಸಿ., ಸಮುದಾಯದ ಮುಖಂಡ ಬಾಲರಾಜ್ ಕೋಡಿಕಲ್, ಉಡುಪಿ ಕೊರಗ ಸಂಘಟನೆಯ ಸದಸ್ಯೆ ಸುಮಂಗಳ ಮಧುವನ, ಪ್ರಮುಖರಾದ ಶಶಿಕಲಾ, ಸಂಜೀವ ಕೋಡಿಕಲ್, ರಾಮಚಂದ್ರ ನಾರ್ಣಕಜ್ಜೆ ಮತ್ತಿತರರು ಉಪಸ್ಥಿತರಿದ್ದರು. ರಮೇಶ್ ಗುಂಡಾವುಪಡವು ಕಾರ್ಯಕ್ರಮ ನಿರೂಪಿಸಿದರು.