ಬೈಲೂರು: ಪಾನಮತ್ತ ಯುವಕನಿಂದ ವಾಹನ ಚಾಲನೆ; ತರಕಾರಿ ಅಂಗಡಿಗೆ ನುಗ್ಗಿದ ಕಾರು
ಬೈಲೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ತರಕಾರಿ ಅಂಗಡಿಗೆ ಕಾರೊಂದು ಢಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದ್ದು, ಕಾರು ಚಾಲಕ ಮದ್ಯಪಾನ ಮಾಡಿದ್ದಾನೆ ಎಂದು ಸ್ಥಳೀಯರು ದೂರಿದ್ದಾರೆ.
ಬೆಂಗಳೂರಿನಿಂದ ಮಲ್ಪೆಗೆ ಹೋಗುತ್ತಿದ್ದ ಕಾರು ಬೈಲೂರು ಪೇಟೆಯಲ್ಲಿ ತರಕಾರಿ ಅಂಗಡಿಗೆ ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಬೆಂಗಳೂರಿನಿಂದ 4 ಮಂದಿ ಯುವಕರು ಕಾರಿನಲ್ಲಿ ಮಲ್ಪೆಗೆ ಕಾರ್ಕಳ ಮೂಲಕ ಹೋಗುತ್ತಿದ್ದಾಗ ಬೈಲೂರಿನಲ್ಲಿ ಈ ದುರ್ಘಟನೆ ನಡೆದಿದೆ. ಕಾರಿನಲ್ಲಿ ಮದ್ಯದ ಬಾಟಲಿಗಳಿದ್ದು ಎಲ್ಲರೂ ಮದ್ಯಪಾನ ಮಾಡಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಾರು ಢಿಕ್ಕಿಯಿಂದ ಅಂಗಡಿಯ ಗೋಡೆ ಬಿದ್ದಿದೆ.
ತಪ್ಪಿಸಿಕೊಳ್ಳಲು ಯತ್ನ: ಕಾರು ಢಿಕ್ಕಿ ಹೊಡೆದ ನಂತರ ಯುವಕರು ತಪ್ಪಿಸಿಕೊಲ್ಲುವ ಯತ್ನ ನಡೆದಿತ್ತು ಎನ್ನಲಾಗಿದ್ದು, ಅದಕ್ಕಾಗಿ ಕಾರನ್ನು ಹಿಮ್ಮುಖ ಚಾಲನೆ ಮಾಡಿ, ಮುಂದೆ ಚಲಿಸುವ ಸಂದರ್ಭ ಕಾರಿನ ಟೈಯರ್ ಪಂಕ್ಚರ್ ಆಗಿದ್ದರಿಂದ ಕಾರು ಅಲ್ಲೇ ನಿಂತುಕೊಂಡಿತು. ಇದರಿಂದ ಅವರ ತಪ್ಪಿಸಿಕೊಳ್ಳುವ ಯತ್ನ ವಿಫಲವಾಯಿತು ಎಂದು ಸ್ಥಳೀಯರು ದೂರಿದ್ದಾರೆ.
ತರಕಾರಿ ಅಂಗಡಿಯಲ್ಲಿ ಹೆಚ್ಚಿನ ಸಮಯದಲ್ಲಿ ಜನ ವ್ಯಾಪಾರ ಮಾಡುತ್ತಿರುತ್ತಾರೆ. ಆದರೆ ಆ ಹೊತ್ತಿನಲ್ಲಿ ಯಾರು ಇಲ್ಲದೇ ಇದ್ದುದರಿಂದ ಆಗುತ್ತಿದ್ದ ದೊಡ್ಡ ಅಪಾಯ ತಪ್ಪಿದಂತಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.