ಯೂಟ್ಯೂಬ್ ವರದಿಗಾರ ಮೇಲೆ ಹಲ್ಲೆ; ವಕೀಲರ ಒಕ್ಕೂಟ ಖಂಡನೆ
Update: 2025-08-07 14:55 IST
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ನಡೆದ ಸರಣಿ ಅತ್ಯಾಚಾರ, ಅನಾಚಾರ, ಅಸಹಜ ಸಾವುಗಳ ಬಗ್ಗೆ ಎಸ್.ಐ.ಟಿ ನಡೆಸುತ್ತಿರುವ ತನಿಖೆಯ ಬಗ್ಗೆ ಸತತವಾಗಿ ನಿಷ್ಪಕ್ಷಪಾತ ವರದಿಯನ್ನು ನೀಡುತ್ತಿರುವ ಯೂಟ್ಯೂಬ್ ವರದಿಗಾರರಾದ ಅಜಯ್ ಅಂಚನ್ ಮತ್ತು ಇತರ ಮೂವರ ಮೇಲೆ ನಡೆಸಿದ ಹಲ್ಲೆಯ ಬಗ್ಗೆ ಅಖಿಲ ಭಾರತ ವಕೀಲರ ಒಕ್ಕೂಟ, ದ.ಕ.ಜಿಲ್ಲಾ ಸಮಿತಿ, ಖಂಡನೆ ವ್ಯಕ್ತಪಡಿಸಿದೆ.
ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಿದ ಹಲ್ಲೆ ಇದಾಗಿದ್ದು, ಎಸ್.ಐ.ಟಿ.ಯ ಕಾನೂನು ಬದ್ಧ ಗಂಭೀರ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರದಿಂದ ಕೂಡಿರುವುದಾಗಿದೆ. ಕಾನೂನು ಕೈಗೆ ತೆಗೆದು ಕೊಂಡ ಹಲ್ಲೆಕೋರರನ್ನು ಕೂಡಲೇ ಬಂಧಿಸಿ ಅಗತ್ಯ ಕಾನೂನು ಕ್ರಮ ಜರಗಿಸುವಂತೆ ಸರಕಾರವನ್ನು ವಕೀಲರ ಒಕ್ಕೂಟವು ಒತ್ತಾಯಿಸುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.