×
Ad

ಮಕ್ಕಳ ಮೇಲೆ ಆಗುವ ಯಾವುದೇ ರೀತಿಯ ಲೈಂಗಿಕ‌ ದೌರ್ಜನ್ಯ ಶಿಕ್ಷಾರ್ಹ: ಅಭಯ್ ಧನಪಾಲ್ ಚೌಗುಲೆ

Update: 2024-07-13 15:16 IST

ಮಂಗಳೂರು: ಮಕ್ಕಳ ಮೇಲೆ ಆಗುವ ಯಾವುದೇ ರೀತಿಯ ಲೈಂಗಿಕ‌ ದೌರ್ಜನ್ಯವು ಶಿಕ್ಷಾರ್ಹವಾಗಿದೆ. ಅಂತಹ ತಪ್ಪುಗಳು ಸಂಭವಿಸಿದೆ ಎಂದು ಗೊತ್ತಾದ ಕೂಡಲೇ ಮಕ್ಕಳು ತಮ್ಮ ಪೋಷಕರ ಗಮನಕ್ಕೆ ತಂದು ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬಹುದಾಗಿದೆ ಎಂದು ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಮತ್ತು ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಹಾಗೂ ಪ್ರಸಕ್ತ ಖಾಯಂ ಲೋಕ ಅದಾಲತ್ ಅಧ್ಯಕ್ಷ ಅಭಯ್ ಧನಪಾಲ್ ಚೌಗುಲೆ ತಿಳಿಸಿದರು.

ಶುಕ್ರವಾರ ಕೃಷ್ಣಾಪುರ 4ನೇ ಬ್ಲಾಕ್ ನ ಚೈತನ್ಯ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಬಾಲ್ಯ ವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಶಾಲೆಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವುದಕ್ಕಾಗಿಯೇ ಭಾರತ ಸರಕಾರವು 2012 ರಲ್ಲಿ ಪೋಕ್ಸೋ ಕಾಯ್ದೆ ಜಾರಿಗೆ ತಂದಿದೆ. ಈ ಮೂಲಕ ಅಪ್ರಾಪ್ತ ವಯಸ್ಕರ ಮೇಲೆ ಆಗುವ ಲೈಂಗಿಕ ದೌರ್ಜನ್ಯಕ್ಕೆ ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ವಿಧಿಸುವ ಅವಕಾಶವಿದೆ. ಮಕ್ಕಳು ಇಂತಹ ಕಾಯ್ದೆ ಬಗ್ಗೆ ಅರಿತು ತಮ್ಮ ಮೇಲಾಗುವ ದೌರ್ಜನ್ಯವನ್ನು ತಡೆಗಟ್ಟಿದರೆ ಇದರಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ ಎಂದರು.

ಇನ್ನು ಬಾಲ್ಯವಿವಾಹ ಅನ್ನೋದು ಬಹುದೊಡ್ಡ ಸಾಮಾಜಿಕ ಪಿಡುಗು ಆಗಿದ್ದು, ಮಕ್ಕಳ ಭವಿಷ್ಯಕ್ಕೆ ಆತಂಕವಾಗಿದೆ. ಎಳೆಯ ಪ್ರಾಯದಲ್ಲಿಯೇ ಮಕ್ಕಳನ್ನು ಮದುವೆಗೆ ಒಪ್ಪಿಸುವುದು ಕೂಡಾ ಶಿಕ್ಷಾರ್ಹ ಅಪರಾಧ. ಇಂತಹ ಘಟನೆ ನಡೆಯುತ್ತಿದೆ ಎಂದು ಗೊತ್ತಾದ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದು ಇಂತಹ ಪಿಡುಗನ್ನು ಸಮಾಜದಿಂದ ನಿರ್ಮೂಲನೆ ಮಾಡಲು ಕೈ ಜೋಡಿಸಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ವಕೀಲ ಉಮರ್ ಫಾರೂಕ್ ಮುಲ್ಕಿ, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಕೆ .ಎ ಖಾದರ್, ಸಂಚಾಲಕ ಎಂ.ಎ ಹನೀಫ್, ಕಾರ್ಯದರ್ಶಿ ಶೇಕ್ ಅಹ್ಮದ್ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News