ನ.23 ರಂದು ‘ಅಸ್ಮಿತಾ’ ಮಹಿಳೆಯರ ಕಿಕ್ ಬಾಕ್ಸಿಂಗ್ ಕ್ರೀಡಾಕೂಟ
ಮಂಗಳೂರು, ನ.21: ರಾಜ್ಯಮಟ್ಟದ ಖೇಲೋ ಇಂಡಿಯಾ ಮಹಿಳೆಯರ ಕಿಕ್ ಬಾಕ್ಸಿಂಗ್ ಕ್ರೀಡಾಕೂಟ ‘ಅಸ್ಮಿತಾ’ ನ.23ರಂದು ಮಂಗಳೂರಿನ ಕಂಕನಾಡಿಯಲ್ಲಿರುವ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಕ್ರೀಡಾಕೂಟವನ್ನು ಬೆಳಗ್ಗೆ 9ಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಲಿದ್ದು ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತಾಧಿಕಾರಿ ವಂ.ಫಾ. ಮೈಕಲ್ ಸಾಂತುಮಯೋರ್ ಆಶೀರ್ವಚನ ನೀಡಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ದಕ್ಷಿಣ ಕನ್ನಡ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್‌ನ ಚೇರ್‌ಮೆನ್ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.
ದ.ಕ ಜಿಲ್ಲೆಯ 150 ಮಂದಿ ಸೇರಿದಂತೆ ಒಟ್ಟು 300 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಾಕ್ಸಿಂಗ್ ಮತ್ತು ಕರಾಟೆಯ ಸಮ್ಮಿಳಿತವನ್ನು ಒಳಗೊಂಡ ಕಿಕ್ ಬಾಕ್ಸಿಂಗ್ ಜಪಾನ್ ನಲ್ಲಿ ಉಗಮವಾಗಿ ಯುರೋಪ್ ಮತ್ತು ಅಮೆರಿಕಾದಲ್ಲಿ ಪ್ರಸಿದ್ದವಾಗಿದೆ. ಇದು ಅಂತಾರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್‌ನ ಮಾನ್ಯತೆ ಪಡೆದಿದೆ. ಭಾರತ ಸರಕಾರ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ ಕೂಡ ಮಾನ್ಯತೆ ನೀಡಿವೆ. ಖೇಲೋ ಇಂಡಿಯಾದ ಮೂಲಕ ಭಾರತೀಯ ಕ್ರೀಡಾ ಪ್ರಾಧಿಕಾರ ಅಸ್ಮಿತಾ ಹೆಸರಿನಲ್ಲಿ ಹೆಣ್ಣು ಮಕ್ಕಳಿಗಾಗಿ ನಗರ/ ಜಿಲ್ಲಾ ಮಟ್ಟದಲ್ಲಿ, ಅನಂತರ ರಾಜ್ಯ, ವಲಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸುತ್ತದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆ ನಡೆಸುವ ಅವಕಾಶ ದ.ಕ ಸಂಸ್ಥೆಗೆ ದೊರೆತಿದೆ. ದ.ಕ ತಂಡ ರಾಜ್ಯದಲ್ಲಿ ಮುಂಚೂಣಿಯ ತಂಡವಾಗಿದೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯ ಹಲವಾರು ಮಂದಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಪದಕ ವಿಜೇತರಾಗಿದ್ದಾರೆ ಎಂದು ಸತ್ಯಜಿತ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ನಿತಿನ್ ಎನ್. ಸುವರ್ಣ, ಕಾರ್ಯದರ್ಶಿ ಸಂಪತ್ ಕುಮಾರ್, ಐಕೆಎಂಎ ಶಿಕ್ಷಕ ಶಿವಪ್ರಸಾದ್, ಸದಸ್ಯ ನಿರಂಜನ್ ಎಂ, ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಆಟಗಾರ ರಾಜೇಶ್ ಕೆ. ಉಪಸ್ಥಿತರಿದ್ದರು.