ಮಂಗಳೂರು: ಕೆಂಪುಕಲ್ಲಿನ ದರ ನಿಗದಿಗೆ ಎಸ್‌ಒಪಿ ವಿಧಾನಕ್ಕೆ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕೆಂಪು ಕಲ್ಲು ಗಣಿಗಾರಿಕೆಗೆ ಸಂಬಂಧಿಸಿ ರಾಜ್ಯ ಸರಕಾರ ರಾಜಧನ ಇಳಿಕೆ ಮಾಡಿರುವುದನ್ನು ಸಮರ್ಪಕವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುವವರು, ಉದ್ಯಮಿಗಳು, ಸಿವಿಲ್ ಗುತ್ತಿಗೆದಾರರ ಸಭೆ ನಡೆಸಿ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನೇತೃತ್ವದ ತಂಡ ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ವೈಜ್ಞಾನಿಕವಾಗಿ ಕೆಂಪು ಕಲ್ಲಿನ ದರ ನಿಗದಿ ಮಾಡಲು ಸೂಕ್ತ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಅಳವಡಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ದ.ಕ. ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ವ್ಯಾಪಕವಾಗಿ ಬಳಸುವ ಕೆಂಪುಕಲ್ಲಿನ ದುಬಾರಿ ದರದ ಕುರಿತು ರಾಜ್ಯ ಸರಕಾರ ಗಣಿಗಾರಿಕೆ ಮೇಲೆ ವಿಧಿಸಿದ್ದ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದೆ. ಆದರೆ ಕೆಂಪು ಕಲ್ಲಿನ ದರ ಮಾತ್ರ ದುಬಾರಿಯಾಗಿದೆ. ಹಿಂದೆ 30 ರೂ.ಗಳಿಗೆ ಸಿಗುತ್ತಿದ್ದ ಕಲ್ಲಿನ ದರ ರಾಜಸ್ವ ಹೆಸರಿನಲ್ಲಿ 50ರಿಂದ 55 ರೂ. ವಸೂಲು ಮಾಡುತ್ತಿದ್ದಾರೆ. ಇದರಿಂದ ಬಡ, ಮಧ್ಯ ವರ್ಗಗಳವರಿಗೆ ಮನೆ ಕಟ್ಟಲು ತೊಂದರೆಯಾಗಿದೆ. ಈ ಬಗ್ಗೆ ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಸಾಕಷ್ಟು ದೂರುಗಳು ಬಂದಿದ್ದು, ಈ ಬಗ್ಗೆ ಸಭೆ ನಡೆಸಿ ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸಲ್ಲಿಸಿದ ತಂಡದಲ್ಲಿ ಮುಖಂಡರಾದ ಪದ್ಮರಾಜ್ ಪೂಜಾರಿ, ರಾಜಪೂಜಾರಿ, ಕಿರಣ್ ಬಡ್ಲೆಗುತ್ತು ಮೊದಲಾದವರು ಉಪಸ್ಥಿತರಿದ್ದರು.