ಆ.18: ಶೂನ್ಯ ನೆರಳು ದಿನ
ಫೈಲ್ ಫೋಟೊ
ಮಂಗಳೂರು,ಆ.17: ಆ.18 (ಶುಕ್ರವಾರ) ಶೂನ್ಯ ನೆರಳಿನ ದಿನವಾಗಿದ್ದು, ಬೆಳಗ್ಗೆ ಸೂರ್ಯನ ಬೆಳಕು ವ್ಯಕ್ತಿಯ ಮೇಲೆ ಬಿದ್ದಾಗ, ಆ ನೆರಳು ಉದ್ದವಾಗಿರುತ್ತದೆ. ಮಧ್ಯಾಹ್ನವಾಗುತ್ತಿದ್ದಂತೆ (ಮಧ್ಯಾಹ್ನ 12:35) ನೆರಳು ಶೂನ್ಯವಾಗುತ್ತದೆ. ಪುನಃ ಸಾಯಂಕಾಲ ನೆರಳು ಉದ್ದವಾಗುತ್ತದೆ. ಪ್ರತಿಯೊಬ್ಬರು ಇದನ್ನು ವೀಕ್ಷಿಸಬಹುದು. ಇಂತಹ ವಿದ್ಯಮಾನ ವರ್ಷದಲ್ಲಿ ಎರಡು ಬಾರಿ ಮಾತ್ರ ಸಂಭವಿಸುತ್ತದೆ.
ಮಂಗಳೂರಿನಲ್ಲಿ ಆಗಸ್ಟ್ 18 ಮತ್ತು ಎಪ್ರಿಲ್ 24 ಶೂನ್ಯ ದಿನವಾಗಿರುತ್ತದೆ. ಈ ಶೂನ್ಯ ನೆರಳಿನ ವಿದ್ಯಮಾನವು ಉತ್ತರ ಅಕ್ಷಾಂಶ 23.5ಡಿಗ್ರಿ ಮತ್ತು ದಕ್ಷಿಣ ಅಕ್ಷಾಂಶ 23.5 ಡಿಗ್ರಿ ಒಳಗಿನ ಸ್ಥಳಗಳಲ್ಲಿ ಅಕ್ಷಾಂಶದ ಮೇಲೆ ಹೊಂದಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಸಂಭವಿಸುತ್ತದೆ.
ಈ ವಿದ್ಯಮಾನ ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಿಂದ ಕೆಲವು ಪ್ರಾತ್ಯಕ್ಷಿಕೆಗಳನ್ನು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದೆ.ಆಸಕ್ತರಿಗೆ ವೀಕ್ಷಿಸಲು ಅವಕಾಶವಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.